ಬೆಂಗಳೂರು: ಹಣಕಾಸಿನ ಸಮಸ್ಯೆ ಇದೆ ಎಂದು ತನ್ನ ಕಿಡ್ನಿ ಮಾರಲು ಮುಂದಾಗಿದ್ದ ವ್ಯಕ್ತಿಗೆ ಸೈಬರ್ ಖದೀಮರು 6 ಲಕ್ಷ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಚಾರ್ಟೆಡ್ ಅಕೌಂಟೆಂಟ್ ಕಚೇರಿಯಲ್ಲಿ ಲೆಕ್ಕಪರಿಶೋಧಕನಾಗಿ ಕೆಲಸ ಮಾಡುತ್ತಿರುವ ಶ್ರೀನಿವಾಸ್ ವಂಚನೆಗೊಳಗಾದವರು. ಸಾಲಗಾರರ ಕಾಟದಿಂದ ತತ್ತರಿಸಿದ್ದ ಇವರು, ಮನೆಯಲ್ಲಿದ್ದ ವೃದ್ಧ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು ಎಂದುಕೊಂಡಿದ್ದರು. ಹೀಗಾಗಿ ಶ್ರೀನಿವಾಸ್ ತಮ್ಮ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದರು.
ಕಿಡ್ನಿ ಮಾರಾಟ ಮಾಡಲು ಅವರು ಆನ್ಲೈನ್ ಮೊರೆ ಹೋಗಿದ್ದರು. ಈ ಬಗ್ಗೆ ವೆಬ್ಸೈಟ್ವೊಂದರಲ್ಲಿ ಹುಡುಕಾಟ ನಡೆಸಿ, ಯಾರಿಗಾದರೂ ತುರ್ತು ಕಿಡ್ನಿ ಬೇಕಾದರೆ ಸಂಪರ್ಕಿಸಿ ಎಂದು ಮೊಬೈಲ್ ನಂಬರ್ ನೀಡಿದ್ದರು. ಜೊತೆಗೆ ಬ್ಲಡ್ ಗ್ರೂಪ್, ಆರೋಗ್ಯ ಹಿನ್ನೆಲೆ ಬಗ್ಗೆಯೂ ಅಪ್ಡೇಟ್ ಮಾಡಿದ್ದರು. ಇದನ್ನು ಗಮನಿಸಿದ ಸೈಬರ್ ಖದೀಮರು ಕಿಡ್ನಿ ಕೊಟ್ಟರೆ ಎರಡು ಕೋಟಿ ರೂಪಾಯಿ ಹಣ ಕೊಡುವುದಾಗಿ ನಂಬಿಸಿದ್ದರು. ಜೊತೆ ಮೊಬೈಲ್ ನಂಬರ್ ಪಡೆದು ವಾಟ್ಸ್ಆ್ಯಪ್ ಕಾಲ್ ನಲ್ಲಿಯೂ ಮಾತನಾಡಿದ್ದರು. ಈ ಪ್ರಕ್ರಿಯೆಗೆ ಹಣ ಪಾವತಿಸಬೇಕೆಂದು ಹೇಳಿ ಹಂತ-ಹಂತವಾಗಿ ಶ್ರೀನಿವಾಸ್ ಅವರಿಂದ 6 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ. ಈ ಸಂಬಂಧ ವಂಚನೆಗೊಳಗಾದ ಶ್ರೀನಿವಾಸ್, ನಗರ ಕೇಂದ್ರ ವಿಭಾಗ ಸೆನ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇದನ್ನೂ ಓದಿ: ನಿರುದ್ಯೋಗಿಗಳಿಗೆ ಉದ್ಯೋಗದ ಭರವಸೆ ನೀಡಿ ವಂಚಿಸುತ್ತಿದ್ದ ದಂಪತಿ ಬಂಧನ
