ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆಯ ವೇಳೆ ಬಿಜೆಪಿ ನೇತೃತ್ವದ ರಾಜ್ಯ ಸರ್ಕಾರದ ವಿರುದ್ಧ ಜಾಹೀರಾತು ಪ್ರಕಟಿಸಿ ಮಾನಹಾನಿ ಮಾಡಿದ ಆರೋಪ ಪ್ರಕರಣ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ನ್ಯಾಯಾಲಯವು ಜಾಮೀನು ಮಂಜೂರು ಮಾಡಿದೆ. ಇದೇ ವೇಳೆ ಪ್ರಕರಣದಲ್ಲಿ ಸಂಸದ ರಾಹುಲ್ ಗಾಂಧಿ ಖುದ್ದು ಹಾಜರಾತಿಗೆ ಜೂನ್ 7ರ ವರೆಗೂ ವಿನಾಯ್ತಿ ನೀಡಿ ಆದೇಶಿಸಲಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ಗೆ ತಲಾ 50 ಸಾವಿರ ಬಾಂಡ್ ಮತ್ತು ಐದು ಸಾವಿರ ನಗದು ಶ್ಯೂರಿಟಿ ಪಡೆದು ನ್ಯಾಯಾಲಯ ಜಾಮೀನು ಮಂಜೂರು ಮಾಡಿದೆ.
ಪ್ರಕರಣ ಸಂಬಂಧ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಖುದ್ದು ಹಾಜರಾಗಿ, ನ್ಯಾಯಾಧೀಶರಿಗೆ ಕೈ ಮುಗಿದು ನಿಂತರು. ಬಳಿಕ ಅವರ ಪರ ವಕೀಲರು ಅರ್ಜಿ ಸಲ್ಲಿಸಿ, ತಮ್ಮ ಕಕ್ಷಿದಾರರಿಗೆ ಜಾಮೀನು ಮಂಜೂರು ಮಾಡಬೇಕು ಎಂದು ಕೋಟ್ರ್ಗೆ ಮನವಿ ಮಾಡಿದರು.
ಈ ಅಂಶ ಪರಿಗಣಿಸಿದ ನ್ಯಾಯಾಲಯ, ಅರ್ಜಿಯ ಸಂಬಂಧ ಮಧ್ಯಾಹ್ನ 3 ಗಂಟೆಗೆ ಆದೇಶ ಪ್ರಕಟಿಸಲಾಗುವುದು ಎಂದು ತಿಳಿಸಿ, ತಾವು ಇನ್ನು ಹೊರಡಬಹುದು ಎಂದು ಸೂಚಿಸಿದರು. ತಕ್ಷಣ ಇಬ್ಬರೂ ನಾಯಕರು ನ್ಯಾಯಾಲಯದಿಂದ ಹೊರನಡೆದರು. ಪ್ರಕರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪರವಾಗಿ ಸೂರ್ಯ ಮುಕುಂದರಾಜು, ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಎಸ್.ಎ.ಅಹ್ಮದ್ ಮತ್ತು ಸಿ.ಆರ್.ದೀಪು ಮತ್ತು ರಾಹುಲ್ ಗಾಂಧಿ ಅವರಿಗೆ ನಿಶಿತ್ ಶೆಟ್ಟಿ ಮತ್ತು ಕೆಪಿಸಿಸಿ ಪರವಾಗಿ ಸಂಜಯ್ ಯಾದವ್ ಅವರು ವಕಾಲತ್ತು ವಹಿಸಿದ್ದರು.
