ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ನಟ ದರ್ಶನ್ಗೆ ಮನೆ ಊಟ ತರಿಸಿಕೊಳ್ಳಲು ಕೋರಿ ಸಲ್ಲಿಸಿದ್ದ ಅರ್ಜಿಯ ಸಂಬಂಧ ಆಕ್ಷೇಪಣೆ ಸಲ್ಲಿಸಲು ಎಸ್ಐಟಿಗೆ ನ್ಯಾಯಾಲಯ ಸೂಚನೆ ನೀಡಿದೆ. ಅರ್ಜಿಯ ವಿಚಾರಣೆ ನಡೆಸಿದ 24ನೇ ಎಸಿಎಂಎಂ ನ್ಯಾಯಾಲಯವು ಈ ಸೂಚನೆ ನೀಡಿ ವಿಚಾರಣೆಯನ್ನು ಸೋಮವಾರಕ್ಕ ಮುಂದೂಡಿದೆ.
ವಿಚಾರಣೆ ವೇಳೆ ದರ್ಶನ್ ಪರ ವಕೀಲರು ಅರ್ಜಿ ಸಲ್ಲಿಸಿ, ''ಅರ್ಜಿದಾರರಿಗೆ ಊಟದಲ್ಲಿ ವಿಷಕಾರಿ ಸೂಕ್ಷ್ಮಾಣು ಜೀವಿಗಳು ಸೇರ್ಪಡೆಯಾಗಿದ್ದು, ಮನೆಯಿಂದ ಊಟ ತರಿಸಿಕೊಳ್ಳಲು ಅವಕಾಶ ಕಲ್ಪಿಸಬೇಕು. ಊಟದಲ್ಲಿ ವಿಷಕಾರಿ ಸೂಕ್ಷ್ಮಾಣು ಜೀವಿಗಳು ಸೇರಿರುವ ಸಂಬಂಧ ಮೆಡಿಕಲ್ ವರದಿ ಬಂದಿದೆ. ಈ ವರದಿಯನ್ನು ನೋಡಿ ಅರ್ಜಿಯಲ್ಲಿ ಸೇರಿಸಬಹುದಾಗಿದೆ'' ಎಂದು ಕೋರಿದರು.
ಎಸ್ಪಿಪಿ ಪ್ರಕರಣ ಸಂಬಂಧ ಆಕ್ಷೇಪಣೆ ಸಲ್ಲಿಸಲು ಕಾಲಾವಕಾಶ ನೀಡಬೇಕು. ಸೋಮವಾರ ವೈದ್ಯಕೀಯ ವರದಿ ನಮ್ಮ ಕೈಗೆ ಸಿಗಲಿದೆ. ಅದರಂತೆ ಮಂಗಳವಾರ ಆಕ್ಷೇಪಣೆ ಸಲ್ಲಿಸಲಾಗುವುದು ಎಂದು ತಿಳಿಸಿದರು.
ಇದಕ್ಕೆ ನ್ಯಾಯಾಧೀಶರು, ''ಈ ಪ್ರಕರಣದಲ್ಲಿ ಹೈಕೋರ್ಟ್ ನಿರ್ದೇಶನವಿದೆ. ಹೀಗಾಗಿ, ಪ್ರಕರಣವನ್ನು 27ನೇ ತಾರೀಕಿನೊಳಗೆ ಮುಕ್ತಾಯ ಮಾಡಬೇಕು. ಹೀಗಾಗಿ, ಮಂಗಳವಾರದವರೆಗೂ ಅವಕಾಶ ಸಾಧ್ಯವಿಲ್ಲ. ಸೋಮವಾರವೇ ಆಕ್ಷೇಪಣೆ ಸಲ್ಲಿಸಬೇಕು'' ಎಂದು ಸೂಚಿಸಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.