ಪ್ರತ್ಯೇಕ ಪ್ರಕರಣ- 250ಕ್ಕೂ ಹೆಚ್ಚು ಮಹಿಳೆಯರಿಗೆ ವಂಚಿಸಿದ್ದ ಆರೋಪಿ ಸೆರೆ: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ನಕಲಿ ಖಾತೆ ಸೃಷ್ಟಿಸಿ ತಾನೊಬ್ಬ ಕಸ್ಟಮ್ಸ್ ಅಧಿಕಾರಿ ಎಂದು ಮಹಿಳೆಯರಿಗೆ ವಂಚಿಸುತ್ತಿದ್ದ ಆರೋಪಿಯನ್ನು ರಾಜ್ಯ ರೈಲ್ವೆ ಪೊಲೀಸರು ಬಂಧಿಸಿದ್ದರು. ನರೇಶ್ ಪುರಿ ಗೋಸ್ವಾಮಿ (45) ಬಂಧಿತ ಆರೋಪಿ. ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಪವನ್ ಅಗರ್‌ವಾಲ್ ಹೆಸರಿನ ಪ್ರೊಫೈಲ್ ಸೃಷ್ಟಿಸಿಕೊಂಡಿದ್ದ ಆರೋಪಿ, ಕೊಯಮತ್ತೂರು ಮೂಲದ ವಿಚ್ಛೇದಿತ ಮಹಿಳೆಯೊಬ್ಬರಿಗೆ ತಾನೊಬ್ಬ ಕಸ್ಟಮ್ಸ್ ಅಧಿಕಾರಿ ಎಂದು ಪರಿಚಯಿಸಿಕೊಂಡಿದ್ದನು.
ಬಳಿಕ ವಿವಾಹದ ಮಾತುಕತೆಗಾಗಿ ಜನವರಿ 14ರಂದು ಆಕೆಯ ಪೋಷಕರನ್ನು ಬೆಂಗಳೂರಿಗೆ ಕರೆಸಿಕೊಂಡಿದ್ದ. ಆರೋಪಿಯ ಮಾತಿನಂತೆ ಬೆಂಗಳೂರಿಗೆ ಬಂದಿದ್ದ ಮಹಿಳೆಯ ಪೋಷಕರಿಗೆ ಕರೆ ಮಾಡಿ, 'ನನ್ನ ಚಿಕ್ಕಪ್ಪ ನಿಮ್ಮನ್ನು ರಿಸೀವ್ ಮಾಡಿಕೊಳ್ಳುತ್ತಾರೆ' ಅಂತಾ ತಿಳಿಸಿ ಮತ್ತೋರ್ವನನ್ನು ಕಳಿಸಿದ್ದ. ನಂತರ ಟಿಕೆಟ್ ರಿಸರ್ವೇಷನ್ ಮಾಡಿಸಬೇಕಿದೆ, ಪರ್ಸ್ ಅನ್ನು ಮನೆಯಲ್ಲಿಯೇ ಬಿಟ್ಟು ಬಂದಿದ್ದೇನೆ. ಮನೆಗೆ ಬಂದ ಮೇಲೆ ಹಣ ವಾಪಸ್ ನೀಡುವುದಾಗಿ ನಂಬಿಸಿ ಅವರಿಂದಲೇ 10 ಸಾವಿರ ರೂ. ಪಡೆದಿದ್ದನು. ಬಳಿಕ ಟಿಕೆಟ್ ರಿಸರ್ವೇಷನ್ ಮಾಡಿಸಿಕೊಂಡು ಬಂದುಬಿಡುತ್ತೇನೆಂದು ಹೇಳಿ ಫೋನ್ ಸ್ವಿಚ್ಡ್ ಆಫ್ ಮಾಡಿ ಅಲ್ಲಿಂದ ನಾಪತ್ತೆಯಾಗಿದ್ದ. ಆರೋಪಿಯ ವಂಚನೆಯ ಕುರಿತು ಮಹಿಳೆಯ ಪೋಷಕರು ರೈಲ್ವೇ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.