ಹುಬ್ಬಳ್ಳಿ: ಇಲ್ಲಿನ ಬಿವಿಬಿ ಕಾಲೇಜಿನ ವಿದ್ಯಾರ್ಥಿನಿ ನೇಹಾ ಹಿರೇಮಠ ಅವರನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆಗೈದ ಆರೋಪಿ ಪಯಾಜ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಈತನನ್ನು ಬಂಧಿಸಿದ ಪೊಲೀಸರ ತಂಡಕ್ಕೆ 'ಕಾಪ್ ಆಫ್ ದಿ ಮಂತ್' ಅವಾರ್ಡ್ ನೀಡಲಾಗಿದೆ.

ಹುಬ್ಬಳ್ಳಿ-ಧಾರವಾಡ ನಗರ ಪೊಲೀಸ್ ಆಯುಕ್ತರು ಮತ್ತು ಹಿರಿಯ ಅಧಿಕಾರಿಗಳು, ಪ್ರಕರಣದ ಆರೋಪಿಯನ್ನು ಪತ್ತೆ ಹಚ್ಚಲು ಹುಬ್ಬಳ್ಳಿ ಉತ್ತರ ಉಪವಿಭಾಗದ ಎಸಿಪಿ ಶಿವಪ್ರಕಾಶ ನಾಯ್ಕ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಪೊಲೀಸ್ ಇನ್ಸ್ಪೆಕ್ಟರ್ ಡಿ.ಕೆ.ಪಾಟೀಲ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಿದ್ದರು. ಈ ತಂಡ ಆರೋಪಿ ಫಯಾಜ್ ಬಾಬಾಸಾಹೇಬ ಖೊಂದುನಾಯಕ (23)ನನ್ನು ಕೃತ್ಯ ನಡೆದ ಕೇವಲ ಒಂದು ಗಂಟೆಯೊಳಗೆ ಹಿಡಿದು ಬಂಧಿಸಿತ್ತು. ನಂತರ ಅವಧಿಯೊಳಗೆ ನ್ಯಾಯಾಂಗ ಬಂಧನಕ್ಕೂ ಒಪ್ಪಿಸಲಾಗಿತ್ತು.

ಪೊಲೀಸರ ದಕ್ಷತೆಯನ್ನು ಪ್ರಶಂಸಿಸಿದ ಪೊಲೀಸ್ ಆಯುಕ್ತರು, ಎಸಿಪಿ ಮತ್ತು ವಿದ್ಯಾನಗರ ಪೊಲೀಸ್ ಠಾಣೆಯ ಪಿಐ ನೇತೃತ್ವದ ತಂಡಕ್ಕೆ ಕಾಪ್ ಆಫ್ ದಿ ಮಂತ್ ಎಂದು ಘೋಷಿಸಿ, 25 ಸಾವಿರ ರೂ ನಗದು ಬಹುಮಾನ ಹಾಗು ಪ್ರಶಂಸನಾ ಪತ್ರ ವಿತರಿಸಿ ಶ್ಲಾಘಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು: ಮದ್ಯದ ಅಮಲಿನಲ್ಲಿ ನಿಂದಿಸಿದ ಸ್ನೇಹಿತನ ಹತ್ಯೆ, ಐವರ ಬಂಧನ - Murder Case