ಮಂಗಳೂರು: 'ನಾವು ಪೊಲೀಸ್ ಅಧಿಕಾರಿಗಳಾಗಿದ್ದು, ನಿಮ್ಮ ಮಕ್ಕಳನ್ನು ಬಂಧಿಸಿದ್ದೇವೆ. ನಿಮ್ಮ ಮಕ್ಕಳನ್ನು ಬಿಡುಗಡೆ ಮಾಡಲು ಹಣ ಕೊಡಿ' ಎಂದು ಪೊಲೀಸರ ಹೆಸರಿನಲ್ಲಿ ವಿದ್ಯಾರ್ಥಿಗಳ ಹೆತ್ತವರಿಗೆ ಕರೆಗಳು ಬರುತ್ತಿರುವ ಬಗ್ಗೆ ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಬಗ್ಗೆ ಮಾಹಿತಿ ನೀಡಿರುವ ಮಂಗಳೂರು ನಗರ ಪೊಲೀಸ್ ಕಮೀಷನರ್ ಅನುಪಮ್ ಅಗರ್ವಾಲ್ ಅವರು, ಕಳೆದ ಎರಡು ದಿನಗಳಲ್ಲಿ (ಜೂನ್ 11 ಮತ್ತು 12) ಮಂಗಳೂರು ನಗರದ ವಿವಿಧ ಶಾಲೆಗಳಲ್ಲಿ ಕಲಿಯುತ್ತಿರುವ ಹಲವಾರು ವಿದ್ಯಾರ್ಥಿಗಳ ಪೋಷಕರಿಗೆ ಈ ಬೆದರಿಕೆ ಕರೆಗಳು ಬಂದಿವೆ. ಈ ಕರೆಗಳನ್ನು WhatsApp ಮೂಲಕ ಮಾಡಲಾಗಿತ್ತು. ಇದರಲ್ಲಿ ಹೆಚ್ಚಾಗಿ ಪೋಲೆಂಡ್ ಮತ್ತು ಪಾಕಿಸ್ತಾನದಂತಹ ವಿದೇಶಿ ಸಂಖ್ಯೆಗಳನ್ನು ಹೊಂದಿದ್ದವು ಎಂದಿದ್ದಾರೆ.
ಕರೆ ಮಾಡಿದ ವ್ಯಕ್ತಿ ತನ್ನನ್ನು ತಾನು ಪೊಲೀಸ್ ಅಧಿಕಾರಿ ಎಂದು ಪರಿಚಯಿಸಿದ್ದಾನೆ ಮತ್ತು ಹಿಂದಿಯಲ್ಲಿ ಮಾತನಾಡುತ್ತ, ಆಯಾ ಪೋಷಕರಿಗೆ ಅವರ ಮಗ/ಮಗಳನ್ನು ಬಂಧಿಸಿರುವುದಾಗಿ ಮತ್ತು ಅವರನ್ನು ಬಿಡುಗಡೆ ಮಾಡಲು ಹಣಕ್ಕೆ ಒತ್ತಾಯಿಸಿದ್ದಾರೆ ಎಂದು ಹೇಳಿದ್ದಾರೆ.
ತಕ್ಷಣ ಪರಿಶೀಲಿಸಿದಾಗ ಎಲ್ಲ ಕರೆಗಳು ನಕಲಿಯಾಗಿವೆ ಮತ್ತು ವಿದ್ಯಾರ್ಥಿಗಳು ಸುರಕ್ಷಿತವಾಗಿದ್ದಾರೆ ಎಂದು ಕಂಡುಬಂದಿದೆ. ಈ ಕರೆಗಳನ್ನು ಶಾಲಾ ಅವಧಿಯಲ್ಲಿ ಮಾಡಲಾಗಿದ್ದು, ಪೋಷಕರಿಂದ ಬೆದರಿಸಿ ಹಣ ವಸೂಲಿ ಮಾಡಲಾಗಿದೆ. ಈ ಬಗ್ಗೆ ಮಂಗಳೂರು ನಗರದ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರು ಮಾಹಿತಿ ನೀಡಿದ್ದಾರೆ.
ಎಲ್ಲ ಪೋಷಕರು ಮತ್ತು ಸಂಸ್ಥೆಗಳು ಇಂತಹ ಕರೆಗಳಿಗೆ ಭಯಪಡಬೇಡಿ. ಅಪರಿಚಿತ ವಿದೇಶಿ ಸಂಖ್ಯೆಗಳಿಂದ ವಾಟ್ಸಪ್ನಲ್ಲಿ ಬರುವ ಯಾವುದೇ ಕರೆಗಳನ್ನು ಸ್ವೀಕರಿಸುವುದನ್ನು ತಪ್ಪಿಸಬೇಕು. ಅವರು ಅಂತಹ ಯಾವುದೇ ಕರೆಯನ್ನು ಸ್ವೀಕರಿಸಿದರೆ ತಕ್ಷಣ ಹತ್ತಿರದ ಪೊಲೀಸ್ ಠಾಣೆಗೆ ತಿಳಿಸಬೇಕು ಎಂದು ಸಲಹೆ ನೀಡಿದ್ದಾರೆ.
ಇದನ್ನೂ ಓದಿ: ಸೈಬರ್ ಕಳ್ಳರ ಹೊಸ ತಂತ್ರ 'ಡಿಜಿಟಲ್ ಅರೆಸ್ಟ್'? ಅವಶ್ಯವಾಗಿ ತಿಳಿಯಿರಿ, ಅಪಾಯದಿಂದ ಪಾರಾಗಿ! - Digital Arrest