ಹಾವೇರಿ : ಜಿಲ್ಲೆಯ ಅನ್ನದಾತರು ಇದೀಗ ಅಕ್ಷರಶಃ ಕಂಗಾಲಾಗಿದ್ದಾರೆ. ಮಳೆರಾಯನ ಆರ್ಭಟಕ್ಕೆ ರೈತರ ಕನಸು, ನಿರೀಕ್ಷೆಗಳು ನೀರಿನಲ್ಲಿ ಕೊಚ್ಚಿಹೋಗಿವೆ.
ಮುಂಗಾರು ಹಂಗಾಮಿನಲ್ಲಿ ಅಧಿಕವಾಗಿ ಸುರಿದ ಮಳೆರಾಯ ರೈತರನ್ನ ಸಂಕಷ್ಟಕ್ಕೆ ಸಿಲುಕಿಸಿದ್ದ. ಅತಿವೃಷ್ಠಿಯಲ್ಲಿ ಸಹ ರೈತರು ತಾವು ಬೆಳೆದ ಶೇಂಗಾ, ಸೋಯಾಬಿನ್, ಮೆಕ್ಕೆಜೋಳ, ಹತ್ತಿ ಸೇರಿದಂತೆ ವಿವಿಧ ಬೆಳೆಗಳನ್ನು ರಕ್ಷಣೆ ಮಾಡಿಕೊಂಡಿದ್ದರು. ಕಾಲ ಕಾಲಕ್ಕೆ ಗೊಬ್ಬರ, ಕ್ರಿಮಿನಾಶಕ ಸಿಂಪಡಣೆ ಮಾಡಿ ಬೆಳೆಗಳನ್ನು ಜೋಪಾನ ಮಾಡಿಕೊಂಡಿದ್ದರು.
ರೈತರ ಶ್ರಮಕ್ಕೆ ಭೂಮಿತಾಯಿ ಸಹ ಪ್ರತಿಫಲ ನೀಡಿದ್ದಳು. ಅದರಲ್ಲೂ ಮೆಕ್ಕೆಜೋಳ, ಸೋಯಾಬಿನ್ ಬೆಳೆಗಳು ಅತ್ಯಧಿಕ ಫಸಲು ಹೊತ್ತು ನಿಂತಿದ್ದವು. ರೈತರು ತಾವು ಕಷ್ಟಪಟ್ಟಿದ್ದಕ್ಕೂ ಸಾರ್ಥಕವಾಯಿತು, ಇನ್ನೇನು ಮೆಕ್ಕೆಜೋಳ, ಸೋಯಾಬಿನ್ ಮಾರಾಟ ಮಾಡಿ ಆದಾಯ ಪಡೆಯುವ ಕನಸು ಕಂಡಿದ್ದರು. ಆದರೆ, ಕಳೆದ ವಾರ ಸುರಿದ ಮಳೆ ರೈತರ ಕನಸನ್ನು ನುಚ್ಚುನೂರು ಮಾಡಿದೆ.
ಈ ಬಗ್ಗೆ ರೈತ ಸಿದ್ದಪ್ಪ ಕಬ್ಬೂರು ಅವರು ಮಾತನಾಡಿ, 'ಜಮೀನಿನಲ್ಲಿ ತೆನೆ ಹೊತ್ತು ನಿಂತಿದ್ದ ಮೆಕ್ಕೆಜೋಳದ ತೆನೆಗಳಲ್ಲಿ ಮಳೆನೀರು ಹೋಗಿದೆ. ಪರಿಣಾಮ ಜಮೀನಿನಲ್ಲಿದ್ದ ತೆನೆಗಳಲ್ಲಿನ ಕಾಳುಗಳು ಮೊಳಕೆ ಒಡೆಯಲಾರಂಭಿಸಿವೆ. ತಮ್ಮ ಜಾನುವಾರುಗಳಿಗೆ ಮೇವು ಸಿಗಲಿ ಎಂದು ಬೆಳೆದಿದ್ದ ಮೆಕ್ಕೆಜೋಳದ ಸೊಪ್ಪೆ ಇರಲಿ, ಮೆಕ್ಕೆಜೋಳದ ಕಾಳುಗಳು ಸಹ ಜಾನುವಾರುಗಳಿಗೆ ಬರದಂತಾಗಿದೆ' ಎಂದು ಅಳಲು ತೋಡಿಕೊಂಡಿದ್ದಾರೆ.
