ಮಂಗಳೂರು: ಶಾಸಕ ಹರೀಶ್ ಪೂಂಜ ಒಬ್ಬ ರೌಡಿಶೀಟರ್ ಗೋಸ್ಕರ ಎಲ್ಲೆ ಮೀರಿ ವರ್ತಿಸುತ್ತಿರುವುದು ಖಂಡನೀಯ. ಪೊಲೀಸರು ಠಾಣೆಗೆ ಕರೆದೊಯ್ಯಲು ಅವರ ಮನೆಗೆ ಬರುತ್ತಾರೆಂದರೆ ಪೂಂಜ ಬೆಳ್ತಂಗಡಿ ಜನಪ್ರತಿನಿಧಿಯಾಗಲು ಅರ್ಹರಲ್ಲ. ಆದ್ದರಿಂದ ಅವರು ರಾಜೀನಾಮೆ ನೀಡಿ ಮರು ಚುನಾವಣೆಯಲ್ಲಿ ಸ್ಪರ್ಧಿಸಿ ತಮ್ಮ ತಾಕತ್ತು ಪ್ರದರ್ಶನ ಮಾಡಲಿ ಎಂದು ಕಾಂಗ್ರೆಸ್ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್ ಆಗ್ರಹಿಸಿದ್ದಾರೆ.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಶಾಸಕ ಹರೀಶ್ ಪೂಂಜ ಬೆಳ್ತಂಗಡಿ ಜನತೆ, ಮತದಾರರಿಗೆ ಅಪಮಾನ ಮಾಡಿದ್ದಾರೆ. ಈ ಮೂಲಕ ತಾಲೂಕಿಗೆ ಕಳಂಕ ತರುವ ಕೆಲಸ ಮಾಡಿದ್ದಾರೆ. ರೌಡಿಶೀಟರ್, ಅಕ್ರಮ ಮರಳುಗಾರಿಕೆ, ಕಲ್ಲುಗಣಿಗಾರಿಕೆಯಲ್ಲಿ ತೊಡಗಿದವನನ್ನು ಅರೆಸ್ಟ್ ಮಾಡಿದರೆ ಶಾಸಕ ಪೂಂಜ ಅವರು ಠಾಣೆಗೆ ಹೋಗಿ ಪೊಲೀಸರೊಂದಿಗೆ ಹದ್ದುಮೀರಿ ವರ್ತಿಸುತ್ತಿದ್ದಾರೆ.
ಈ ಹಿಂದೆಯೂ ಇದೇ ರೀತಿ ವರ್ತಿಸಿದಾಗ ಪ್ರಕರಣ ದಾಖಲಾಗಿತ್ತು. ಅವರೊಬ್ಬ ರೌಡಿ ತರಹ ವರ್ತಿಸುತ್ತಿದ್ದಾರೆ. ಪ್ರಚಾರದಲ್ಲಿ ಇರಬೇಕೆಂಬ ಇರಾದೆಯಿಂದ ಅವರು ಈ ರೀತಿ ಮಾಡುತ್ತಿದ್ದಾರೆ. ಕಾರ್ಯಕರ್ತರನ್ನು ನೋಡಿ ಪೊಲೀಸರು ಹೆದರಿ ಹೋಗಿದ್ದಾರೆ ಎಂದು ಹೇಳುತ್ತಾರೆ. ಆದರೆ, ನಿನ್ನೆಯ ಘಟನೆ ವೀಡಿಯೊ ನೋಡಿದ್ರೆ ಪೊಲೀಸರು ಹೆದರಿದ್ದಲ್ಲ ಪೂಂಜ ಅವರೇ ಹೆದರಿದ್ದು ಎಂದು ಸ್ಪಷ್ಟವಾಗಿ ತಿಳಿದು ಬರುತ್ತದೆ ಎಂದರು.
