ಬೆಂಗಳೂರು: "ಒಂದು ವೇಳೆ ಫೋನ್ ಕದ್ದಾಲಿಕೆ ಆಗಿದ್ದರೆ, ಈ ಬಗ್ಗೆ ಲಿಖಿತವಾಗಿ ಗೃಹ ಸಚಿವರಿಗೆ ದೂರು ನೀಡಲಿ" ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ತಿಳಿಸಿದರು. ಸದಾಶಿವನಗರದ ತಮ್ಮ ನಿವಾಸದಲ್ಲಿ ಇಂದು ಮಾತನಾಡಿದ ಅವರು, ಪ್ರಜ್ವಲ್ ರೇವಣ್ಣ ವಿಚಾರವಾಗಿ ನಮ್ಮ ಕುಟುಂಬದ ಫೋನ್ ಕದ್ದಾಲಿಕೆ ಮಾಡಲಾಗಿದೆ ಎಂಬ ಎಚ್ಡಿಕೆ ಆರೋಪಕ್ಕೆ ಪ್ರತಿಕ್ರಿಯಿಸುತ್ತಾ, "ಯಾರ ಯಾರ ಕಾಲದಲ್ಲಿ ಫೋನ್ ಕದ್ದಾಲಿಕೆ ಆಗಿದೆ ಎಂಬುದು ಗೊತ್ತಿದೆ. ಆರೋಪ ಮಾಡುತ್ತಿರುವವರು ಕೆಲವರು ಹೋಂ ಮಿನಿಸ್ಟರ್ ಆದವರು, ಕೆಲವರು ಚೀಫ್ ಮಿನಿಸ್ಟರ್ ಆದವರು. ಆಗ ಎಲ್ಲ ರಿಪೋರ್ಟ್ ಬಂದಿತ್ತಲ್ಲಾ ಫೋನ್ ಕದ್ದಾಲಿಕೆ ಬಗ್ಗೆ?" ಎಂದು ಟಾಂಗ್ ಕೊಟ್ಟರು.
"ಹೆಚ್ಡಿಕೆಗೆ ಫೋನ್ ಕದ್ದಾಲಿಕೆ ಬಗ್ಗೆ ಯಾರು ಯಾರು ಮಾಹಿತಿ ಕೊಟ್ಡಿದ್ದಾರೋ ಅಫಿಡವಿಟ್ ಕೊಡೋದಕ್ಕೆ ಹೇಳಿ. ಈ ಬಗ್ಗೆ ಮಾಹಿತಿ ಕೊಟ್ಟರೆ ಬಹಳ ಸಂತೋಷವಾಗುತ್ತದೆ" ಎಂದು ತಿರುಗೇಟು ನೀಡಿದರು.
ಮುಂಜಾಗ್ರತಾ ಕ್ರಮ ಪರಿಶೀಲಿಸಲು ಸಿಟಿ ರೌಂಡ್ಸ್: "ನಾನು ಹಾಗೂ ಸಿಎಂ ಸಿದ್ದರಾಮಯ್ಯನವರು ಮಳೆ ಸಂಬಂಧ ತೆಗೆದುಕೊಂಡ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಲು ಸಿಟಿ ರೌಂಡ್ ಮಾಡ್ತಿದ್ದೇವೆ. ಕೆಲವು ಜಾಗಗಳನ್ನು ಆಯ್ಕೆ ಮಾಡಿದ್ದೇವೆ. ಎಲ್ಲೆಲ್ಲಿ ಮಳೆ ಅವಾಂತರದ ವರದಿ ಬಂದಿದೆಯೇ ಅಗೆಲ್ಲಿ ಭೇಟಿ ನೀಡಿ, ಪರಿಶೀಲನೆ ನಡೆಸುತ್ತೇವೆ. ಆಡಳಿತಕ್ಕೆ ಚುರುಕು ನೀಡಬೇಕೆಂದು ಭೇಟಿ ಮಾಡ್ತಿದ್ದೇವೆ" ಎಂದು ತಿಳಿಸಿದ ಡಿಕೆಶಿ, "ಮಳೆ ಬರಲಿ ತೊಂದರೆ ಇಲ್ಲ, ಮಳೆ ಬರಲಿ, ನೀರಾಗಲಿ, ಮಳೆ ಬಂದು ತಮಿಳುನಾಡಿಗೆ ನೀರು ಹರಿಯಲಿ" ಎಂದು ಇದೇ ವೇಳೆ ಹೇಳಿದರು.
ಸಣ್ಣ ಔತಣಕೂಟ ಇಟ್ಟುಕೊಂಡಿದ್ದೇವೆ: "ಸ್ಥಳೀಯ ಸಂಸ್ಥೆಗಳ ಚುನಾವಣೆ ಇದೆ. ಚುನಾವಣೆ ಯಾವ ರೀತಿ ಮಾಡುತ್ತಿದ್ದಾರೆ ಅಂತ ಚರ್ಚಿಸಲು ಸಣ್ಣ ಡಿನ್ನರ್ ಇಟ್ಟುಕೊಂಡಿದ್ದೇವೆ" ಎಂದು ಇದೇ ವೇಳೆ ಡಿಕೆಶಿ ತಿಳಿಸಿದರು.
ಇದನ್ನೂ ಓದಿ: ಪ್ರಜ್ವಲ್ ಪಾಸ್‌ಪೋರ್ಟ್ ರದ್ದತಿ ಕೇಂದ್ರ ಸರ್ಕಾರದ ಕರ್ತವ್ಯ: ಗೃಹ ಸಚಿವ ಜಿ.ಪರಮೇಶ್ವರ್ - G Parameshwara