ಮಂಗಳೂರು(ದಕ್ಷಿಣ ಕನ್ನಡ): 2012ರ ಮಂಗಳೂರು ಹೋಂ ಸ್ಟೇ ದಾಳಿ ಪ್ರಕರಣದ ಎಲ್ಲಾ ಆರೋಪಿಗಳನ್ನು ಖುಲಾಸೆಗೊಳಿಸಿ ಇಂದು ಇಲ್ಲಿನ ಆರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶರಾದ ಕಾಂತರಾಜು ತೀರ್ಪು ನೀಡಿದರು.
ಪ್ರಕರಣ ನಡೆದು 12 ವರ್ಷಗಳ ಬಳಿಕ ತೀರ್ಪು ಪ್ರಕಟವಾಗಿದೆ. ಸಾಕ್ಷ್ಯಾಧಾರಗಳ ಕೊರತೆಯಿಂದ ಆರೋಪಿಗಳು ದೋಷಮುಕ್ತರಾಗಿದ್ದಾರೆ ಎಂದು ತೀರ್ಪಿನಲ್ಲಿ ಉಲ್ಲೇಖಿಸಲಾಗಿದೆ.
2012ರ ಜುಲೈ 28ರಂದು ಘಟನೆ ನಡೆದಿತ್ತು. ಹಿಂದೂ ಜಾಗರಣಾ ವೇದಿಕೆ ಕಾರ್ಯಕರ್ತರು ಪಡೀಲ್ ಬಳಿಯ ಮಾರ್ನಿಂಗ್ ಮಿಸ್ಟ್ ಹೋಂ ಸ್ಟೇ ಮೇಲೆ ದಾಳಿ ನಡೆಸಿದ್ದರು. ಬರ್ತ್ ಡೇ ಪಾರ್ಟಿಯಲ್ಲಿ ನಿರತರಾಗಿದ್ದ ಯುವಕ-ಯುವತಿಯರ ಮೇಲೂ ದಾಳಿ ನಡೆಸಲಾಗಿತ್ತು ಎಂದು ಮಂಗಳೂರು ಗ್ರಾಮಾಂತರ ಪೊಲೀಸರು 44 ಆರೋಪಿಗಳ ವಿರುದ್ದ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದರು.
ಒಟ್ಟು 44 ಆರೋಪಿಗಳ ಪೈಕಿ ಮೂವರು ಸಾವನ್ನಪ್ಪಿದ್ದರು. ಪ್ರಕರಣದಲ್ಲಿ ಆರೋಪಿ ಸ್ಥಾನದಲ್ಲಿ ಸೇರ್ಪಡೆಗೊಂಡಿದ್ದ ಪತ್ರಕರ್ತ ನವೀನ್ ಸೂರಿಂಜೆ ಅವರನ್ನು ನ್ಯಾಯಾಲಯ ಪ್ರಕರಣದಿಂದ ಕೈಬಿಟ್ಟಿತ್ತು. ಇಂದು ಉಳಿದ 40 ಆರೋಪಿಗಳನ್ನು ದೋಷ ಮುಕ್ತಗೊಳಿಸಿ ನ್ಯಾಯಾಲಯ ತೀರ್ಪು ನೀಡಿದೆ.
ವಕೀಲರಾದ ಶಂಭುಶರ್ಮಾ, ಕಿಶೋರ್ ಕುಮಾರ್ ತಂಡ ಆರೋಪಿಗಳ ಪರ ವಾದ ಮಂಡಿಸಿದ್ದರು.
ಇದನ್ನೂ ಓದಿ: ನ್ಯಾಯಾಲಯಗಳ ಆದೇಶ ಪಾಲನೆಗಾಗಿ ಪ್ರತಿ ಇಲಾಖೆಗೂ ಪ್ರತ್ಯೇಕ ಕೋಶ ರಚಿಸಿ: ಹೈಕೋರ್ಟ್ - High Court