ದಾವಣಗೆರೆ: ಆಸ್ತಿಗಳಿಗೆ ಇ-ಸ್ವತ್ತು ಮಾಡಿಸಿ, ಇಲ್ಲವಾದಲ್ಲಿ ಮುಂದೆ ಸಮಸ್ಯೆ ಆಗಬಹುದು ಎಂದು ದಾವಣಗೆರೆ ಪಾಲಿಕೆ ಮೇಯರ್ ಕೆ.ಚಮನ್ ಸಾಬ್ ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.
ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿರುವ, ಅದರಲ್ಲೂ ಡಿಜಿಟಲ್ ಡೋರ್ ನಂಬರ್ ಇರುವ ಆಸ್ತಿಗಳಿಗೆ ಪಾಲಿಕೆಯಿಂದ ಇ-ಸ್ವತ್ತು ಮಾಡಲಾಗುತ್ತಿದೆ. ಇ-ಸ್ವತ್ತು ಮಾಡಿಸುವಲ್ಲಿ ಪಾಲಿಕೆ ಕೇವಲ ಶೇ.25-30ರಷ್ಟು ಪ್ರಗತಿ ಕಂಡಿದೆ. ಹೀಗಾಗಿ ಇ-ಸ್ವತ್ತು ಮಾಡಿಸುವಂತೆ ಪದೇ ಪದೇ ಮನವಿ ಮಾಡಲಾಗುತ್ತಿದೆ.
ಇ-ಸ್ವತ್ತು ಮಾಡಿಸಲು ಪಾಲಿಕೆಗೆ ಆಗಮಿಸುವ ಜನರನ್ನು ಅಧಿಕಾರಿಗಳು ಅಲೆದಾಡಿಸಿದರೆ, ಇಲ್ಲವೇ ಸತಾಯಿಸಿದರೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮೇಯರ್ ಎಚ್ಚರಿಕೆ ನೀಡಿದ್ದಾರೆ.
ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಎಸ್.ಮಲ್ಲಿಕಾರ್ಜುನ್ ಪ್ರತಿಕ್ರಿಯಿಸಿ, "ಇ-ಸ್ವತ್ತಿಗೆ ಅಲೆದಾಡಿಸಬೇಡಿ. ಆನ್ಲೈನ್ ಮೂಲಕ ಇದನ್ನು ಪಡೆಯಲು ವ್ಯವಸ್ಥೆ ಮಾಡಲಾಗುತ್ತಿದೆ. ನೀವು ಮನೆಯಲ್ಲಿ ಇದ್ದುಕೊಂಡು ಅರ್ಜಿ ಭರ್ತಿ ಮಾಡಿ, ಸಲ್ಲಿಸಬಹುದು. ರೆವೆನ್ಯೂ ನಿವೇಶನಗಳಿಗೆ ಇ-ಸ್ವತ್ತು ಕೊಡಲು ಬರುವುದಿಲ್ಲ. ಅಕ್ರಮ-ಸಕ್ರಮ ಕಾನೂನು ಬಂದಾಗ ಮಾಡಬಹುದು" ಎಂದರು.
ಮೇಯರ್ ಕೆ.ಚಮನ್ ಸಾಬ್ ಪ್ರತಿಕ್ರಿಯಿಸಿ, "ಇ-ಸ್ವತ್ತು ಶೇ 25ರಿಂದ 30ರಷ್ಟು ಆಗಿದೆ. ಇ-ಸ್ವತ್ತು ಮಾಡಿಸಿಲ್ಲ ಎಂದರೆ ನಿಮ್ಮ ಆಸ್ತಿ ರಿಜಿಸ್ಟರ್ ಆಗಲ್ಲ. ಆಸ್ತಿ ಖಾತೆ ಬದಲಾವಣೆ ಆಗಲ್ಲ. ಮನೆ ಕಟ್ಟಲು ಬ್ಯಾಂಕ್‌ನಲ್ಲಿ ಸಾಲ ಪಡೆಯಲು ತೊಂದರೆ ಆಗಬಹುದು. ಹೀಗಾಗಿ ಮುಂದಿನ ದಿನಗಳಲ್ಲಿ ಇ-ಸ್ವತ್ತು ಅನಿವಾರ್ಯ ಆಗಬಹುದು'' ಎಂದು ಹೇಳಿದರು.
ಇದನ್ನೂ ಓದಿ: ಆಸ್ತಿ ತೆರಿಗೆ ಪಾವತಿ; ದಾವಣಗೆರೆ ಜನತೆಗೆ ಇನ್ನೂ ಇದೆ ಉತ್ತಮ ಅವಕಾಶ! - Davanagere Corporation