ಪ್ರಕರಣದ ಹಿನ್ನೆಲೆ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ದರ್ಶನ್, ಕಾರಾಗೃಹದಲ್ಲಿ ನೀಡುತ್ತಿರುವ ಆಹಾರ ರೀತಿಯಲ್ಲಿ ಜೀರ್ಣವಾಗುತ್ತಿಲ್ಲ. ಹೀಗಾಗಿ, ಕೆಲವು ದಿನಗಳಿಂದ ಅತಿಸಾರ(ಭೇದಿ)ದಿಂದ ಬಳಲುತ್ತಿದ್ದಾರೆ. ಜೈಲಿನ ಆರೋಗ್ಯಾಧಿಕಾರಿಗಳ ಪರಿಶೀಲನೆ ನಡೆಸಿದ್ದ ಆಹಾರದಲ್ಲಿ ವಿಷಕಾರಿ ಸೂಕ್ಷ್ಮ ಜೀವಿಗಳು ಸೇರಿವೆ ಎಂದು ತಿಳಿಸಿದ್ದಾರೆ. ಜೊತೆಗೆ, ಅರ್ಜಿದಾರರು ತೂಕದಲ್ಲಿಯೂ ಕಡಿಮೆಯಾಗಿದ್ದಾರೆ. ಇದರಿಂದ ಕಾರಾಗೃಹದಲ್ಲಿ ವಿತರಣೆ ಮಾಡುತ್ತಿರುವ ಆಹಾರ ಸೇವನೆ ಮಾಡುವುದಕ್ಕೆ ಸಾಧ್ಯವಾಗದ ಪರಿಸ್ಥಿತಿಗೆ ತಲುಪಿಸಿದ್ದಾರೆ ಎಂದು ಮನವಿ ಮಾಡಿದ್ದರು.
ಮನೆ ಆಹಾರ ತರಿಸಿಕೊಳ್ಳುವುದಕ್ಕೆ ಅವಕಾಶ ನೀಡಬೇಕು ಎಂದು ಜೈಲು ಅಧಿಕಾರಿಗಳಿಗೆ ಈಗಾಗಲೇ ಮೌಖಿಕವಾಗಿ ಮನವಿ ಮಾಡಿದ್ದಾರೆ. ಆದರೆ, ಅಧಿಕಾರಿಗಳು ಹೈಕೋರ್ಟ್ ಆದೇಶವಿಲ್ಲದೇ, ಅರ್ಜಿದಾರರ ಕುಟುಂಬಸ್ಥರು ಮನೆಯಲ್ಲಿ ಸಿದ್ಧಪಡಿಸಿದ ಆಹಾರವನ್ನು ಒದಗಿಸಲು ಅನುಮತಿ ನೀಡಲಾಗುವುದಿಲ್ಲ ಎಂದು ತಿಳಿಸಿ ನಿರಾಕರಿಸಿದ್ದಾರೆ. ಅರ್ಜಿದಾರರು ದೊಡ್ಡ ಪ್ರಮಾಣವಾಗಿ ತೂಕ ಕಳೆದುಕೊಳ್ಳುತ್ತಿದ್ದಾರೆ. ಇದೇ ರೀತಿ ಮುಂದುವರೆದಲ್ಲಿ ಆರೋಗ್ಯ ಹದಗೆಡುವ ಸಾಧ್ಯತೆಯಿದೆ. ಹೀಗಾಗಿ, ಮನೆ ಊಟ ತರಿಸಿಕೊಳ್ಳಲು ಅವಕಾಶ ನೀಡಬೇಕು ಎಂದು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಸೆಷನ್ಸ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸೂಚನೆ ನೀಡಿ ಆದೇಶಿಸಿತ್ತು.
ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ಆರೋಪಿ ರಾಘವೇಂದ್ರಗೆ ಅವಕಾಶ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿರುವ ರಾಘವೇಂದ್ರ ತನ್ನ ತಾಯಿಯ ಅಂತ್ಯಕ್ರಿಯೆಯಲ್ಲಿ ಭಾಗವಹಿಸಲು ನ್ಯಾಯಾಲಯ ಅವಕಾಶ ನೀಡಿದೆ. ಪ್ರಕರಣ ಸಂಬಂಧ ರಾಘವೇಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ 24ನೇ ಎಸಿಎಂಎಂ ನ್ಯಾಯಾಲಯ ಈ ಆದೇಶ ನೀಡಿದೆ. ಪೊಲೀಸ್ ಭದ್ರತೆಯಲ್ಲಿ ಕರೆದೊಯ್ಯಲು ಸೂಚನೆ ನೀಡಲಾಗಿದೆ.
ಇದನ್ನೂ ಓದಿ: ಮಕ್ಕಳ ಆಶ್ಲೀಲ ಚಿತ್ರ ವೀಕ್ಷಣೆ ಅಪರಾಧವಲ್ಲ ಎಂದು ನೀಡಿದ್ದ ಆದೇಶ ಹಿಂಪಡೆದ ಹೈಕೋರ್ಟ್ - High Court