ರಾಮನಗರ: ಕುಮಾರಣ್ಣನ ಆಡಳಿತ ಸ್ವಂತಕ್ಕೆ, ನನ್ನ ಆಡಳಿತ ತಾಲೂಕು ಹಾಗೂ ಜನರಿಗಾಗಿ. ನನ್ನ ಆಡಳಿತವೇ ಬೇರೆ, ಕುಮಾರಣ್ಣನ ಆಡಳಿತವೇ ಬೇರೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ವಾಗ್ದಾಳಿ ನಡೆಸಿದರು.
ಚನ್ನಪಟ್ಟಣದ ಆದಿಲ್ ಷಾ ಮೈದಾನದಲ್ಲಿ ಶನಿವಾರ ವಿವಿಧ ಯೋಜನೆಗಳ ಶಂಕುಸ್ಥಾಪನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಫಲಾನುಭವಿಗಳಿಗೆ ದಾಖಲೆ ಪತ್ರ ವಿತರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.
ಕಳೆದ ಮೂರು ತಿಂಗಳಲ್ಲಿ ಚನ್ನಪಟ್ಟಣ ತಾಲೂಕಿನಲ್ಲಿ ₹500 ಕೋಟಿ ಮೊತ್ತದ ಯೋಜನೆಗಳ ಗುದ್ದಲಿ ಪೂಜೆ ನಡೆದಿದೆ. ಈ ತಾಲೂಕಿನಲ್ಲಿ ಆಗುತ್ತಿರುವ ಬದಲಾವಣೆಯನ್ನು ನೀವು ಕಿವಿಯಲ್ಲಿ ಕೇಳುವುದು ಮಾತ್ರವಲ್ಲ, ಕಣ್ಣಾರೆ ನೋಡುತ್ತಿದ್ದೀರಿ. ಹಳೆ ಶಾಸಕರು ನಿಮ್ಮನ್ನು ಬಿಟ್ಟು ಹೋಗಿದ್ದಾರೆ. ಅವರಿಗೂ ಚನ್ನಪಟ್ಟಣಕ್ಕೂ ಸಂಬಂಧವಿಲ್ಲ. ನನ್ನ ಮತ್ತು ಚನ್ನಪಟ್ಟಣ ನಡುವಣ ಸಂಬಂಧ ಭಕ್ತ ಹಾಗೂ ಭಗವಂತ ನಡುವಿನ ಸಂಬಂಧ. ಈ ಭಾಗದವರು ನಾಲ್ಕು ಬಾರಿ ನನ್ನನ್ನು ವಿಧಾನಸಭೆಗೆ ಆರಿಸಿದ್ದಾರೆ ಎಂದರು.
ಚನ್ನಪಟ್ಟಣದ ಅಭಿವೃದ್ಧಿಗೆ ದೀಪ ಹಚ್ಚಿದ್ದೇವೆ. ಕೊಟ್ಟ ಮಾತಿನಂತೆ ಚನ್ನಪಟ್ಟಣವನ್ನು ಅಭಿವೃದ್ಧಿ ಪುಟಕ್ಕೆ ಸೇರಿಸಿ ಮುನ್ನುಡಿ ಬರೆಯುತ್ತಿದ್ದೇವೆ. ಕರ್ನಾಟಕ ಸರ್ಕಾರ ನಿಮ್ಮ ಮನೆ ಬಾಗಿಲಿಗೆ ಬಂದಿದೆ. ಚನ್ನಪಟ್ಟಣವನ್ನು ಚಿನ್ನದಂತ ನಾಡು ಮಾಡಲು ತೀರ್ಮಾನಿಸಿದ್ದೇವೆ. ನಾವು ಕೊಟ್ಟ ಮಾತು ಉಳಿಸಿಕೊಳ್ಳುತ್ತಾ ಬಂದಿದ್ದೇವೆ. ನಿಮ್ಮ ಮನೆ ಬಾಗಿಲಿಗೆ ಬಂದಾಗ 27 ಸಾವಿರ ಅರ್ಜಿ ಬಂದಿದ್ದು, ಅದರಲ್ಲಿ 18 ಸಾವಿರ ಅರ್ಜಿಗಳು, ಮನೆ ಹಾಗೂ ನಿವೇಶನ ಕೋರಿವೆ. ಈ ತಾಲೂಕಿನಲ್ಲಿ ನಿವೇಶನ ಹಂಚಿಕೆ ಮಾಡಲು 170 ಎಕರೆ ಜಾಗ ಗುರುತಿಸಲಾಗಿದೆ. ಇನ್ನೂ 150 ಎಕರೆ ಖರೀದಿಗೆ ನಾವು ಸಿದ್ಧವಾಗಿದ್ದೇವೆ ಎಂದು ತಿಳಿಸಿದರು.