ಮೆಕ್ಕೆಜೋಳದ ಖರ್ಚು ಸಹ ಬರದಂತಾಗಿದೆ : 'ಒತ್ತಾಯಪೂರ್ವಕವಾಗಿ ತಿನ್ನಿಸಿದರೆ ಜಾನುವಾರುಗಳನ್ನು ಆಸ್ಪತ್ರೆಗೆ ಸೇರಿಸಬೇಕಾಗುತ್ತದೆ. ಎಕರೆಗೆ 20 ರಿಂದ 25 ಸಾವಿರ ರೂಪಾಯಿ ಖರ್ಚು ಮಾಡಿ ಮೆಕ್ಕೆಜೋಳ ಬೆಳೆದಿದ್ದೇವೆ. ಬೆಳೆ ಸೋಂಪಾಗಿ ಬೆಳೆದಿತ್ತು. ತೆನೆ, ಕಾಳುಗಳು ಗಟ್ಟಿಯಾಗಿದ್ದವು. ಆದರೆ, ಮಳೆರಾಯನ ಆರ್ಭಟಕ್ಕೆ ತೆನೆಯಲ್ಲಿರುವ ಕಾಳುಗಳು ಮೊಳಕೆಯೊಡೆದಿವೆ. ಸಾಲಸೋಲ ಮಾಡಿ ಬಿತ್ತನೆ ಬೀಜ ಗೊಬ್ಬರ ತಂದು ಬಿತ್ತಿದ್ದೆವು. ಕ್ರಿಮಿನಾಶಕ ಸಿಂಪಡಣೆ ಮಾಡಿ, ಕಷ್ಟಪಟ್ಟು ಬೆಳೆ ಬೆಳೆದಿದ್ದೆವು. ಆದರೆ, ಇದೀಗ ಆದಾಯ ಇರಲಿ ಮೆಕ್ಕೆಜೋಳಕ್ಕೆ ಮಾಡಿದ ಖರ್ಚು ಸಹ ಬರದಂತಾಗಿದೆ' ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ನಮಗೆ ಬೆಳೆವಿಮೆಯಾದರೂ ನೀಡಲಿ : ಇಷ್ಟೆಲ್ಲಾ ಆದರೂ ಸಹ ನಮ್ಮ ಸಮಸ್ಯೆಗಳನ್ನ ಕೇಳಲು ಯಾವ ಅಧಿಕಾರಿಗಳು ಬರುತ್ತಿಲ್ಲ, ಜನಪ್ರತಿನಿಧಿಗಳು ಬರುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. ನಮ್ಮ ಬೆಳೆ ಹಾನಿಗೆ ಸರ್ಕಾರ ಪರಿಹಾರ ನೀಡುವುದಿರಲಿ, ನಾವು ಕಟ್ಟಿದ್ದ ಬೆಳೆವಿಮೆ ಬಿಡುಗಡೆಯಾಗಿಲ್ಲ. ಕನಿಷ್ಠ ಪಕ್ಷ ನಮಗೆ ಬೆಳೆವಿಮೆಯಾದರೂ ನೀಡಲಿ ಎಂದು ರೈತರು ಮನವಿ ಮಾಡಿದ್ದಾರೆ.
ಇದನ್ನೂ ಓದಿ : ವಿಜಯಪುರ: ಮಳೆಗೆ ನೆಲಕಚ್ಚಿದ ಕಬ್ಬು, ಈರುಳ್ಳಿ; ಸಾಲ ಮಾಡಿ ಬೆಳೆ ಬೆಳೆದ ರೈತ ಕಂಗಾಲು - Vijayapura Rain