ದಾವಣಗೆರೆ : ರಾಜ್ಯಾದ್ಯಂತ ಹೋಳಿ ಹಬ್ಬದ ಸಂಭ್ರಮ, ಸಡಗರ ಮನೆ ಮಾಡಿದೆ. ಕೆಮಿಕಲ್ ಮಿಶ್ರಿತ ಬಣ್ಣವನ್ನು ಬಳಕೆ ಮಾಡಿ ಯುವಕ ಯುವತಿಯರು ಹೋಳಿ ಆಡುವುದು ಸಾಮಾನ್ಯವಾಗಿ ಬಿಟ್ಟಿದೆ. ಆದ್ರೇ ಬೆಣ್ಣೆನಗರಿ ದಾವಣಗೆರೆಯ ಎಸ್ಎಸ್ ಲೇಔಟ್‌ನಲ್ಲಿ ಮಹಿಳೆಯರ ಗುಂಪು ಕೆಮಿಕಲ್ ಮಿಶ್ರಿತ ಬಣ್ಣಕ್ಕೆ ಗುಡ್ ಬೈ ಹೇಳಿ ಹರ್ಬಲ್ ಪೇಸ್ಟ್ ಗಳನ್ನು ತಯಾರು ಮಾಡಿ ವಿಶೇಷವಾಗಿ ಹೋಳಿ ಆಚರಿಸಿದರು.
ಹೌದು, ದಾವಣಗೆರೆ ಎಂದೇ ಹೋಳಿ ಹಬ್ಬಕ್ಕೆ ಫೇಮಸ್. ಅದ್ರಲ್ಲೂ ಇಲ್ಲಿನ ರಾಮ್ ಅಂಡ್ ಕೋ ವೃತ್ತದಲ್ಲಿ ಯುವಕ ಯುವತಿಯರು ಕಿಕ್ಕಿರಿದು ಸೇರಿ ಹೋಳಿ ಆಚರಣೆ ಮಾಡುವುದು ಮತ್ತಷ್ಟು ವಿಶೇಷ. ದಾವಣಗೆರೆ ನಗರದ ಎಸ್ಎಸ್ ಬಡಾವಣೆಯ ಎ ಬ್ಲಾಕ್ನ ಮಹಿಳೆಯರು ಸೇರಿ ಮನೆಯಲ್ಲೇ ಸಿಗುವ ತರಕಾರಿ, ಸೊಪ್ಪು, ಹಣ್ಣು, ಮಜ್ಜಿಗೆಯಿಂದ ನೈಸರ್ಗಿಕ ಬಣ್ಣವನ್ನು ತಯಾರಿಸಿ ಹೋಳಿ ಆಚರಣೆ ಮಾಡಿ, ಸಂಗೀತಕ್ಕೆ ಸ್ಟೆಪ್ ಹಾಕಿ ಮಹಿಳೆಯರು ಸಖತ್ ಎಂಜಾಯ್ ಮಾಡಿದರು.
ನೈಸರ್ಗಿಕ ಬಣ್ಣದಿಂದ ಚರ್ಮದ ತ್ವಚೆ ಕೂಡ ಕಾಂತಿಯುತವಾಗುತ್ತದೆ. ಅಲ್ಲದೆ ಯಾವುದೇ ಅಡ್ಡಪರಿಣಾಮಗಳು ಬೀರುವುದಿಲ್ಲ ಎಂಬ ನಂಬಿಕೆ ಇವರದ್ದಾಗಿದೆ. ಇನ್ನು ಕೆಮಿಕಲ್ ಮಿಶ್ರಿತ ಬಣ್ಣಗಳು ಬಳಕೆ ಮಾಡುವುದರಿಂದ ಅಡ್ಡ ಪರಿಣಾಮ ಬೀರುತ್ತವೆ. ಹೀಗಾಗಿ ಮಹಿಳೆಯರು ಹರ್ಬಲ್ ಹೋಳಿ ಆಚರಿಸಿದರು.
ವಿವಿಧ ತರಕಾರಿ, ದಾಸವಾಳ, ಹಣ್ಣುಗಳಲ್ಲಿ ಸೇಬು, ಕಲ್ಲಂಗಡಿ, ಆರೆಂಜ್, ಸೊಪ್ಪು, ಮೆಹಂದಿ, ಬೀಟ್ರೂಟ್, ಕ್ಯಾರೆಟ್, ಕಡ್ಲೆ ಹಿಟ್ಟು, ಟೊಮೆಟೊ, ಅಕ್ಕಿ ಹಿಟ್ಟು, ಅಲೋವೆರಾ, ಈ ಎಲ್ಲಾ ಪೇಸ್ಟ್ಗಳನ್ನು ಮಾಡಿ ನೈಸರ್ಗಿಕ ಬಣ್ಣ ಬಳಕೆ ಮಾಡಿದ್ದೇವೆ. ಇನ್ನು ಕರಿಬೇವು, ವೀಳ್ಯದೆಲೆ ಇದರ ಪೇಸ್ಟ್ ಮಾಡಿ ಬಳಕೆ ಮಾಡುವುದರಿಂದ ಕೃತಕ ಬಣ್ಣಗಳಿಗೆ ಗುಡ್ ಬೈ ಹೇಳಿದ್ದೇವೆ. ಈ ಹರ್ಬಲ್ ಹೋಳಿ ಆಡುವುದರಿಂದ ಮುಖ ಕಾಂತೀಯುತವಾಗಿರುತ್ತದೆ ಎಂದು ಸೌಮ್ಯ ಸತೀಶ್ ತಿಳಿಸಿದರು.
