ಹಾವೇರಿ: ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಸೋರಿಕೆಯಾಗಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಡೆದಿದೆ. ಆಕ್ಸಿಜನ್ ಸೋರಿಕೆಯ ಶಬ್ದ ಕೇಳುತ್ತಿದ್ದಂತೆ ಗಾಬರಿಗೊಂಡ ಗರ್ಭಿಣಿಯರು ಮತ್ತು ರೋಗಿಗಳು ಹಾಗೂ ಸಂಬಂಧಿಕರು ಹೊರಗೆ ಓಡಿದ್ದಾರೆ. ಈ ಮಧ್ಯೆ ಅಡುಗೆ ಅನಿಲ ಸೋರಿಕೆ ಆಗಿದೆ ಎಂದು ಸುದ್ದಿ ಹರಡುತ್ತಿದ್ದಂತೆ ಪರಸ್ಥಿತಿ ಮತ್ತಷ್ಟು ಬಿಗಡಾಯಿಸಿ ಹಸುಗೂಸು ಸಮೇತ ಬಾಣಂತಿಯರು ಕೂಡ ಆಸ್ಪತ್ರೆಯಿಂದ ಹೊರಗೆ ಬಂದಿದ್ದಾರೆ.
ಆಸ್ಪತ್ರೆಯ ಸಿಬ್ಬಂದಿ ಸೋರಿಕೆ ಆದ ಆಕ್ಸಿಜನ್ ಸಿಲಿಂಡರ್ ಸರಿಪಡಿಸಿದ ನಂತರ ಆಸ್ಪತ್ರೆಯಲ್ಲಿ ಆತಂಕ ಕಡಿಮೆಯಾಗಿದೆ. ಆಸ್ಪತ್ರೆ ಸಿಬ್ಬಂದಿ ಸೋರಿಕೆಯಾಗಿದ್ದು ಅಡುಗೆ ಅನಿಲ ಅಲ್ಲ. ಸೋರಿಕೆಯಾಗಿದ್ದು ಆಕ್ಸಿಜನ್ ಸಿಲಂಡರ್ ಅದನ್ನು ಸರಿಪಡಿಸಲಾಗಿದೆ ಎಂದು ರೋಗಿಗಳಿಗೆ ಆಸ್ಪತ್ರೆ ಸಿಬ್ಬಂದಿ ಮನವರಿಕೆ ಮಾಡಿದ ನಂತರ ರೋಗಿಗಳು ಸಂಬಂಧಿಕರು ವಾರ್ಡ್ ಒಳಗೆ ಹೋಗಿದ್ದಾರೆ. ಜಿಲ್ಲಾಸ್ಪತ್ರೆ ಎಂದಿನಂತೆ ಕಾರ್ಯನಿರ್ವಹಿಸುತ್ತಿದೆ.
ಈ ಬಗ್ಗೆ ಮಾತನಾಡಿದ ಜಿಲ್ಲಾಸ್ಪತ್ರೆ ಮುಖ್ಯ ವೈದ್ಯಾದಿಕಾರಿ ಡಾ.ಪಿ.ಆರ್. ಹಾವನೂರು, "ಹಾವೇರಿ ಜಿಲ್ಲಾಸ್ಪತ್ರೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿಲ್ಲ. ಜಿಲ್ಲಾಸ್ಪತ್ರೆಯಲ್ಲಿ ಆಕ್ಸಿಜನ್ ಸಿಲಿಂಡರ್ ಲೀಕ್ನಿಂದ ಆತಂಕದ ವಾತಾವರಣ ನಿರ್ಮಾಣವಾಗಿತ್ತು. ಎಮರ್ಜೆನ್ಸಿಗೆಂದು ವಾರ್ಡ್ನಲ್ಲಿ ಇಟ್ಟಿದ್ದ ಸಣ್ಣ ಸಿಲಿಂಡರ್ ಲೀಕ್ ಆಗಿದೆ. ಯಾವುದೇ ಸ್ಫೋಟ ಆಗಿಲ್ಲ. ವಾರ್ಡ್ನಲ್ಲಿ ಆಕ್ಸಿಜನ್ ಸಿಲಿಂಡರ್ ತಂದಿಟ್ಟಾಗ ಅಚಾನಕ್ಕಾಗಿ ತನ್ನಷ್ಟಕ್ಕೆ ತಾನೇ ಓಪನ್ ಆಗಿದೆ. ಹೈ ಪ್ರೆಷರ್ ಅಲ್ಲಿ ಆಗಿದ್ದಕ್ಕೆ ಶಬ್ಧ ಬಂದಿದೆ. ಸ್ಫೋಟ ಆಗಿದೆ ಅಂತ ಹೆದರಿ ಹೊರಗೆ ಓಡಿ ಬಂದಿದ್ದಾರೆ. ಯಾವುದೇ ತೊಂದರೆಯಾಗಿಲ್ಲ" ಎಂದು ಸ್ಪಷ್ಟಪಡಿಸಿದ್ದಾರೆ.