ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲು ಸೇರಿರುವ ನಟ ದರ್ಶನ್ಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ್ದು, ಈ ಸಂಬಂಧ ಜಾಮೀನಿಗೆ ವಿಧಿಸಿರುವ ಷರತ್ತುಗಳನ್ನ ನಗರದ 57ನೇ ಸಿಸಿಹೆಚ್ ನ್ಯಾಯಾಲಯದಲ್ಲಿ ದರ್ಶನ್ ಪರ ವಕೀಲರು ಪೂರೈಸಿದ್ದಾರೆ.
2 ಲಕ್ಷ ರೂಪಾಯಿ ಬಾಂಡ್ ಹಾಗೂ ಇಬ್ಬರ ಶ್ಯೂರಿಟಿ, ಪಾಸ್ಪೋರ್ಟ್ ಒಪ್ಪಿಸಬೇಕೆಂಬುದು ಸೇರಿದಂತೆ ಹಲವು ಅಂಶಗಳ ಷರತ್ತಿನ ಆಧಾರದ ಮೇರೆಗೆ ಹೈಕೋರ್ಟ್ ಮಧ್ಯಂತರ ಜಾಮೀನು ಮಂಜೂರು ಮಾಡಿದ ಹಿನ್ನೆಲೆಯಲ್ಲಿ ದರ್ಶನ್ ಪರ ವಕೀಲ ಸುನೀಲ್ ಅವರು ಷರತ್ತುಗಳನ್ನು ಪೂರೈಸಿದ್ದಾರೆ.
ದರ್ಶನ್ ಸಹೋದರ ದಿನಕರ್ ಹಾಗೂ ನಟ ಧನ್ವೀರ್ ಅವರು ಶ್ಯೂರಿಟಿ ನೀಡಿದ್ದಾರೆ. ಹೈಕೋರ್ಟ್ ಆದೇಶದ ಪ್ರತಿ, ಬಾಂಡ್ ಹಾಗೂ ಶ್ಯೂರಿಟಿ ಪ್ರಮಾಣಪತ್ರದೊಂದಿಗೆ ದರ್ಶನ್ ಪಾಸ್ ಪೋರ್ಟ್ ಅನ್ನು ನ್ಯಾಯಾಲಯಕ್ಕೆ ಒಪ್ಪಿಸಲಾಯಿತು. ಇದನ್ನು ಮಾನ್ಯ ಮಾಡಿದ ನ್ಯಾಯಾಧೀಶರಾದ ಜೈಶಂಕರ್ ಅವರು ಇ-ಮೇಲ್ ಮುಖಾಂತರ ಬಳ್ಳಾರಿ ಜೈಲಿಗೆ ಆದೇಶ ಪ್ರತಿ ರವಾನಿಸುವಂತೆ ಸೂಚಿಸಿದರು. ಜೈಲಾಧಿಕಾರಿಗಳಿಗೆ ಜಾಮೀನು ಆದೇಶ ಪ್ರತಿ ಇಂದೇ ಲಭ್ಯವಾಗಲಿದ್ದು, ಬಿಡುಗಡೆಯ ಪ್ರಕ್ರಿಯೆ ಪೂರ್ಣಗೊಂಡ ಬಳಿಕ ಸಂಜೆಯೊಳಗೆ ದರ್ಶನ್ ಬಿಡುಗಡೆಯಾಗುವ ಸಾಧ್ಯತೆ ಹೆಚ್ಚಿದೆ.
ಅಭಿಮಾನಿಗಳ ಜಮಾವಣೆ ಸಾಧ್ಯತೆ: ಮಧ್ಯಂತರ ಜಾಮೀನು ಸಿಗುತ್ತಿದ್ದಂತೆ ಹರ್ಷ ವ್ಯಕ್ತಪಡಿಸಿರುವ ದರ್ಶನ್ ಅಭಿಮಾನಿಗಳು ಸಂಭ್ರಮಾಚರಣೆಗೆ ಮುಂದಾಗಿದ್ದಾರೆ. ದರ್ಶನ್ ಅವರನ್ನು ಅದ್ಧೂರಿಯಾಗಿ ಬರಮಾಡಿಕೊಳ್ಳಲು ಸಿದ್ಧತೆ ನಡೆಸುತ್ತಿದ್ದಾರೆ. ಈಗಾಗಲೇ ಬಳ್ಳಾರಿ ಜೈಲಿನ ಮುಂದೆ ಅಭಿಮಾನಿಗಳು ಸೇರಿದ್ದಾರೆ. ಬಳ್ಳಾರಿಯಿಂದ ಬೆಂಗಳೂರು ರಸ್ತೆ ಮಾರ್ಗವಾಗಿ ದರ್ಶನ್ ಬರುವ ಸಾಧ್ಯತೆಯಿದ್ದು, ಅಹಿತಕರ ಘಟನೆ ನಡೆಯದಂತೆ ಪೊಲೀಸರು ಮುಂಜಾಗ್ರತ ಕ್ರಮ ಕೈಗೊಂಡಿದ್ದಾರೆ.
