ನ್ಯೂಯಾರ್ಕ್/ಬೆಂಗಳೂರು: ಪ್ರವಾಸಿಗರ ಆಕರ್ಷಣೆಗಾಗಿ ಬೆಂಗಳೂರಿನಲ್ಲಿ ಸ್ಕೈ ಡೆಕ್ ನಿರ್ಮಾಣ ಮಾಡಲು ಉದ್ದೇಶಿಸಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ತಮ್ಮ ಅಮೆರಿಕ ಪ್ರವಾಸದ ವೇಳೆ ನ್ಯೂಯಾರ್ಕ್ ನಗರದ ಹಡ್ಸನ್ ಯಾರ್ಡ್ಸ್ ನಲ್ಲಿರುವ "ದಿ ಎಡ್ಜ್" ಸ್ಕೈ ಡೆಕ್ಗೆ ಭೇಟಿ ನೀಡಿದ್ದಾರೆ. ಅದರ ವಾಸ್ತುಶಿಲ್ಪ, ವಿನ್ಯಾಸ ಮತ್ತಿತರ ವಿಚಾರಗಳನ್ನು ಪರಿಶೀಲಿಸಿದರು.
ಪತ್ನಿ ಉಷಾ ಅವರ ಜೊತೆ ಸ್ಕೈ ಡೆಕ್ ವೀಕ್ಷಿಸಿದ ಶಿವಕುಮಾರ್, ಅದರ ಮನೋಹರ ನೋಟವನ್ನು ಕಣ್ತುಂಬಿಕೊಂಡರು. ಹಡ್ಸನ್ ಯಾರ್ಡ್ಸ್ 30 ವೆಸ್ಟರ್ನ್ ಹೆಮಿಸ್ಫರ್ನಲ್ಲಿರುವ ಕಟ್ಟಡದ 100ನೇ ಮಹಡಿಯಲ್ಲಿ 7,500 ಚದರ್ ಅಡಿಯ ಈ ಡೆಕ್ ಅನ್ನು ವೀಕ್ಷಣೆ ಮಾಡಿದರು. ಈ ಡೆಕ್ ಫ್ಲೋರ್ನಿಂದ ಹಿಡಿದು ಸೀಲಿಂಗ್ವರೆಗೂ ಪಾರದರ್ಶಕ ಗಾಜಿನಿಂದ ಕೂಡಿದೆ. ಇದು ನ್ಯೂಯಾರ್ಕ್ ನಗರದ ವಿಹಂಗಮ ನೋಟಕ್ಕೆ ವೇದಿಕೆಯಾಗಿದೆ.
ಬೆಂಗಳೂರಿನ ಸ್ಕೈ ಡೆಕ್ ನಿರ್ಮಾಣ ವಿಚಾರವಾಗಿ ಶಿವಕುಮಾರ್ ಅವರು ಖ್ಯಾತ ವಾಸ್ತುಶಿಲ್ಪ ವಿನ್ಯಾಸಗಾರ ಡಾ. ಬಾಬು ಕೀಲಾರ ಅವರೊಂದಿಗೆ ಚರ್ಚಿಸಿದರು. ಈ ಪ್ರವಾಸದಲ್ಲಿ ಶಿವಕುಮಾರ್ ಅವರು ಕೀಲಾರ ಜೊತೆಗೂಡಿ ಹಡ್ಸನ್ ಯಾರ್ಡ್ ಸೇರಿದಂತೆ ಹಲವು ಸ್ಕೈ ಡೆಕ್ ಗಗನಚುಂಬಿ ಕಟ್ಟಡಗಳನ್ನು ವೀಕ್ಷಿಸಿದರು. ನ್ಯೂಯಾರ್ಕ್ನ ವಿಶ್ವ ವಾಣಿಜ್ಯ ಕಟ್ಟಡ, ಚೀನಾದ ಶಾಂಘೈ ಟವರ್, ದುಬೈನ ಬುರ್ಜ್ ಖಲೀಫಾದ ವಿನ್ಯಾಸ ಮಾಡಿರುವ ಹೆಚ್ಓಕೆಯ ವಾಸ್ತುಶಿಲ್ಪ ವಿನ್ಯಾಸಗಾರ ಕೆನ್ನೆತ್ ಡ್ರಕರ್ ಅವರ ಜೊತೆಗೂ ಡಿಸಿಎಂ ಚರ್ಚೆ ನಡೆಸಿದರು.
ಈ ವೇಳೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, 'ಅತ್ಯಾಧುನಿಕ ತಂತ್ರಜ್ಞಾನ ಹಾಗೂ ಸುಸ್ಥಿರ ಆಲೋಚನೆಗಳನ್ನು ಒಟ್ಟುಗೂಡಿಸಿದರೆ ಬೆಂಗಳೂರಿನ ಸ್ಕೈ ಲೈನ್ಗೆ ಹೊಸ ವ್ಯಾಖ್ಯಾನ ನೀಡುವುದರ ಜೊತೆಗೆ ನಗರಾಭಿವೃದ್ಧಿಯ ಗುಣಮಟ್ಟವನ್ನು ಹೆಚ್ಚಿಸಲಿದೆ' ಎಂದು ಅಭಿಪ್ರಾಯಪಟ್ಟರು.
ಇದನ್ನೂ ಓದಿ: ಗಗನಚುಕ್ಕಿ ಜಲಪಾತೋತ್ಸವಕ್ಕೆ ಸಿಎಂ ಅದ್ಧೂರಿ ಚಾಲನೆ: ಗಮನ ಸೆಳೆದ ಲೇಸರ್ ಶೋ - Gaganachukki Falls