ಬೆಂಗಳೂರು: ಟಿ20 ವಿಶ್ವಕಪ್ 2024ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ತಂಡವನ್ನು ಮಣಿಸಿದ ಟೀಂ ಇಂಡಿಯಾ ಫೈನಲ್ ಪ್ರವೇಶಿಸಿದೆ. 2007ರಲ್ಲಿ ಚುಟುಕು ವಿಶ್ವಕಪ್‌ನ ಚೊಚ್ಚಲ ಸರಣಿ ಗೆದ್ದು ಬೀಗಿದ್ದ ಭಾರತ ನಂತರದ ಆವೃತ್ತಿಗಳಲ್ಲಿ ಚಾಂಪಿಯನ್ ಆಗಿ ಹೊರಹೊಮ್ಮಲು ಸಾಧ್ಯವಾಗಿಲ್ಲ. ಬಾಂಗ್ಲಾದೇಶ ಆತಿಥ್ಯ ವಹಿಸಿದ್ದ 2014ರ ಟಿ20 ವಿಶ್ವಕಪ್‌ನಲ್ಲಿ ಫೈನಲ್ ತಲುಪಿದ್ದ ಭಾರತ, ಲಂಕಾ ವಿರುದ್ಧ 6 ವಿಕೆಟ್‌ಗಳ ಅಂತರದ ಸೋಲು ಅನುಭವಿಸಿತ್ತು.
ಇದೀಗ ಹಲವು ವರ್ಷಗಳ ಬಳಿಕ ಭಾರತ ಚಾಂಪಿಯನ್ ಪಟ್ಟಕ್ಕೇರುವ ಸುವರ್ಣಾವಕಾಶ ಒದಗಿ ಬಂದಿದೆ. ಇದೇ ಮೊದಲ ಬಾರಿಗೆ ದಕ್ಷಿಣ ಆಫ್ರಿಕಾ ತಂಡ ಟಿ20 ವಿಶ್ವಕಪ್ ಫೈನಲ್ ತಲುಪಿದೆ. ಟೂರ್ನಿಯಲ್ಲಿ ಅಜೇಯವಾಗಿ ಫೈನಲ್ ಹಂತ ತಲುಪಿರುವ ಉಭಯ ತಂಡಗಳು ನಾಳೆ ಪ್ರಶಸ್ತಿಗಾಗಿ ಸೆಣಸಾಡಲಿವೆ.
ಈ ಕುರಿತು ಕ್ರಿಕೆಟ್ ಅಭಿಮಾನಿ ರಾಜವರ್ಧನ್ 'ಈಟಿವಿ ಭಾರತ'ದ ಜೊತೆ ಮಾತನಾಡಿ, "ಫೈನಲ್ ಪಂದ್ಯದಲ್ಲಿ ನಿರಾಶೆ ಅನುಭವಿಸದಿದ್ದರೆ ಸಾಕು. ಭಾರತ 2007 ಹಾಗೂ 2011ರಲ್ಲಿ (ಏಕದಿನ ಮಾದರಿ) ವಿಶ್ವ ಚಾಂಪಿಯನ್ ಆದಂತೆ ಈ ಬಾರಿಯೂ ಸಹ ಗೆದ್ದು, ವಿರಾಟ್ ಹಾಗೂ ರೋಹಿತ್ ಶರ್ಮಾ ಟ್ರೋಫಿ ಎತ್ತಿ ಹಿಡಿದರೆ ಅದೇ ಖುಷಿ. ಇನ್ನು ಯುವ ಆಟಗಾರರಿಗೆ ಸ್ಥಾನ ಕಲ್ಪಿಸುವುದು ಸರಿ. ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಇದು ಕೊನೆಯ ಟಿ20 ವಿಶ್ವಕಪ್ ಆಗದಿರಲಿ. ಹಾಗಿದ್ದರೆ ಇಬ್ಬರಿಗೂ ಈ ವಿಶ್ವಕಪ್ ಗೌರವ ಸಿಗಲಿ" ಎಂದರು.
ಕ್ರಿಕೆಟ್ ಅಭಿಮಾನಿ ರಜತ್ ಟಿ.ಆರ್. ಮಾತನಾಡಿ, "ಈ ಬಾರಿಯ ವಿಶ್ವಕಪ್ ತಂಡದ ಪ್ರತಿ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಏಕದಿನ ವಿಶ್ವಕಪ್‌ನಲ್ಲಿ ಟೂರ್ನಿಯುದ್ದಕ್ಕೂ ಉತ್ತಮ ಪ್ರದರ್ಶನದ ನಡುವೆಯೂ ಆಸ್ಟ್ರೇಲಿಯಾ ವಿರುದ್ಧ ಭಾರತ ಸೋತಾಗ ಬೇಸರವಾಯಿತು. ಈ ಬಾರಿ ಹಾಗೆ ಆಗಬಾರದು. ದಕ್ಷಿಣ ಆಫ್ರಿಕಾ ಸಹ ಉತ್ತಮ ಪ್ರದರ್ಶನದೊಂದಿಗೆ ಅಜೇಯವಾಗಿ ಫೈನಲ್ ತಲುಪಿದೆ. ಆದ್ದರಿಂದ ಇಂದಿನ ಫೈನಲ್ ಪಂದ್ಯದ ಮೇಲೆ ನಿರೀಕ್ಷೆ ಹೆಚ್ಚಾಗಿದೆ" ಎಂದು ಹೇಳಿದರು.
ಶನಿವಾರ ಬ್ರಿಡ್ಜ್ ಟೌನ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ನಡೆಯಲಿರುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳು ಚಾಂಪಿಯನ್ ಪಟ್ಟಕ್ಕಾಗಿ ಕಾದಾಡಲಿವೆ.