ಬಳ್ಳಾರಿ: ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಸಿಲುಕಿರುವ ನಟ ದರ್ಶನ್ ಬಳ್ಳಾರಿ ಸೆಂಟ್ರಲ್ ಜೈಲಿನಲ್ಲಿದ್ದು, ದರ್ಶನ್ ಪರ ಆಡಿಟರ್ ಜೈಲಿಗೆ ಭೇಟಿ ಕೊಟ್ಟಿದ್ದಾರೆ. ಐಟಿ ಅಧಿಕಾರಿಗಳಿಗೆ ಬೇಕಾದ ದಾಖಲಾತಿ ಮತ್ತು ಮಾಹಿತಿಯನ್ನು ಆಡಿಟರ್ ಹಂಚಿಕೊಳ್ಳಲಿದ್ದಾರೆ. ಆರೋಪಿ ದರ್ಶನ್ ವ್ಯವಹಾರದ ಸಂಪೂರ್ಣ ಮಾಹಿತಿ ಸಮೇತ ಆಗಮಿಸಿದ್ದಾರೆ.
ಮೊದಲು ಜೈಲಿಗೆ ಇನೋವಾ ಕಾರಿನಲ್ಲಿ ಆಡಿಟರ್ಗಳು ಆಗಮಿಸಿದರು. ಐಟಿ ಅಧಿಕಾರಿಗಳಿಗಾಗಿ ಸೀನಿಯರ್ ಆಡಿಟರ್ ಎಂಆರ್ ರಾವ್, ಅವರ ಅಸಿಸ್ಟೆಂಟ್ ಆಡಿಟರ್ ಕಾದು ಕುಳಿತಿದ್ದರು. ನಂತರ ಐಟಿ ಅಧಿಕಾರಿಗಳು ಭೇಟಿ ಕೊಟ್ಟರು.
ಜೈಲಿಗೆ ಬಂದ ನಾಲ್ವರು ಐಟಿ ಅಧಿಕಾರಿಗಳ ತಂಡ: ರೇಣುಕಾಸ್ವಾಮಿ ಕೊಲೆ ಪ್ರಕರಣದ ತನಿಖೆಯಲ್ಲಿ ಹಣ ಬಳಕೆ ಆರೋಪ ಕೇಳಿಬಂದಿದೆ. ದರ್ಶನ್ ವಿಚಾರಣೆ ಹಿನ್ನೆಲೆ ಬೆಂಗಳೂರು ಐಟಿ ಅಧಿಕಾರಿಗಳು ಜೈಲಿಗೆ ಆಗಮಿಸಿದ್ದಾರೆ. 11.32ಕ್ಕೆ ಎರಡು ವಾಹನಗಳಲ್ಲಿ ನಾಲ್ಕು ಜನ ಐಟಿ ಅಧಿಕಾರಿಗಳ ತಂಡ ಆಗಮಿಸಿದೆ. ಎರಡು ದಿನಗಳ ಕಾಲ ಜೈಲಿನಲ್ಲಿ ದರ್ಶನ್ ವಿಚಾರಣೆ ನಡೆಯಲಿದೆ. ದರ್ಶನ್ ಆಡಿಟರ್ ಸಮ್ಮುಖದಲ್ಲಿಯೇ ಐಟಿ ಅಧಿಕಾರಿಗಳಿಂದ ತನಿಖೆ ನಡೆಯಲಿದೆ. ಜೈಲು ಅಧಿಕಾರಿಗಳ ಕೊಠಡಿಯಲ್ಲಿ ದರ್ಶನ್ ವಿಚಾರಣೆ ನಡೆಯುವ ಸಾಧ್ಯತೆ ಇದೆ.
ಹೈಸೆಕ್ಯೂರಿಟಿ ಸೆಲ್ನಿಂದ ದರ್ಶನ್ ಆಗಮನ: ಅಧಿಕಾರಿಗಳು ಬಂದ ನಂತರ ಹೈಸೆಕ್ಯೂರಿಟಿ ಸೆಲ್ನಿಂದ 12.17ಕ್ಕೆ ದರ್ಶನ್ ಅವರನ್ನು ಜೈಲು ಸಿಬ್ಬಂದಿ ಐಟಿ ವಿಚಾರಣೆಗೆ ಕರೆತಂದರು. ಸಂಜೆಯವರೆಗೆ ವಿಚಾರಣೆ ನಡೆಯಲಿದ್ದು, ನಂತರ ಹೈಸೆಕ್ಯೂರಿಟಿ ಸೆಲ್ಗೆ ದರ್ಶನ್ ಅವರನ್ನು ಕರೆದೊಯ್ಯಲಿದ್ದಾರೆ. ವಿಚಾರಣೆ ಸಂದರ್ಭ ಅಧಿಕಾರಿಗಳು ವಿಡಿಯೋ ರೆಕಾರ್ಡ್ ಮಾಡಿಕೊಳ್ಳಲಿದ್ದಾರೆ.
ದರ್ಶನ್ ನೋಡಲು ಬಂದ ಆಪ್ತ: ಐಟಿ ಅಧಿಕಾರಿಗಳು ಆಗಮಿಸಿದ ಮೇಲೆ ದರ್ಶನ್ ನೋಡಲು ಅವರ ಆಪ್ತ ಪ್ರಕಾಶ್ ಆಗಮಿಸಿದರು. ಐಟಿ ವಿಚಾರಣೆ ನಂತರ ಭೇಟಿಗೆ ಅವಕಾಶ ಎಂದ ಕಾರಣಕ್ಕೆ ಹಿಂದಿರುಗಿದರು.
ನಿರ್ಮಾಪಕ ಜೆ.ವಿ. ಪ್ರಕಾಶ್ ಭೇಟಿ: ಗುರುವಾರ ಚಿತ್ರ ನಿರ್ಮಾಪಕರಾದ ಜೆ.ವಿ. ಪ್ರಕಾಶ್ ಹಾಗೂ ಸುನಿಲ್ ಕುಮಾರ್ ಕೂಡ ಬಳ್ಳಾರಿ ಜೈಲಿಗೆ ತೆರಳಿ ದರ್ಶನ್ ಭೇಟಿ ಮಾಡಿದರು. ಸುಮಾರು 20 ನಿಮಿಷಗಳ ಕಾಲ ದರ್ಶನ್ ಜೊತೆ ಜೆಬಿ ಪ್ರಕಾಶ್ ಚರ್ಚೆ ನಡೆಸಿದರು. 'ಡೆವಿಲ್' ಸಿನಿಮಾ ಚಿತ್ರೀಕರಣ ಅರ್ಧಕ್ಕೆ ನಿಂತ ಹಿನ್ನೆಲೆಯಲ್ಲಿ ಮಾತುಕತೆ ನಡೆಸಿರುವ ಸಾಧ್ಯತೆಗಳಿವೆ.
ಇದನ್ನೂ ಓದಿ: ಮಾಲಿವುಡ್ ಮೀಟೂ: ನಟ ಸಿದ್ದಿಕ್ ಮಿಸ್ಸಿಂಗ್, ಇಡವೆಲ ಬಾಬು ಅರೆಸ್ಟ್! - Mollywood MeToo case