ಪ್ರಕರಣದ ಹಿನ್ನೆಲೆ: ಕಳೆದ ವಿಧಾನಸಭೆ ಚುನಾವಣೆಯ ಹಿನ್ನೆಲೆಯಲ್ಲಿ ಬಿಜೆಪಿ ವಿರುದ್ಧ ಭ್ರಷ್ಟಾಚಾರವನ್ನು ಪ್ರಧಾನ ಅಸ್ತ್ರವಾಗಿಸಿದ್ದ ಕಾಂಗ್ರೆಸ್ 2023ರ ಮೇ 5ರಂದು ಎಲ್ಲಾ ಪ್ರಮುಖ ಪತ್ರಿಕೆಗಳ ಮುಖಪುಟದಲ್ಲಿ 'ಭ್ರಷ್ಟಾಚಾರ ದರ ಪಟ್ಟಿ' ಎಂಬ ಹೆಸರಿನ ಅಡಿ ವಿವಿಧ ಹುದ್ದೆಗಳಿಗೆ ಬಿಜೆಪಿ ಲಂಚ ನಿಗದಿಪಡಿಸಿದೆ ಎಂದು ಆರೋಪಿಸಿತ್ತು.
ಅಲ್ಲದೇ, ಕೋವಿಡ್ ಸಾಮಗ್ರಿಗಳ ಪೂರೈಕೆ, ಲೋಕೋಪಯೋಗಿ ಗುತ್ತಿಗೆಗಳು, ಮಠಗಳಿಗೆ ಅನುದಾನ, ಶಾಲೆಗಳಿಗೆ ಮೊಟ್ಟೆ ಪೂರೈಕೆ, ರಸ್ತೆ ಕಾಮಗಾರಿಗಳಲ್ಲಿ ಶೇ. 75-30% ಕಮಿಷನ್ ಪಡೆಯಲಾಗುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿತ್ತು. ಪತ್ರಿಕೆಗಳಿಗೆ ನೀಡಿದ ಜಾಹೀರಾತಿನ ಕೊನೆಯಲ್ಲಿ ಶೇ. 40 ಕಮಿಷನ್ನ (ಬಿಜೆಪಿ) ಸರ್ಕಾರವು 1.5 ಲಕ್ಷ ಕೋಟಿ ರೂ.ಗಳನ್ನು ಕಳೆದ ನಾಲ್ಕು ವರ್ಷಗಳಲ್ಲಿ ಲೂಟಿ ಮಾಡಿದೆ ಎಂದು ಆರೋಪಿಸಿತ್ತು.
ಡಬಲ್ ಎಂಜಿನ್ ಸರ್ಕಾರಕ್ಕೆ ಬದಲಾಗಿ, ಟ್ರಬಲ್ ಎಂಜಿನ್ ಸರ್ಕಾರ ಎಂದು ಹೇಳುವ ಮೂಲಕ ಬಿಜೆಪಿಯ ವರ್ಚಸ್ಸಿಗೆ ಹಾನಿ ಮಾಡಿ, ಚುನಾವಣೆಯಲ್ಲಿ ಗೆಲುವಿಗೆ ಅಡ್ಡಿಪಡಿಸಲಾಗಿದೆ. ಕೊನೆಯಲ್ಲಿ ಕಾಂಗ್ರೆಸ್‌ಗೆ ಮತ ನೀಡಿ ಎಂದು ಆರೋಪಿಗಳು ಕೇಳಿದ್ದಾರೆ. ಸುಳ್ಳು ಜಾಹೀರಾತು ನೀಡಲು ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಹಾಗೂ ರಾಹುಲ್ ಗಾಂಧಿ ಅವರು ನೇರ ಕಾರಣವಾಗಿದ್ದಾರೆ ಎಂದು ಆರೋಪಿಸಿ ಬಿಜೆಪಿ ಖಾಸಗಿ ದೂರು ದಾಖಲಿಸಿತ್ತು.
ಇದನ್ನೂ ಓದಿ: ಬಿಜೆಪಿ ವಿರುದ್ಧ ಮಾನಹಾನಿಕರ ಜಾಹೀರಾತು: ನ್ಯಾಯಾಲಯದ ಮುಂದೆ ಹಾಜರಾಗಲಿದ್ದಾರೆ ಸಿಎಂ ಸಿದ್ದರಾಮಯ್ಯ - CM Siddaramaiah