ಬೆಂಗಳೂರು: ನಮ್ಮ ಬತ್ತಳಿಕೆಯಲ್ಲಿ ಅಸ್ತ್ರಗಳಿವೆ. ಅದು ಅವರಿಗೂ ಗೊತ್ತಿದೆ. ಅವರ ಬತ್ತಳಿಕೆಯಲ್ಲಿ ಏನಿದೆ ಎಂಬುದು ನಮಗೂ ಗೊತ್ತಿದೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯಸಭೆ ಚುನಾವಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಮೈತ್ರಿ ಪಕ್ಷದವರು ಏನು ಚರ್ಚೆ ಮಾಡಿದ್ದಾರೆ ಎಂಬುದು ನಮಗೆ ಗೊತ್ತಿದೆ. ಎಲ್ಲಾ ಪಕ್ಷದ ಮೇಲೆ ನಮಗೆ ನಿಗಾ ಇದೆ. ಜನಾರ್ಧನ ರೆಡ್ಡಿ ಸೇರಿ ನಾವು ಪಕ್ಷೇತರರ ಜೊತೆ ಮಾತನಾಡಿದ್ದೇವೆ. ಅದರ ಬಗ್ಗೆ ನಾನು ಬಹಿರಂಗ ಪಡಿಸಲ್ಲ ಎಂದರು. ಸೋಮವಾರ ಸದನ ಮುಗಿದ ತಕ್ಷಣ ಹಿಲ್ಟನ್ ರೆಸಾರ್ಟ್ನಲ್ಲಿ ಶಾಸಕಾಂಗ ಸಭೆ ನಡೆಸಲಿದ್ದೇವೆ. ಅಲ್ಲಿ ರಾಜ್ಯಸಭೆ ಚುನಾವಣೆ ಮಾಕ್ ಮತದಾನ ನಡೆಸಲಿದ್ದೇವೆ. ನಾವು ಮನೆಯನ್ನು ಬಿಗಿಯಾಗಿ ಇಟ್ಕೊತೀವಿ. ಈಗ ಯಾವುದನ್ನೂ ಬಹಿರಂಗ ಪಡಿಸಲ್ಲ ಎಂದು ತಿಳಿಸಿದರು.
ಬಿಜೆಪಿ ಸದನದಲ್ಲಿ ನಿರ್ಣಯ ಮಂಡಿಸಿದ ವಿಚಾರಕ್ಕೆ ಪ್ರತಿಕ್ರಿಯೆ ನೀಡಿದ ಅವರು ಎಲ್ಲಿ ನಿರ್ಣಯ ಮಂಡಿಸಿದರು?. ಸದನ ಸರಿ ಇಲ್ಲದಿದ್ದಾಗ ಅವರು ನಿರ್ಣಯ ಮಂಡಿಸಿದ್ದಾರೆ. ನಮ್ಮ ನೋವನ್ನು ಹೇಳಿಕೊಂಡಿದ್ದೇವೆ. ಕೇಂದ್ರ ಬಿಜೆಪಿ ಸರ್ಕಾರದ ಅನ್ಯಾಯದ ಬಗ್ಗೆ ಹೇಳಿದ್ದೇವೆ. ನಾವೆಲ್ಲ ಸೇರಿ ಒಟ್ಟಿಗೆ ಹೋರಾಟ ಮಾಡಬೇಕು ಎಂದು ಬೊಮ್ಮಾಯಿ ಸಿಎಂ ಆಗಿದ್ದಾಗ ಸದನದಲ್ಲೇ ಹೇಳಿದ್ದರು. ನಮ್ಮ ಪಾಲು, ನಮ್ಮ ಹಕ್ಕು ಕೇಳುತ್ತಿದ್ದೇವೆ ಅದನ್ನು ಸದನದಲ್ಲಿ ಹಕ್ಕೊತ್ತಾಯ ಮಾಡಿದ್ದೇವೆ ಎಂದರು.
ಇದನ್ನೂ ಓದಿ: ಈ ರಾಜ್ಯವನ್ನು ಭಿಕ್ಷುಕರ ರಾಜ್ಯವನ್ನಾಗಿ ಮಾಡಲು ಹೊರಟಿದ್ದೀರಿ: ಹೆಚ್ಡಿಕೆ ವಾಗ್ದಾಳಿ