ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಜೈಲಿನಲ್ಲಿರುವ ನಟ ದರ್ಶನ್, ಪವಿತ್ರಾ ಗೌಡ ಸೇರಿದಂತೆ ಇತರ ಆರೋಪಿಗಳ ಜಾಮೀನು ಅರ್ಜಿ ವಿಚಾರಣೆಯನ್ನು ಅಕ್ಟೋಬರ್ 4ಕ್ಕೆ ಮುಂದೂಡಲಾಗಿದೆ.
ಇಲ್ಲಿನ 57ನೇ ಸಿಸಿಹೆಚ್ ನ್ಯಾಯಾಲಯವು ಅರ್ಜಿಗಳ ವಿಚಾರಣೆ ಕೈಗೊಂಡಿತು. ವಿಚಾರಣೆ ಆರಂಭವಾಗುತ್ತಿದ್ದಂತೆ ದರ್ಶನ್ ಪರ ವಕೀಲ ಸುನೀಲ್, ವಿಶೇಷ ಅಭಿಯೋಜಕರು ಆಕ್ಷೇಪಣೆಗೆ ಸಲ್ಲಿಸಿದ್ದು, ವಾದ ಮಂಡಿಸಲು ಕಾಲಾವಕಾಶ ನೀಡಬೇಕು ಎಂದು ಕೋರಿದರು. ಅಲ್ಲದೇ, ಹಿರಿಯ ವಕೀಲರು ಅನ್ಯ ಕಾರಣಕ್ಕಾಗಿ ಗೈರಾಗಿದ್ದಾರೆ. ಹೀಗಾಗಿ, ವಾದ ಮಂಡನೆಗೆ ಸಮಯ ನೀಡುವಂತೆ ಮನವಿ ಮಾಡಿದರು.
ಇದಕ್ಕೆ ಸಮ್ಮತಿಸಿದ ನ್ಯಾಯಾಧೀಶರಾದ ಜೈಶಂಕರ್ ಅವರು, ವಿಚಾರಣೆಯನ್ನು ಆ.4ಕ್ಕೆ ಮುಂದೂಡಿದರು. ಇದೇ ವೇಳೆ ಪವಿತ್ರಾ ಗೌಡ, ರವಿಶಂಕರ್ ಸೇರಿ ಇನ್ನಿತರರ ಜಾಮೀನು ಅರ್ಜಿ ವಿಚಾರಣೆಯನ್ನೂ ಕೂಡ ನ್ಯಾಯಾಲಯ ಅ.4ಕ್ಕೆ ಮುಂದೂಡಿತು.
ಇದನ್ನೂ ಓದಿ: ಕಾನೂನು ಪದವಿ ಮರು ಮೌಲ್ಯಮಾಪನ: ತಾರತಮ್ಯ ಆಗದಂತೆ ಅಂಕ ನೀಡಲು ಹೈಕೋರ್ಟ್ ಆದೇಶ - High Court
ದರ್ಶನ್ ಭೇಟಿಯಾದ ಪತ್ನಿ: ಇನ್ನೊಂದೆಡೆ, ಬಳ್ಳಾರಿ ಕೇಂದ್ರ ಕಾರಾಗೃಹದಲ್ಲಿ ದರ್ಶನ್ ಅವರನ್ನು ಪತ್ನಿ ವಿಜಯಲಕ್ಷ್ಮಿ ಹಾಗೂ ಇತರರು ಸೋಮವಾರ ಭೇಟಿಯಾದರು. ಅರ್ಧ ಗಂಟೆ ಕಾಲ ಸಮಾಲೋಚನೆ ನಡೆಸಿದ ದರ್ಶನ್, ಬಳಿಕ ಸೆಲ್ಗೆ ವಾಪಾಸ್ ತೆರಳಿದರು. ಪತ್ನಿ ವಿಜಯಲಕ್ಷ್ಮಿ, ಸಹೋದರ, ನಟ ಧನ್ವೀರ್ ಜೊತೆ ದರ್ಶನ್ ಮಾತುಕತೆ ನಡೆಸಿದರು.