ದಾವಣಗೆರೆ: ಬೆಣ್ಣೆ ನಗರಿ ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ಚುನಾವಣೆ ಅಖಾಡ ರಂಗೇರುತ್ತಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ದಾವಣಗೆರೆ ಅಭಿವೃದ್ಧಿ ಬಗ್ಗೆ ಸವಾಲಿಗೆ ಪ್ರತಿ ಸವಾಲ್ ರಾಜಕೀಯ ಶುರುವಾಗಿದೆ. ಉಸ್ತುವಾರಿ ಸಚಿವ ಎಸ್ ಎಸ್ ಮಲ್ಲಿಕಾರ್ಜುನ್ ಅವರು ದಾವಣಗೆರೆಗೆ ಏನು ಕೊಡುಗೆ ಕೊಟ್ಟಿದ್ದಾರೆ, ಬಹಿರಂಗ ಚರ್ಚೆಗೆ ಬರಲಿ ಎಂದು ಬಿಜೆಪಿ ಎಂಎಲ್ಸಿ ರವಿಕುಮಾರ್ ಸವಾಲು ಹಾಕಿದ್ದಾರೆ.
ಇದೀಗ ಕಾಂಗ್ರೆಸ್ನ ಕಲಿಗಳು ಬಿಜೆಪಿ ಮೇಲೆ ಮುಗಿಬಿದ್ದಿದ್ದಾರೆ. ಕುಂದವಾಡ ಕೆರೆ, ಟಿವಿ ಸ್ಟೇಷನ್ ಕೆರೆ ಕಟ್ಟಿಸಿ ನೀರು ನೀಡಿದ ಜಲದಾತ, ಇಡೀ ದಾವಣಗೆರೆಯನ್ನು ಅಭಿವೃದ್ಧಿ ಪಡಿಸಿದ್ದು ಮಲ್ಲಿಕಾರ್ಜುನ್ ಅವರು ಎಂದು ಕಾಂಗ್ರೆಸ್ನವರು ಕುಟುಕುತ್ತಿದ್ದಾರೆ. ಇದಲ್ಲದೇ ಸವಾಲು ಹಾಕಿದ್ದ ಎಂಎಲ್ಸಿ ರವಿಕುಮಾರ್ ಅವರಿಗೆ ಕಾಂಗ್ರೆಸ್ ಅಭ್ಯರ್ಥಿ ಡಾ ಪ್ರಭಾ ಮಲ್ಲಿಕಾರ್ಜುನ್ ಕೂಡ ತಿರುಗೇಟು ನೀಡಿದ್ದಾರೆ. ದಾವಣಗೆರೆಗೆ ನಿಮ್ಮ ಸಂಸದರ ಕೊಡುಗೆ ಏನೂ ಎಂದು ಪ್ರಶ್ನಿಸಿದ್ದಾರೆ.
ಜಿಎಂ ಸಿದ್ದೇಶ್ವರ್ ಮಾಡಿದ ಅಭಿವೃದ್ಧಿ ಏನು?: ಪ್ರಭಾ ಮಲ್ಲಿಕಾರ್ಜುನ್; ಹಾಲಿ ಸಂಸದ ಜಿಎಂ ಸಿದ್ದೇಶ್ವರ್ ಅವರು ಹಲವು ಬಾರಿ ಆಯ್ಕೆಯಾಗಿದ್ದಾರೆ, ಇಪ್ಪತ್ತೈದು ವರ್ಷಗಳಿಂದ ಏನು ಅಭಿವೃದ್ಧಿ ಮಾಡಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಡಾ. ಪ್ರಭಾ ಮಲ್ಲಿಕಾರ್ಜುನ್ ಆರೋಪಿಸಿದ್ದಾರೆ.
ದಾವಣಗೆರೆ ಜಿಲ್ಲೆಯ ಹರಿಹರ ತಾಲೂಕಿನ ಮೆಲೇಬೆನ್ನೂರು ಬಳಿಯ ಕೋಮಾರನಹಳ್ಳಿಯಲ್ಲಿ ಮತಪ್ರಚಾರ ಮಾಡಿದರು. ಪ್ರಚಾರದ ವೇಳೆ ಅಂಗಡಿಯೊಂದರಲ್ಲಿ ಮಿರ್ಚಿ ಮಂಡಕ್ಕಿ ಸವಿದರು. ಅಲ್ಲದೇ ಜನಸಾಮಾನ್ಯರಂತೆ ಮತದಾರರೊಂದಿಗೆ ಕುಳಿತು ಮಿರ್ಚಿ ಮಂಡಕ್ಕಿ ಸವಿಯುತ್ತಾ ಮತ ಪ್ರಚಾರ ನಡೆಸಿದರು.
ಸಚಿವರ ವಿರುದ್ಧ ಗಾಯಿತ್ರಿ ಸಿದ್ದೇಶ್ವರ್ ವಾಗ್ದಾಳಿ:ಬಿಜೆಪಿ ಅಭ್ಯರ್ಥಿ ಗಾಯಿತ್ರಿ ಸಿದ್ದೇಶ್ವರ್ ಅವರು ಕೂಡ ಜಿಲ್ಲೆಯ ಉಸ್ತುವಾರಿ ಸಚಿವರನ್ನು ಜನ ನೋಡೇ ಇಲ್ಲ, ಉತ್ತರ ದಕ್ಷಿಣ ಮತ ಕ್ಷೇತ್ರಕ್ಕೆ ಮಾತ್ರ ಸೀಮಿತ ಆಗಿದ್ದಾರೆ. ಇಡೀ ಕ್ಷೇತ್ರದಲ್ಲಿ ಉಸ್ತುವಾರಿ ಸಚಿವರು ಎಲ್ಲಿದ್ದಾರೆ ಹುಡುಕಬೇಕು? ಅದ್ರೇ ಅವರನ್ನು ಜನರು ಮರೆತು ಹೋಗಿದ್ದಾರೆ ಎಂದು ವಾಗ್ದಾಳಿ ನಡೆಸಿದರು.