ದಾವಣಗೆರೆ: ಸಾಮಾನ್ಯವಾಗಿ ಕಾಫಿ ಬೆಳೆಯನ್ನು ನಾವು ಮಲೆನಾಡು ಭಾಗಗಳಲ್ಲಿ ಹೆಚ್ಚಾಗಿ ಕಾಣುತ್ತೇವೆ. ಆದರೆ, ಹರಪನಹಳ್ಳಿ ತಾಲೂಕಿನ ಕಣವಿ ಗ್ರಾಮದ ಬಿಳಿಚೋಡು ಹನುಮಂತಪ್ಪ ಹಾಗೂ ಕಮಲಮ್ಮ ಎಂಬ ರೈತ ದಂಪತಿ ಕಾಫಿಯನ್ನು ಬಯಲು ಸೀಮೆಯಲ್ಲೂ ಬೆಳೆಯಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಮೊದಲ ಫಸಲಿಗೆ 30 ಕೆಜಿಯಷ್ಟು ಕಾಫಿ ಬೆಳೆದು ಸೈ ಅನಿಸಿಕೊಂಡಿದ್ದಾರೆ. ಅಲ್ಲದೇ ಇಡೀ ಜಿಲ್ಲೆಯಲ್ಲಿ ಕಾಫಿ ಬೆಳೆದ ಪ್ರಥಮ ರೈತ ಎಂಬ ಹೆಗ್ಗಳಿಕೆಗೂ ಈ ರೈತ ಪಾತ್ರರಾಗಿದ್ದಾರೆ.
ದಾವಣಗೆರೆ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಬರುವ ಕಣವಿ ಗ್ರಾಮದಲ್ಲಿ ಸದ್ಯ ಕಾಫಿ ಸಮೃದ್ಧವಾಗಿ ಬೆಳೆದು ನಿಂತಿದ್ದು, ಮಲೆನಾಡಿನ ಬೆಳೆಯನ್ನು ಬಯಲು ಸೀಮೆಯಲ್ಲಿ ಸಮೃದ್ಧವಾಗಿ ಬೆಳೆದ ರೈತ ದಂಪತಿಯು ಇತರರಿಗೂ ಮಾದರಿಯಾಗಿದ್ದಾರೆ. ಅವರ ಜೊತೆ ಪುತ್ರ ಬೀರಲಿಂಗಪ್ಪ ಸಹ ಕಾಫಿ ಬೆಳೆಯಲು ಕೈ ಜೋಡಿಸಿದ್ದಾರೆ.
ಮೊದಲ ಬಾರಿಗೆ ಹಾಕಿರುವ ಕಾಫಿ ಬೆಳೆ ಅಡಕೆ ತೋಟದ ಮಧ್ಯೆ ಸಮೃದ್ದವಾಗಿ ಬೆಳೆದು ನಿಂತಿದೆ. ದಂಪತಿ ಮತ್ತೋರ್ವ ಪುತ್ರ ಮಾಲತೇಶ್ ಪೊಲೀಸ್ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದು, ಪೋಷಕರಿಗೆ ಕಾಫಿ ಬೆಳೆಯಲು ಬೆನ್ನೆಲುಬಾಗಿ ನಿಂತಿದ್ದಾರೆ. ದಂಪತಿಗೆ ಸೇರಿದ 2.70 ಎಕರೆಯಲ್ಲಿ ಅಡಕೆ ತೋಟದಲ್ಲಿ ಕಾಫಿಯನ್ನು ಮಿಶ್ರ ಬೆಳೆಯಾಗಿ ಬೆಳೆದಿದ್ದಾರೆ.
"ಆರಂಭದಲ್ಲಿ ಭದ್ರಾವತಿಯಿಂದ ಅಡಕೆ ಸಸಿ ತಂದು ಅವುಗಳನ್ನು ಪಾಲನೆ ಪೋಷಣೆ ಮಾಡಿದ್ದು ಅದರ ಪ್ರತಿಫವಾಗಿ ಅಡಕೆಯಿಂದ ಲಕ್ಷಾಂತರ ರೂಪಾಯಿ ಆದಾಯಗಳಿಸಲು ಸಾಧ್ಯವಾಗಿದೆ. ಇದೀಗ ಅಡಕೆ ಇಳುವರಿ ಬರುತ್ತಿದ್ದಂತೆ ಅದರ ಮಧ್ಯ ಮಲೆನಾಡಿನಿಂದ ಅರೇಬಿಕ್ ತಳಿಯ ಎರಡು ಸಾವಿರ ಕಾಫಿ ಸಸಿ ತಂದು ನಾಟಿ ಮಾಡಿದ್ದು ಕಾಫಿ ಇದೀಗ ಸಮೃದ್ದವಾಗಿ ಬೆಳೆದು ನಿಂತಿದೆ. ಎರಡು ಸಾವಿರ ಸಸಿ ಹಾಕಿ 1 ಲಕ್ಷ ವ್ಯಯ ಮಾಡಿ ತೋಟ ಮಾಡಲಾಗಿದೆ. ಮೂವತ್ತು ಕೆಜಿ ಕಾಫಿ ಬಂದಿದೆ. ನೋಡೋಣ ಎಂದು ಕಾಫಿ ಮಾಡಿದ್ದೆವು. ಮೊದಲ ಫಸಲು ನೀಡಿದೆ. ಇದು ಅರೇಬಿಕ್ ತಳಿಯ ಕಾಫಿ ಆಗಿದೆ. ಚೆನ್ನಾಗಿ ಫಸಲು ಬಂದಿದೆ" ಎಂದು ರೈತ ಬೀರಲಿಂಗಪ್ಪ ಹರ್ಷ ವ್ಯಕ್ತಪಡಿಸಿದ್ದಾರೆ.
