ಗಂಗಾವತಿ(ಕೊಪ್ಪಳ): ಡ್ರಮ್ ಸೀಡರ್ ಯಂತ್ರದ ಮೂಲಕ ಯಾಂತ್ರೀಕೃತ ಭತ್ತ ನಾಟಿ ಕಾರ್ಯಕ್ಕೆ ಜಿಲ್ಲಾಧಿಕಾರಿ ನಲಿನ್ ಅತುಲ್ ಇಂದು ಚಾಲನೆ ನೀಡಿದರು. ಕಾರಟಗಿ ತಾಲೂಕಿನ ಸಿದ್ದಾಪುರ ಗ್ರಾಮದಲ್ಲಿರುವ ಮಾಜಿ ತಾಲೂಕು ಪಂಚಾಯಿತಿ ಸದಸ್ಯ ನೀರಗಂಟಿ ಬಸವರಾಜ ಅವರ ಹೊಲದಲ್ಲಿ ಜಿಲ್ಲಾಧಿಕಾರಿ ಭತ್ತ ನಾಟಿ ಕಾರ್ಯಕ್ಕೆ ಚಾಲನೆ ನೀಡಿ, ಬಳಿಕ ಸ್ವತಃ ಟ್ರಾಕ್ಟರ್ ಚಲಾಯಿಸಿದರು.
ಬಳಿಕ ಜಿಲ್ಲಾಧಿಕಾರಿ ನಲಿನ್ ಅತುಲ್ ಮಾತನಾಡಿ, "ಭತ್ತ ನಾಟಿಗೂ ಯಂತ್ರಗಳು ಬಂದಿವೆ. ಕೃಷಿ ಇಲಾಖೆ ಮತ್ತು ಕೃಷಿ ವಿಜ್ಞಾನ ಕೇಂದ್ರದ ಸಲಹೆ ಪಡೆದು ರೈತರು ಹೆಚ್ಚಿನ ಪ್ರಮಾಣದಲ್ಲಿ ಯಾಂತ್ರೀಕೃತ ಭತ್ತ ನಾಟಿ ಪದ್ಧತಿಯನ್ನು ಅಳವಡಿಸಿಕೊಳ್ಳುವ ಮೂಲಕ ಕೃಷಿ ಕೂಲಿಗಳ ಸಮಸ್ಯೆ ನೀಗಿಸಿಕೊಳ್ಳಬೇಕು" ಎಂದು ಸಲಹೆ ನೀಡಿದರು.
ಜಿಲ್ಲಾ ಪಂಚಾಯಿತಿ ಸಿಇಒ ರಾಹುಲ್ ರತ್ನಂ ಪಾಂಡೆ ಮಾತನಾಡಿ, "ಡ್ರಮ್ ಸೀಡರ್ನಿಂದ ಭತ್ತ ಬಿತ್ತನೆ ವಿಧಾನವನ್ನು ಸಣ್ಣ ಮತ್ತು ಅತಿ ಸಣ್ಣ ರೈತರು ಅಳವಡಿಸಿಕೊಳ್ಳಬೇಕು. ಇದರಿಂದ ಖರ್ಚು ತಗ್ಗುತ್ತದೆ. ಅಲ್ಲದೇ, ಸಕಾಲಕ್ಕೆ ಭತ್ತದ ಬಿತ್ತನೆ ಸಾಧ್ಯ" ಎಂದರು.
ಜಂಟಿ ಕೃಷಿ ನಿರ್ದೇಶಕ ಟಿ.ಎಸ್.ರುದ್ರೇಶಪ್ಪ ಮಾತನಾಡಿ, "ಯಾಂತ್ರೀಕೃತ ನಾಟಿ ಪದ್ಧತಿಯಲ್ಲಿ ಚಾಪೆ ಮಡಿ ಪದ್ಧತಿಯಲ್ಲಿ ಬೆಳೆದ ಸಸಿಗಳನ್ನು ಈ ಯಂತ್ರದಿಂದ 8 ತಾಸುಗಳಲ್ಲಿ 7.5 ರಿಂದ 8.8 ಎಕರೆ ಪ್ರದೇಶದಲ್ಲಿ ಏಕಕಾಲಕ್ಕೆ ನಾಟಿ ಮಾಡಬಹುದು. ಮಣ್ಣಿನ ಗುಣಧರ್ಮಕ್ಕೆ ಅನುಗುಣವಾಗಿ ಸಸಿಗಳ ನಡುವಿನ ಅಂತರ ಮತ್ತು ನಾಟಿ ಮಾಡುವ ಆಳವನ್ನು ಹೊಂದಾಣಿಕೆ ಮಾಡಲು ಅವಕಾಶವಿದೆ. 16 ರಿಂದ 18 ದಿನಗಳ ಸಸಿಗಳು ನಾಟಿಗೆ ಸೂಕ್ತ ಮತ್ತು ಶೇ.15 ರಿಂದ 20 ರಷ್ಟು ಇಳುವರಿ ಹೆಚ್ಚಾಗುವ ಸಾದ್ಯತೆ ಇರುತ್ತದೆ" ಎಂದು ಮಾಹಿತಿ ನೀಡಿದರು.
"2024-25ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಸಿದ್ದಾಪುರ ಹೋಬಳಿಯಲ್ಲಿ 15 ಸಾವಿರ ಹೆಕ್ಟೇರ್ ಪ್ರದೇಶಲ್ಲಿ ಭತ್ತದ ನಾಟಿ ಕಾರ್ಯ ಪ್ರಾರಂಭವಾಗಿದೆ. ಯಾಂತ್ರೀಕೃತ ನಾಟಿ ಪದ್ಧತಿ ಉತ್ತೇಜಿಸಲು ಕೃಷಿ ಇಲಾಖೆ ರೈತರ ಗದ್ದೆಗಳಲ್ಲಿ ಪ್ರಾತ್ಯಕ್ಷಿಕೆ ಹಮ್ಮಿಕೊಳ್ಳುತ್ತಿದೆ. ಈ ಸಾಲಿನಲ್ಲಿ ಒಟ್ಟು 5 ಸಾವಿರ ಎಕರೆ ಪ್ರದೇಶದಲ್ಲಿ ಯಾಂತ್ರೀಕೃತ ಭತ್ತ ನಾಟಿ ಗುರಿಯನ್ನು ಹಾಕಿಕೊಳ್ಳಲಾಗಿದೆ" ಎಂದು ಅವರು ತಿಳಿಸಿದರು.
ಇದನ್ನೂ ಓದಿ: ಬಂಗಾರದ ಬೆಲೆಗಾಗಿ ಕಪ್ಪು ಅರಿಶಿಣ ಬೆಳೆದ ರೈತ ಕಂಗಾಲು; ಟ್ರ್ಯಾಕ್ಟರ್ ಹರಿಸಿ ಬೆಳೆ ನಾಶ - Black Turmeric Crop