15 ವರ್ಷಗಳಿಂದ ಕೆಮಿಕಲ್ ರಹಿತ ಹೋಳಿ ಆಚರಣೆ: ತರಕಾರಿ ಸೊಪ್ಪು, ಹಣ್ಣು ಸೇರಿದಂತೆ ನೈಸರ್ಗಿಕವಾಗಿ ಸಿಗುವ ಹಣ್ಣುಗಳಿಂದಲೂ ಬಣ್ಣ ಮಾಡಿಕೊಂಡು ಈ ಮಹಿಳೆಯರ ತಂಡ 15 ವರ್ಷಗಳಿಂದ ಕೆಮಿಕಲ್ ರಹಿತ ಹೋಳಿ ಆಚರಣೆ ಮಾಡ್ತಿದೆ. ಎಸ್ಎಸ್ ಬಡಾವಣೆ ಎ ಬ್ಲಾಕ್ನ ಇಪ್ಪತ್ತಕ್ಕು ಹೆಚ್ಚು ಮಹಿಳಾ ಮಣಿಗಳು ಈ ನೈಸರ್ಗಿಕ ಹೋಳಿ ಆಚರಣೆ ಮಾಡಿ ಡಿಜೆ ಸದ್ದಿಗೆ ಸಖತ್ ಸ್ಟೆಪ್ ಹಾಕಿದರು.
ಕೆಮಿಕಲ್ ರಹಿತ ಹೋಳಿ ಅಚರಣೆ ಮಾಡುತ್ತಿದ್ದೇವೆ. ಭಾರತದಲ್ಲಿ ನಮ್ಮ ಈ ಸಂಸ್ಕೃತಿಯನ್ನು ಮುಂದುವರಿಸುತ್ತಿದ್ದೇವೆ. ಕೆಮಿಕಲ್ ಯುಕ್ತ ಬಣ್ಣಗಳನ್ನು ಆಡಿದರೆ ಚರ್ಮ ವೈದ್ಯರ ಬಳಿ ಅಲೆಯಬೇಕಾಗುತ್ತದೆ. ಇದ್ದರಿಂದ ಈ ನೈಸರ್ಗಿಕ ಹೋಳಿ ಆಚರಣೆ ಮಾಡ್ತಿದ್ದೇವೆ. ಹಣ್ಣು, ಅಲುವೆರಾ, ಮೆಹಂದಿ, ಟೊಮ್ಯಾಟೊ, ಸೌತೆಕಾಯಿ, ಪಾಲಕ್ ಸೊಪ್ಪು, ಅರಿಶಿನ ಬಳಕೆ ಮಾಡಿ ಆರೋಗ್ಯಕರ ಬಣ್ಣ ತಯಾರು ಮಾಡಿದ್ದೇವೆ ಎಂದು ಶಿಲ್ಪಾ ಹೇಳಿದರು.
ಡಿಜೆ ಸದ್ದಿಗೆ ಹುಚ್ಚೆದ್ದು ಕುಣಿದು ಕುಪ್ಪಳಿಸಿದ ಯುವತಿಯರು: ವಿಶೇಷವಾಗಿ ದಾವಣಗೆರೆ ನಗರದ ರಾಮ್ ಆ್ಯಂಡ್ ಕೋ ವೃತ್ತದಲ್ಲಿ ಅದ್ಧೂರಿಯಾಗಿ ಡಿಜೆ ಸೌಂಡ್ಗೆ ಯುವಕ-ಯುವತಿಯರು ಹೆಜ್ಜೆ ಹಾಕಿ ಹೋಳಿ ಆಚರಿಸಿದರು. ಯುವಕರಿಗೆ ಹಾಗೂ ಯುವತಿಯರಿಗೆ ಪ್ರತ್ಯೇಕವಾಗಿ ಗ್ಯಾಲರಿ ಮಾಡಿದ್ದು, ಇಷ್ಟವಾದ ಹಾಡುಗಳಿಗೆ ಹೆಜ್ಜೆ ಹಾಕಿ ಕುಣಿದು ಕುಪ್ಪಳಿಸಿದರು. ಅಲ್ಲದೆ ಯುವತಿಯರಿಗೆ ನೀರು ಬೀಳುವ ಶವರ್ ವ್ಯವಸ್ಥೆ ಮಾಡಲಾಗಿತ್ತು. ನೀರಿನ ಜೊತೆ ಡಿಜೆ ಸಾಂಗ್ಗೆ ಹುಚ್ಚೆದ್ದು ಕುಣಿದರು. ಇದಕ್ಕೆ ನಾವು ಕಮ್ಮಿ ಇಲ್ಲ ಎಂದು ಯುವಕರು ಕೂಡ ಭರ್ಜರಿ ಸ್ಟೆಪ್ ಹಾಕಿದ್ರು.