ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ನ್ಯಾಯಾಂಗ ಬಂಧನದಲ್ಲಿರುವ ಆರೋಪಿಗಳಿಗೆ ಮತ್ತೆ ನಿರಾಸೆಯಾಗಿದೆ. ಜಾಮೀನು ಸಿಗುವ ನಿರೀಕ್ಷೆಯಲ್ಲಿದ್ದ ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿದಂತೆ ಇನ್ನಿತರ ಆರೋಪಿಗಳು ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ನ್ಯಾಯಾಲಯ ಮುಂದೂಡಿದೆ.
ಹತ್ಯೆ ಪ್ರಕರಣ ಸಂಬಂಧ ವಿಚಾರಣೆ ನಡೆಸಿದ 57ನೇ ಸಿಸಿಹೆಚ್ ನ್ಯಾಯಾಲಯಕ್ಕೆ ಇಂದು ಸರ್ಕಾರಿ ವಿಶೇಷ ಅಭಿಯೋಜಕ ಪ್ರಸನ್ನಕುಮಾರ್ ಅವರು ಆರೋಪಿಗಳಿಗೆ ಜಾಮೀನು ನೀಡದಂತೆ ತಕರಾರು ಅರ್ಜಿ ಸಲ್ಲಿಸಿದರು. ವಾದ ಆರಂಭಿಸಿದ ದರ್ಶನ್ ಪರ ವಕೀಲ ಸುನೀಲ್, ''ಜಾಮೀನು ವಿಚಾರಣೆ ಸಂಬಂಧ ಇಂದು ಎಸ್ಪಿಪಿ ಆಕ್ಷೇಪಣಾ ಅರ್ಜಿ ಸಲ್ಲಿಸಿದ್ದಾರೆ. ವಾದ ಮಂಡಿಸಲು ಸಮಯಾವಕಾಶದ ಅಗತ್ಯವಿದೆ'' ಎಂದು ಮನವಿಗೆ ಮಾಡಿದರು. ಇದಕ್ಕೆ ಸ್ಪಂದಿಸಿದ ನ್ಯಾಯಾಲಯ, ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಿತು.
ಪವಿತ್ರಾ ಗೌಡ ಪರ ವಕೀಲರ ವಾದವೇನು?: ಪ್ರಕರಣದ ಎ1 ಆರೋಪಿತೆ ಪವಿತ್ರಾ ಗೌಡ ಪರ ವಾದ ಮಂಡಿಸಿದ ಹಿರಿಯ ವಕೀಲ ಟಾಮಿ ಸೆಬಾಸ್ಟಿಯನ್, ''ಹತ್ಯೆ ಪ್ರಕರಣದಲ್ಲಿ ನನ್ನ ಕಕ್ಷಿದಾರರ ಪಾತ್ರವಿಲ್ಲ. ಆಶ್ಲೀಲ ಸಂದೇಶ ಕಳುಹಿಸಿದ ಮೇರೆಗೆ ಪ್ರಕರಣದ ಇನ್ನಿತರ ಆರೋಪಿಗಳು ನಗರಕ್ಕೆ ಕರೆತಂದಿದ್ದರು. ತಮ್ಮ ಮನೆಯ ಕೆಲಸಗಾರ ಪವನ್ ಹಾಗೂ ದರ್ಶನ್ ಅವರೊಂದಿಗೆ ಶೆಡ್ಗೆ ಹೋಗಿರುವ ಬಗ್ಗೆ ಸಾಕ್ಷಿದಾರರು ಹೇಳಿಕೆ ನೀಡಿದ್ದಾರೆಯೇ ಹೊರತು ಹತ್ಯೆ ಮಾಡಿದ್ದಾರೆ ಎಂದು ಹೇಳಿಲ್ಲ. ಚಾರ್ಜ್ಶೀಟ್ನಲ್ಲಿಯೂ ಪೊಲೀಸರು ನಮೂದಿಸಿಲ್ಲ'' ಎಂದರು.
''ಪಟ್ಟಣಗೆರೆ ಶೆಡ್ನಲ್ಲಿ ಕೆಲಸ ಮಾಡುತ್ತಿದ್ದ ಪ್ರತ್ಯಕ್ಷ ಸಾಕ್ಷಿ ಕಿರಣ್, ರೇಣುಕಾಸ್ವಾಮಿಗೆ ಚಪ್ಪಲಿಯಿಂದ ಕಪಾಳಕ್ಕೆ ಹೊಡೆದರು ಎಂದು ಹೇಳಿಕೆ ನೀಡಿದ್ದಾರೆ. ಹೊಡೆದ ಮಾತ್ರಕ್ಕೆ ಕೊಲೆ ಮಾಡಿದಂತೆಯಾ?'' ಎಂದು ಪ್ರಶ್ನಿಸಿದ ವಕೀಲರು, ''ಕೃತ್ಯದ ವೇಳೆ ಆರೋಪಿ ವಿನಯ್, ಪವಿತ್ರಾಳನ್ನು ಮನೆಗೆ ಕರೆದುಕೊಂಡು ಹೋಗಿದ್ದಾನೆ. ಇದರಲ್ಲಿ ಕೊಲೆಗೆ ಒಳಸಂಚು ಏನಿದೆ? ಹೀಗಾಗಿ, ತಮ್ಮ ಕಕ್ಷಿದಾರರರಿಗೆ ಜಾಮೀನು ನೀಡಬೇಕು'' ಎಂದು ಮನವಿ ಮಾಡಿದರು.
ಇದೇ ವೇಳೆ ಪ್ರಕರಣದ 8ನೇ ಆರೋಪಿ ರವಿಶಂಕರ್ ಜಾಮೀನು ಅರ್ಜಿ ಸಂಬಂಧ ವಕೀಲ ರಂಗನಾಥ ರೆಡ್ಡಿ ವಾದ ಮಂಡಿಸಿದರು. ಇಬ್ಬರು ಆರೋಪಿಗಳ ವಾದಕ್ಕೆ ಸೋಮವಾರ ಪ್ರತಿವಾದ ಮಾಡುವುದಾಗಿ ಎಸ್ಪಿಪಿ ತಿಳಿಸಿದರು. ಇದರಂತೆ ದರ್ಶನ್ ಸೇರಿ ಮೂವರ ಅರ್ಜಿ ವಿಚಾರಣೆ ಸೆಪ್ಟೆಂಬರ್ 30ಕ್ಕೆ ಮುಂದೂಡಿದರೆ, ಇದೇ ಪ್ರಕರಣದಲ್ಲಿ ಇನ್ನಿತರ ಐವರು ಆರೋಪಿಗಳು ಸಲ್ಲಿಸಿರುವ ಜಾಮೀನು ವಿಚಾರಣೆಯನ್ನು ನ್ಯಾಯಾಲಯವು ಅಕ್ಟೋಬರ್ 5ಕ್ಕೆ ಮುಂದೂಡಿತು.
ಇದನ್ನೂ ಓದಿ: ಜಿಎಸ್‌ಟಿ ಅಧಿಕಾರಿಗಳ ಬಂಧನ ಪ್ರಕರಣ: ಹವಾಲಾ ಹಣ ಸ್ವೀಕರಿಸಿದ್ದ ಇನ್ನಿಬ್ಬರು ಅರೆಸ್ಟ್ - GST officials Arrest Case