ಚಿಕ್ಕಮಗಳೂರು: ದೇವಿರಮ್ಮ ದೇವಾಲಯದ ಗರ್ಭ ಗುಡಿಯ ಬಾಗಿಲಿಗೆ ಹಾಕಿದ್ದ ಪರದೆ ಓರ್ವ ವ್ಯಕ್ತಿ ಒಳ ಹೋಗುವಷ್ಟು ಸರಿದದ್ದನ್ನು ಕಂಡ ಭಕ್ತರು, ದೇವಿಯೇ ಗರ್ಭಗುಡಿ ಪ್ರವೇಶಿಸಿದಳೆಂದು ಸಂಭ್ರಮಿಸಿದರು.
ವರ್ಷದಲ್ಲಿ ಒಂದು ಬಾರಿ ದರ್ಶನ ನೀಡುವ ದೇವಿರಮ್ಮ, ತನ್ನನ್ನು ನೋಡಲು ಬೆಟ್ಟ ಹತ್ತಿ ಬರುವ ಭಕ್ತರಿಗಾಗಿ ದೀಪಾವಳಿ ಅಮವಾಸ್ಯೆಯ ಹಿಂದಿನ ರಾತ್ರಿ ಬೆಟ್ಟದಲ್ಲಿ ನೆಲೆಸಿರುತ್ತಾಳೆ. ತಾಯಿ ಬೆಟ್ಟವನ್ನಿಳಿದು ಗರ್ಭಗುಡಿ ಪ್ರವೇಶಿಸುತ್ತಾಳೆ ಎನ್ನುವ ನಂಬಿಕೆಗೆ 800 ವರ್ಷಗಳ ಇತಿಹಾಸವಿದೆ.
ಮೂರು ಸಾವಿರ ಅಡಿ ಎತ್ತರದಲ್ಲಿರುವ ಬೆಟ್ಟವನ್ನಿಳಿದು ಬಂದು ದೇವಿ ಗರ್ಭಗುಡಿ ಪ್ರವೇಶಿಸುತ್ತಾಳೆ ಅನ್ನೋದು ಭಕ್ತರ ನಂಬಿಕೆ. ಚಿಕ್ಕಮಗಳೂರಿನ ಬಿಂಡಿಗ ಮಲ್ಲೇನಹಳ್ಳಿ ದೇವಿರಮ್ಮನ ದೇವಾಲಯಕ್ಕೆ ಕಳೆದೆರಡು ದಿನಗಳಿಂದ ಸಾವಿರಾರು ಭಕ್ತರು ಆಗಮಿಸಿದ್ದಾರೆ. ಬೆಟ್ಟ ಹತ್ತೋ ಭಕ್ತರಿಗೆ ದರ್ಶನ ನೀಡಲೆಂದೇ ಅಮವಾಸ್ಯೆಯ ಹಿಂದಿನ ರಾತ್ರಿ ಬೆಟ್ಟದಲ್ಲಿ ನೆಲೆಸುವ ತಾಯಿ, ಇಂದು ಗರ್ಭಗುಡಿ ಪ್ರವೇಶಿಸುತ್ತಾಳೆ. ಈ ವೇಳೆ, ಗರ್ಭ ಗುಡಿಯ ಪರದೆ ತಾನಾಗೇ ತೆರೆದು ಕೊಳ್ಳುತ್ತೆಂಬುದು ಭಕ್ತರ ನಂಬಿಕೆ.
ಈ ಸುಮಧುರ ಘಳಿಗೆಯ ಕೌತುಕವನ್ನು ನೋಡಲು ಭಕ್ತರ ದಂಡೇ ಹರಿದು ಬಂದಿರುತ್ತೆ. ಅದರಂತೆ ಇಂದು ದೇವಾಲಯದ ಗರ್ಭ ಗುಡಿಯ ಬಾಗಿಲಿಗೆ ಹಾಕಿದ್ದ ಪರದೆ ಓರ್ವ ವ್ಯಕ್ತಿ ಒಳ ಹೋಗುವಷ್ಟು ಸರಿದದ್ದನ್ನು ಕಂಡ ಭಕ್ತರು ದೇವಿಯೇ ಗರ್ಭಗುಡಿ ಪ್ರವೇಶಿಸಿದಳೆಂದು ಸಂಭ್ರಮಿಸಿದ್ದಾರೆ. ವಾದ್ಯಗೋಷ್ಠಿ, ಅಷ್ಟದಿಕ್ಕುಗಳ ಪೂಜೆಯ ಬಳಿಕ 7 ಕಿ.ಮೀ. ಬೆಟ್ಟದ ಮೇಲಿರುವ ದೇವಿ ಕೆಳಗಿರುವ ದೇವಾಲಯವನ್ನು ಪ್ರವೇಶಿಸುತ್ತಾಳೆಂಬುದು ಭಕ್ತರ ನಂಬಿಕೆ.
ಪ್ರತಿ ವರ್ಷ ಸಾವಿರಾರು ಭಕ್ತರು ಈ ಮೂರು ದಿನ ಬಂದು ಹರಕೆ ತೀರಿಸುತ್ತಾರೆ. ಈ ವರ್ಷ ಮೂರು ಸಾವಿರ ಅಡಿಗೂ ಎತ್ತರದಲ್ಲಿರೋ ದೇವಿಯನ್ನು ಮಳೆಯ ಮಧ್ಯೆಯೂ 50 ಸಾವಿರಕ್ಕೂ ಅಧಿಕ ಭಕ್ತರು ಬರಿಗಾಲಲ್ಲೇ ಹತ್ತಿ ದರ್ಶನ ಪಡೆದಿದ್ದಾರೆ. ದೀಪಾವಳಿಯ ಬೆಳಗಿನ ಜಾವ ದೇವಾಲಯದ ಆವರಣದಲ್ಲಿ ಕೆಂಡ ತುಳಿಯೋ ಮೂಲಕವೂ ನೂರಾರು ಭಕ್ತರು ಹರಕೆ ತೀರಿಸುತ್ತಾರೆ. ನಿನ್ನೆ ಹಾಗೂ ಇಂದು ಭಕ್ತರು ತಂದ ಬಟ್ಟೆ, ಬೆಣ್ಣೆ, ತುಪ್ಪವನ್ನು ದೇವಾಲಯದ ಮುಂಭಾಗ ಸುಟ್ಟು ಅದನ್ನು ಭಕ್ತರಿಗೆ ಭಸ್ಮವಾಗಿ ನೀಡುತ್ತಾರೆ.
ಇದನ್ನೂ ಓದಿ: ಚಿಕ್ಕಮಗಳೂರು ದೇವಿರಮ್ಮ ದರ್ಶನ: ಬೆಟ್ಟ ಹತ್ತುವಾಗ ಬಿದ್ದು ಭಕ್ತರಿಗೆ ಗಾಯ