ಮೈಸೂರು: ನಾನು ಹಾಗೂ ಇಡೀ ಪಕ್ಷ ಸಿಎಂ ಪರ. ಸಿದ್ದರಾಮಯ್ಯನವರು ಸ್ವಲ್ಪ ಎಮೋಷನಲ್ ಮನುಷ್ಯ. ಹಾಗಾಗಿ ಮುಡಾ ವಿಚಾರವನ್ನು ಮನಸ್ಸಿಗೆ ತೆಗೆದುಕೊಂಡಿದ್ದಾರೆ. ಹಗರಣವಾಗಿದ್ದರೆ ಸುಮ್ಮನೆ ಇರಬಹುದಿತ್ತು. ಆದರೆ ಹಗರಣ ಆಗಿಲ್ಲ. ಅದಕ್ಕಾಗಿ ಅವರಿಗೆ ನೋವಾಗಿದೆ ಎಂದು ಮೈಸೂರಿನಲ್ಲಿ ಇಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದರು.
ನನಗೆ ಏನೆಲ್ಲಾ ನೋವು ಕೊಟ್ಟರು. ಆದರೆ ಜಗ್ಗಲಿಲ್ಲ. ನನ್ನದು ಹೋರಾಟದ ಬದುಕು. ಸಚಿವ ಸ್ಥಾನ ಹೋಗುವ ಭಯದಲ್ಲಿ ಕುಮಾರಸ್ವಾಮಿ ಪಾದಯಾತ್ರೆಗೆ ಬಂದಿದ್ದಾರೆ. ಶತ್ರುವಿನ ಶತ್ರು ಮಿತ್ರ ಎಂಬ ಸ್ಥಿತಿಯಲ್ಲಿ ಬಿಜೆಪಿ-ಜೆಡಿಎಸ್ನವರು ಇದ್ದಾರೆ. ಅವರ ಹೋರಾಟದಲ್ಲಿ ಎಲ್ಲೆಡೆ ಜಗಳವಿದೆ. ಅದಕ್ಕೆ ಉತ್ತರ ಕೊಡಲು ಮೈಸೂರಿನಲ್ಲಿ ಸಮಾವೇಶ ಮಾಡುತ್ತಿದ್ದೇವೆ ಎಂದು ಹೇಳಿದರು.
ಸಮಾವೇಶಕ್ಕೆ ಸಿಎಂ ಬರುವುದು ಬೇಡ. ಇವರನ್ನು ನಾವೇ ಎದುರಿಸುತ್ತೇವೆ ಎಂದು ನಾನು ಸಿಎಂಗೆ ಹೇಳಿದ್ದೆ. ಆದರೆ ಅವರೇ ನಾನು ಸಮಾವೇಶಕ್ಕೆ ಬರುತ್ತೇನೆ, ಕೆಲವು ವಿಚಾರಗಳನ್ನು ಮಾತನಾಡುತ್ತೇನೆ ಎಂದರು. ನಾಳೆ ಎಲ್ಲಾ ವಿಚಾರವನ್ನು ಬಯಲು ಮಾಡುತ್ತೇವೆ ಎಂದು ತಿಳಿಸಿದರು.
ಭ್ರಷ್ಟಾಚಾರದ ಪಾದಯಾತ್ರೆ: ಭ್ರಷ್ಟಾಚಾರಿಗಳು ಭ್ರಷ್ಟಾಚಾರದ ಪಾಪ ವಿಮೋಚನೆಗಾಗಿ ಯಾತ್ರೆ ನಡೆಸುತ್ತಿದ್ದಾರೆ. ಕುಮಾರಸ್ವಾಮಿ ಕುಟುಂಬದ ಹಗರಣಗಳು ಹಾಗೂ ಬಿಜೆಪಿ ಹಗರಣಗಳು ಎಲ್ಲವನ್ನೂ ಹೇಳಬೇಕಿದೆ ಎಂದರು.
ಟಿ.ಜೆ.ಅಬ್ರಹಾಂ ಸಿಎಂ ವಿರುದ್ದ ದೂರು ಕೊಟ್ಟ ಕೂಡಲೇ ರಾಜ್ಯಪಾಲರು ಶೋಕಾಸ್ ನೋಟಿಸ್ ಕೊಟ್ಟಿದ್ದಾರೆ. ಇದರಲ್ಲಿ ರಾಜಕೀಯ ಇದೆ. ಈ ವಿಚಾರದಿಂದ ಸಿದ್ದರಾಮಯ್ಯನವರಿಗೆ ಮಾನಸಿಕ ಹಿಂಸೆಯಾಗಿದೆ. ಅದಕ್ಕಾಗಿ ನಾವು ಇಡೀ ಕಾಂಗ್ರೆಸ್ ಪಕ್ಷ ಅವರ ಪರವಾಗಿ ನಿಂತಿದ್ದೇವೆ. ನನ್ನ ಅಧ್ಯಕ್ಷತೆಯಲ್ಲಿ ನಾಳೆ ಜನಾಂದೋಲನದ ಸಮಾರೋಪ ನಡೆಯಲಿದೆ ಎಂದು ಹೇಳಿದರು.
ಇದನ್ನೂ ಓದಿ: ವಕ್ಫ್ ಬೋರ್ಡ್ ಕಾನೂನಿನಲ್ಲಿ ಮಧ್ಯಪ್ರವೇಶಿಸುವುದು ಸಂವಿಧಾನ ಬಾಹಿರ: ಸಿಎಂ ಸಿದ್ದರಾಮಯ್ಯ - Waqf Bill