ಅರ್ಜಿ ಕೊಟ್ಟಿರುವ ಎಲ್ಲರಿಗೂ ನಿವೇಶನ: ಅರ್ಜಿ ಹಾಕಿರುವ ಎಲ್ಲರಿಗೂ ನಿವೇಶನ, ಮನೆ ನೀಡಲು ನಮಗೆ ಆಸೆ ಇದೆ. ಸಚಿವ ಜಮೀರ್ ಅಹ್ಮದ್ ಅವರು 5,000 ಮನೆ ಮಂಜೂರು ಮಾಡಿದ್ದಾರೆ. ಈಗ ನಿವೇಶನದ ಬದಲು 500 ಚದರ ಅಡಿ ಮನೆ ಕಟ್ಟಿಕೊಡೋಣ ಎಂದು ಹೇಳಿದ್ದಾರೆ. ಇದಕ್ಕೆ ನಿಮ್ಮ ಒಪ್ಪಿಗೆ ಇದೆಯಾ?. ವಿಶೇಷ ಅನುದಾನ ತಂದು ಪ್ರತಿ ವಾರ್ಡ್ನಲ್ಲಿ ₹1 ಕೋಟಿ ಅನುದಾನದ ಯೋಜನೆಗಳು ನಡೆಯುತ್ತಿವೆ ಎಂದರು.
ಮುಂದಿನ ಉಪಚುನಾವಣೆ ಟಿಕೆಟ್ ವಿಚಾರವಾಗಿ ನಾನು ಈ ವೇದಿಕೆ ಮೇಲೆ ಮಾತನಾಡುವುದಿಲ್ಲ. ಇಲ್ಲಿ ನಾನೇ ಅಭ್ಯರ್ಥಿ. ನಾನು ಅಧ್ಯಕ್ಷನಾಗಿ ಯಾರಿಗೆ ಟಿಕೆಟ್ ನೀಡುತ್ತೇನೋ ಅವರಿಗೆ ಬೆಂಬಲ ನೀಡಿ ಎಂದು ಮನವಿ ಮಾಡಿದರು.
ಹೆಚ್ಡಿಕೆಗೆ ಟಾಂಗ್: ನೀವು ಮತ ಹಾಕಿದ್ದೂ ಆಯಿತು, ಅವರು ಊರು ಬಿಟ್ಟಿದ್ದೂ ಆಯಿತು. ಚನ್ನಪಟ್ಟಣದಲ್ಲಿ ಏನಿದ್ದರೂ ನಮ್ಮ ಹಾಗೂ ನಿಮ್ಮ ಸಂಬಂಧ. ನಾನು ಹುಟ್ಟಿದ್ದು ಇಲ್ಲಿ, ಸಾಯುವುದೂ ಇಲ್ಲಿಯೇ ಎಂದು ಪರೋಕ್ಷವಾಗಿ ಕೇಂದ್ರ ಸಚಿವ ಕುಮಾರಸ್ವಾಮಿ ಅವರಿಗೆ ಡಿ.ಕೆ.ಶಿವಕುಮಾರ್ ಟಾಂಗ್ ನೀಡಿದರು.
ನಾವು ಮಾಡುತ್ತಿರುವ ಅಭಿವೃದ್ಧಿ ಕೆಲಸಗಳನ್ನು ಮುಖ್ಯಮಂತ್ರಿ ಆಗಿದ್ದಾಗ ಕುಮಾರಣ್ಣ, ಸಚಿವನಾಗಿದ್ದಾಗ ಯೋಗೇಶ್ವರ್ ಏಕೆ ಮಾಡಲಿಲ್ಲ? ನಾನು ನಿಮ್ಮ ಕೈ ಬಿಡುವವನಲ್ಲ. ಚನ್ನಪಟ್ಟಣ ಮಾದರಿಯಲ್ಲಿ ಇಡೀ ರಾಜ್ಯದಲ್ಲಿ ಕೆಲಸ ಮಾಡಲಾಗುವುದು ಎಂದು ಭರವಸೆ ನೀಡಿದರು.