ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ದಿಢೀರ್ ಒಕ್ಕಲಿಗ ಸಮುದಾಯದ ಸಚಿವರು ಹಾಗೂ ಶಾಸಕರಿಗೆ ಔತಣಕೂಟ ಏರ್ಪಡಿಸಿರುವುದು ಕುತೂಹಲ ಮೂಡಿಸಿದೆ. ಡಿಸಿಎಂ ಅವರ ಸದಾಶಿವನಗರ ನಿವಾಸದಲ್ಲಿ ಗುರುವಾರ ರಾತ್ರಿ ಕಾಂಗ್ರೆಸ್ ಪಕ್ಷದ ಒಕ್ಕಲಿಗ ಸಮುದಾಯದ ಮುಖಂಡರ ಔತಣಕೂಟ ನಡೆಯಿತು.
ಸಚಿವರಾದ ರಾಮಲಿಂಗಾರೆಡ್ಡಿ, ಕೃಷ್ಣಬೈರೇಗೌಡ, ಎನ್. ಚಲುವರಾಯಸ್ವಾಮಿ, ವೆಂಕಟೇಶ್, ಡಾ. ಎಂ.ಸಿ. ಸುಧಾಕರ್, ಮಾಜಿ ಸಂಸದ ಡಿ.ಕೆ. ಸುರೇಶ್ ಹಾಗೂ ಸಂಸದರು, ಶಾಸಕರು, ಮಾಜಿ ಸಂಸದರು, ಮಾಜಿ ಶಾಸಕರು, ಮೇಲ್ಮನೆ ಸದಸ್ಯರು, ಮಾಜಿ ವಿಧಾನ ಪರಿಷತ್ ಸದಸ್ಯರು ಹಾಗೂ ಮುಖಂಡರು ಔತಣಕೂಟದಲ್ಲಿ ಪಾಲ್ಗೊಂಡಿದ್ದರು.
ಲೋಕಸಭೆ ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಕಾಂಗ್ರೆಸ್ ಕೈ ಹಿಡಿದಿಲ್ಲ ಎಂಬ ಲೆಕ್ಕಾಚಾರ, ಎಡವಿದ್ದೆಲ್ಲಿ ಎಂಬುದರ ಬಗ್ಗೆ ಈ ಸಂದರ್ಭದಲ್ಲಿ ಸಮುದಾಯದ ನಾಯಕರು ಪರಾಮರ್ಶೆ ನಡೆಸಿದ್ದಾರೆ ಎನ್ನಲಾಗಿದೆ. ಚುನಾವಣೆಯಲ್ಲಿ ಒಕ್ಕಲಿಗ ಸಮುದಾಯ ಕೈಕೊಟ್ಟ ಬೆನ್ನಲ್ಲೇ ಅಲರ್ಟ್ ಆದ ಡಿ.ಕೆ. ಶಿವಕುಮಾರ್ ಅವರು, ಒಕ್ಕಲಿಗ ಸಚಿವರು, ಶಾಸಕರಿಗೆ ಔತಣಕೂಟ ಆಯೋಜಿಸುವ ಮೂಲಕ ಸಮುದಾಯದ ಸಚಿವರು, ಶಾಸಕರನ್ನು ವಿಶ್ವಾಸಕ್ಕೆ ಪಡೆಯಲು ಮುಂದಾಗಿದ್ದಾರೆ ಎಂದು ಹೇಳಲಾಗುತ್ತಿದೆ.
ಲೋಕಸಭಾ ಸಮರದಲ್ಲಿ ಹಳೇ ಮೈಸೂರು ಭಾಗ, ಬೆಂಗಳೂರು ಗ್ರಾಮಾಂತರ, ಕೋಲಾರ, ತುಮಕೂರು, ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ಗೆ ಭಾರಿ ಹಿನ್ನೆಡೆಯಾಗಿದ್ದು, ಒಕ್ಕಲಿಗ ಸಮುದಾಯ ಕಾಂಗ್ರೆಸ್ ಕೈ ಹಿಡಿಯಲಿಲ್ಲ ಎಂಬ ಚರ್ಚೆಗಳು ರಾಜಕೀಯ ವಲಯದಲ್ಲಿ ಕೇಳಿಬಂದಿದೆ. ಹಾಗಾಗಿ, ಡಿಕೆಶಿ ಅವರು ಸಮುದಾಯದ ಮುಖಂಡರ ಜೊತೆ ಇದಕ್ಕೆ ಸಂಬಂಧಿಸಿದಂತೆ ಚರ್ಚೆ ನಡೆಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಪೋಕ್ಸೋ ಕೇಸ್ ರದ್ದು ಕೋರಿದ ಯಡಿಯೂರಪ್ಪ ಅರ್ಜಿ ನಾಳೆ ವಿಚಾರಣೆ - BSY POCSO Case
ಇದನ್ನೂ ಓದಿ: ಗ್ಯಾರಂಟಿ ಯೋಜನೆ ನಿಲ್ಲಿಸುವಂತೆ ಕಾಂಗ್ರೆಸ್ ಶಾಸಕರೇ ಅಭಿಯಾನ ಶುರು ಮಾಡಿದ್ದಾರೆ: ಶೆಟ್ಟರ್ - SHETTAR ON GUARANTEE SCHEME