ಕಾಫಿ ಬೆಳೆ ಎರಡು ವರ್ಷ ಪೂರೈಸಿದೆ. ಗಿಡಗಳು ಸೋಂಪಾಗಿ ಬೆಳೆದಿದ್ದು ಕಾಯಿ, ಹಣ್ಣುಗಳಿಂದ ನಳನಳಿಸುತ್ತಿದೆ. ಕಳೆದ ಎರಡು ವರ್ಷದಲ್ಲಿ ಒಂದು ಲಕ್ಷ ರೂಪಾಯಿ ಖರ್ಚು ಮಾಡಿರುವ ರೈತ ಕುಟುಂಬ, ಇದೀಗ 30 ಕೆಜಿ ಕಾಫಿ ಕಟಾವು ಮಾಡಿದ್ದು ಇನ್ನು ಐವತ್ತು ಕೆಜಿ ಕಾಫಿ ಸಿಗುವ ನಿರೀಕ್ಷೆಯಲ್ಲಿದೆ.
ಗ್ರಾಮದ ಅಕ್ಕ - ಪಕ್ಕದ ಕಾರ್ಮಿಕರು ಕಾಫಿ ಸೀಮೆಯತ್ತ ಕೆಲಸಕ್ಕಾಗಿ ಗುಳೆ ಹೋಗುತ್ತಿದ್ದರು. ಇದೀಗ ಇವರು ಕಾಫಿ ಬೆಳೆದಿದ್ದು, ಸಮೀಪದಲ್ಲೇ ಕಾಫಿ ತೋಟ ಸೊಂಪಾಗಿ ಬೆಳೆದಿರುವುದರಿಂದ ಅವರೀಗ ತೋಟಕ್ಕೆ ಕೆಲಸಕ್ಕೆ ಬರುತ್ತಿದ್ದಾರೆ. ಅಲ್ಲದೇ ಕಾರ್ಮಿಕರು ಗುಳೆ ಹೋಗುವುದನ್ನು ರೈತ ಕುಟುಂಬ ತಪ್ಪಿಸಿದೆ. ಅಡಕೆ ಮಧ್ಯದಲ್ಲಿ ಮಿಶ್ರ ಬೆಳೆಯಾಗಿ ಈ ರೈತ ಕುಟುಂಬ ಕಾಫಿ ಬೆಳೆದಿದ್ದು ಅದರಲ್ಲಿ ಯಶಸ್ವಿಯಾಗಿ ಕಾಫಿ ಬೆಳೆದ ಜಿಲ್ಲೆಗೆ ಪ್ರಥಮ ರೈತರು ಎನ್ನುವ ಹೆಗ್ಗಳಿಕೆಗೆ ಈ ಕುಟುಂಬ ಪಾತ್ರವಾಗಿದೆ.
"ಮೊದಲಿ ಅಡಕೆಗೆ ಹಾಕಿ 8 ವರ್ಷಗಳ ಬಳಿಕ ಕಾಫಿ ಹಾಕಿದ್ದೇವೆ. ಕಾಫಿ ಕೃಷಿ ಮಾಡಿ ಸುಮಾರು ಒಂದೂವರೆ ವರ್ಷ ಆಗಿದೆ. 70 ಸಾವಿರದಿಂದ 1 ಲಕ್ಷ ಹಣ ವ್ಯಯ ಮಾಡಿದ್ದೇವೆ. ಇದೀಗ ಮೂವತ್ತು ಕೆಜಿ ಕಾಫಿ ಫಸಲು ಬಂದಿದೆ. ಇನ್ನು ಬರುವ ನಿರೀಕ್ಷೆ ಇದೆ. ಮಲೆನಾಡು ಪ್ರದೇಶದಲ್ಲಿ ಬೆಳೆದಿರುವ ಕಾಫಿ ನೋಡಿಕೊಂಡು ಬಂದು ನಾವು ಬಯಲು ಸೀಮೆಯಲ್ಲಿ ಕಾಫಿ ಕೃಷಿ ಮಾಡಿದ್ದೇವೆ. ಒಟ್ಟು 2 ಸಾವಿರ ಗಿಡಗಳನ್ನು ನೆಡಲಾಗಿದೆ. ಇದು ಅಡಿಕೆಯೊಂದಿಗೆ ವಿಶ್ರ ಬೆಳೆಯಾಗಿ ಬೆಳೆಯಲಾಗುತ್ತಿದೆ" ಎನ್ನುತ್ತಾರೆ ರೈತ ಹನುಮಂತಪ್ಪ.
ಇದನ್ನೂ ಓದಿ: ಕೊಲಂಬಿಯಾ, ಬ್ರೆಜಿಲ್ ರೀತಿ ಪಾಲುದಾರರನ್ನು ಒಗ್ಗೂಡಿಸುವ ಪ್ರಯತ್ನಕ್ಕೆ ಕೈ ಹಾಕಿದ ಕಾಫಿ ಬೋರ್ಡ್ - COFFEE BOARD NEW PLAN