ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ ಅವರು ಮನೆ ಊಟಕ್ಕೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ನಗರದ 24ನೇ ಎಸಿಎಂಎಂ ನ್ಯಾಯಾಲಯ ವಜಾಗೊಳಿಸಿದೆ.
ಆರೋಪಿಗೆ ಎಲ್ಲಾ ಮೂಲಭೂತ ಸೌಕರ್ಯ ಒದಗಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿರುವ ನ್ಯಾಯಾಲಯ, ದರ್ಶನ್ ಅರ್ಜಿಯನ್ನು ವಜಾ ಮಾಡಿದೆ. ಇದರಿಂದ ದರ್ಶನ್ ಅವರಿಗೆ ಹೈಕೋರ್ಟ್ ಮೊರೆ ಹೋಗುವುದೊಂದೇ ಮುಂದಿನ ಆಯ್ಕೆಯಾಗಿದೆ.
ಜೈಲಿನಲ್ಲಿ ನೀಡುತ್ತಿರುವ ಆಹಾರವನ್ನು ತಮ್ಮಿಂದ ಜೀರ್ಣಿಸಿಕೊಳ್ಳಲಾಗದೆ ಅತಿಸಾರ ಉಂಟಾಗಿದ್ದು, ಪದೇ ಪದೆ ಭೇದಿಯಾಗುತ್ತಿದೆ. ಪರಿಣಾಮ ದೇಹದ ತೂಕ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಮನೆ ಆಹಾರದೊಂದಿಗೆ ಹಾಸಿಗೆ, ಪುಸ್ತಕಗಳನ್ನ ತರಿಸಿಕೊಳ್ಳಲು ಜೈಲು ಅಧಿಕಾರಿಗಳಿಗೆ ಮೌಖಿಕವಾಗಿ ಮನವಿ ಮಾಡಿದ್ದೆ. ಆದರೆ, ಅವರು ಇದಕ್ಕೆ ಒಪ್ಪಿರಲಿಲ್ಲ ಎಂದಿದ್ದ ದರ್ಶನ್, ಅನುಮತಿ ಕಲ್ಪಿಸುವಂತೆ ಹೈಕೋರ್ಟ್ಗೆ ರಿಟ್ ಅರ್ಜಿ ಸಲ್ಲಿಸಿದ್ದರು.
ಆದರೆ, ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿತ್ತು. ಅದರಂತೆ ದರ್ಶನ್ ಸಲ್ಲಿಸಿದ್ದ ಅರ್ಜಿಯ ವಾದ ಆಲಿಸಿದ ನ್ಯಾಯಾಲಯವು ಇಂದಿಗೆ ತೀರ್ಪನ್ನು ಜುಲೈ ಕಾಯ್ದಿರಿಸಿತ್ತು. ಇದೀಗ ಅರ್ಜಿ ವಜಾ ಮಾಡಿ ಆದೇಶ ಹೊರಡಿಸಿದೆ.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ದರ್ಶನ್ ಎರಡನೇ ಆರೋಪಿಯಾಗಿದ್ದು ಜೂನ್ 11ರಂದು ಬಂಧನವಾಗಿದ್ದಾರೆ. ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಆದೇಶದಂತೆ 12 ದಿನಗಳ ಪೊಲೀಸ್ ವಿಚಾರಣೆ ಎದುರಿಸಿದ ಬಳಿಕ ಜೂನ್ 22ರಿಂದ ನ್ಯಾಯಾಂಗ ಬಂಧನಕ್ಕೆ ವಹಿಸಲಾಗಿದೆ. ಬಳಿಕ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಚಾರಣಾ ಕೈದಿಯಾಗಿದ್ದಾರೆ.
ಇದನ್ನೂ ಓದಿ: ನಮ್ಮ ಶಾಲೆಯಲ್ಲಿ ಮಗನಿಗೆ ಸೀಟು ಕೇಳಲು ವಿಜಯಲಕ್ಷ್ಮಿ ದರ್ಶನ್ ಬಂದಿದ್ರು: ಡಿ.ಕೆ. ಶಿವಕುಮಾರ್ - D K Shivakumar