ಬೆನ್ನು ನೋವು ಹಿನ್ನೆಲೆಯಲ್ಲಿ ದರ್ಶನ್ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುವ ಬಗ್ಗೆ ಅವರ ಪರ ವಕೀಲರು ಕೋರಿದ್ದರು. ಆದರೆ, ವಿಚಾರಣಾ ನ್ಯಾಯಾಲಯದ ವ್ಯಾಪ್ತಿಯಲ್ಲಿ ಬಿಟ್ಟು ತೆರಳುವಂತಿಲ್ಲ ಎಂದು ಷರತ್ತು ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯಬೇಕಾಗಿದೆ.
ಮಧ್ಯಂತರ ಜಾಮೀನಿಗೆ ವಿಧಿಸಿದ ಷರತ್ತುಗಳೇನು?
1. ಪಾಸ್ ಪೋರ್ಟ್ ಸರೆಂಡರ್
2. 2 ಲಕ್ಷ ರೂಪಾಯಿ ಬಾಂಡ್
3. ಇಬ್ಬರ ಶ್ಯೂರಿಟಿ
4. ಸಾಕ್ಷಿ ಮೇಲೆ ಪ್ರತ್ಯಕ್ಷ ಅಥವಾ ಪರೋಕ್ಷ ಬೆದರಿಕೆ ಹಾಕುವಂತಿಲ್ಲ
5. ಒಂದು ವಾರದಲ್ಲಿ ವೈದ್ಯಕೀಯ ಶಿಫಾರಸು ವರದಿ ಸಲ್ಲಿಸಬೇಕು
6. ಸಾಕ್ಷಿ ನಾಶಕ್ಕೆ ಪ್ರಯತ್ನ ಪಡಬಾರದು
7. ಸಾಕ್ಷಿಗಳ ಸಂಪರ್ಕ ಮಾಡಬಾರದು
8. ಜಾಮೀನಿನ ದುರುಪಯೋಗ ಮಾಡಿಕೊಳ್ಳುವಂತಿಲ್ಲ
ದರ್ಶನ್ ಪರ ವಕೀಲರು ಹೇಳಿದ್ದೇನು? ದರ್ಶನ್ ಪರ ವಕೀಲ ಸುನೀಲ್, ದರ್ಶನ್ಗೆ ಮಧ್ಯಂತರ ಜಾಮೀನಷ್ಟೇ ಸಿಕ್ಕಿದೆ. ರೆಗ್ಯೂಲರ್ ಬೇಲ್ಗೆ ಪಡೆಯಲು ಕಾನೂನು ಹೋರಾಟ ನಡೆಸಬೇಕಿದೆ. ದರ್ಶನ್ ಅವರಿಗೆ ಎಲ್-5 ಎಸ್- 1 ಗಳಲ್ಲಿ ಸಮಸ್ಯೆ ಇದೆ. ಇದು ಅವರಿಗೆ ಸದ್ಯಕ್ಕೆ ಬಂದಿರುವ ಸಮಸ್ಯೆಯಲ್ಲ. 2022ರಿಂದ ಈ ಸಮಸ್ಯೆಯಿದೆ. ಸದ್ಯ ಮಧ್ಯಂತರ ಬೇಲ್ ಸಿಕ್ಕಿದ್ದು ವೈದ್ಯಕೀಯ ವರದಿ ನೀಡುವಂತೆ ಕೋರ್ಟ್ ಸೂಚಿಸಿದೆ. ಕೆಲ ಷರತ್ತುಗಳೊಂದಿಗೆ ಜಾಮೀನು ಮಂಜೂರಾಗಿರುವುದಾಗಿ ತಿಳಿಸಿದ್ದಾರೆ.
ಇದನ್ನೂ ಓದಿ: ದರ್ಶನ್ ಇಂದೇ ಬಿಡುಗಡೆ ಸಾಧ್ಯತೆ: ನೆಚ್ಚಿನ ನಟನ ಕಾಣಲು ಕಾರಾಗೃಹದ ಮುಂದೆ ಅಭಿಮಾನಿಗಳ ಜಮಾವಣೆ