ಸಿಎಂ ಸಿದ್ದರಾಮಯ್ಯರ ಬಗ್ಗೆ ಮಾತನಾಡುವಷ್ಟು ಪೂಂಜರಿಗೆ ಪ್ರಾಯ ಆಗಿಲ್ಲ. ಅವರ ಬಗ್ಗೆ ಮಾತನಾಡುವಷ್ಟು ರಾಜಕೀಯದಲ್ಲಿ ಪೂಂಜರು ಪಳಗಿಲ್ಲ. ಅವರು ಇನ್ನು ಬಚ್ಚಾ. ಈ ಪ್ರಕರಣದಲ್ಲಿ ಸರಕಾರದ ಯಾವುದೇ ಕೈವಾಡ ಇಲ್ಲ. ಕಾನೂನು ತನ್ನದೇ ಕೆಲಸ ಮಾಡುತ್ತಿದೆ. ಪೊಲೀಸರು ಕಾನೂನು ಪ್ರಕಾರ ಏನು ಕ್ರಮ ಕೈಗೊಳ್ಳುತ್ತಾರೋ ಅದನ್ನು ಕೈಗೊಳ್ಳಲಿ ಎಂದು ಹರೀಶ್ ಕುಮಾರ್ ಹೇಳಿದರು.
ಹರೀಶ್ ಪೂಂಜರಿಂದ ಹಿಂದೂ ಧರ್ಮಕ್ಕೆ ಅಪಮಾನ: ಕೆಪಿಸಿಸಿ ಕಾರ್ಯಾಧ್ಯಕ್ಷ ಮಂಜುನಾಥ ಭಂಡಾರಿ ಮಾತನಾಡಿ, ಕಳೆದ ವಿಧಾನಸಭೆ ಚುನಾವಣೆಯ ಬೆಳ್ತಂಗಡಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ರಕ್ಷಿತ್ ಶಿವರಾಮರ ಅವರನ್ನು ಹೀಯಾಳಿಸಲು ಹೋಗಿ ಶಾಸಕ ಹರೀಶ್ ಪೂಂಜರಿಂದ ಹಿಂದೂ ಧರ್ಮಕ್ಕೆ ಅವಮಾನಕರ ಹೇಳಿಕೆ ನೀಡಿದ್ದಾರೆ. ಇದು ಖಂಡನೀಯ ಎಂದು ಆರೋಪಿಸಿದರು.
ಹರೀಶ್ ಪೂಂಜ ಪ್ರತಿಭಟನೆಯಲ್ಲಿ ರಕ್ಷಿತ್ ಶಿವರಾಮರನ್ನು ಮಲ್ಲೇಶ್ವರಂನಿಂದ ಹಾರಿ ಬಂದ ಕಾಗೆ ಹೇಳಿರುವುದು ಸರಿಯಲ್ಲ. ಹಿಂದೂಧರ್ಮವನ್ನು ದತ್ತು ತೆಗೆದುಕೊಂಡಿದ್ದರಾ?, ಹಿಂದೂಧರ್ಮದ ಬಗ್ಗೆ ನಂಬಿಕೆಯಿರುವವರಿಗೆ ಹಿಂದೂ ಧರ್ಮದಲ್ಲಿ ಕಾಗೆಗೆ ಎಷ್ಟು ಬೆಲೆಯಿದೆ ಎಂದು ಗೊತ್ತಿಲ್ಲವೇ?. ನಮ್ಮ ಪೂರ್ವಜರಿಗೆ ಸದ್ಗತಿ ಸಿಕ್ಕಿದೆಯೋ ಇಲ್ಲವೋ ಎಂಬುದನ್ನು ನೋಡಲು ಎಡೆಯನ್ನು ಕಾಗೆಗೆ ಇಡಲಾಗುತ್ತದೆ. ಕಾಗೆಯನ್ನು ಶನಿದೇವನ ವಾಹನವೆಂದೇ ನಂಬಲಾಗುತ್ತದೆ. ಕಾಗೆಯನ್ನು ಹೋಲಿಸಿ ಹೇಳಿರುವುದು ನೇರವಾಗಿ ಹಿಂದೂಧರ್ಮಕ್ಕೆ ಮಾಡಿದ ಅಪಮಾನ ಎಂದು ಆರೋಪಿಸಿದರು.