ಚಿಕ್ಕೋಡಿ: ಲೋಕಸಭಾ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವ ಈ ಹೊತ್ತಲ್ಲಿ ಪಂಚಮಸಾಲಿ ಸಮಾಜದ ಹೋರಾಟ ಮುನ್ನೆಲೆಗೆ ಬಂದಿದೆ. ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ನೀಡುವಂತೆ ಒತ್ತಾಯಿಸಿ ಇದೇ ಮಾರ್ಚ್ 12ರಂದು ಕಲಬುರಗಿಯಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆಯೆಂದು ಪಂಚಮಸಾಲಿ ಸಮಾಜದ ಜಗದ್ಗುರು ಬಸವ ಜಯಮೃತ್ಯುಂಜಯ ಸ್ವಾಮೀಜಿ ತಿಳಿಸಿದರು.
ಶುಕ್ರವಾರ ತಡರಾತ್ರಿ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರುಗೇರಿ ಗ್ರಾಮದಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿ, ಕಾಂಗ್ರೆಸ್ ಸರ್ಕಾರ ರಚನೆಯಾಗಿ ಒಂಭತ್ತು ತಿಂಗಳು ಕಳೆದಿವೆ. ಮೀಸಲಾತಿ ವಿಚಾರದಲ್ಲಿ ಸರ್ಕಾರ ಯಾವುದೇ ಸ್ಪಷ್ಟ ನಿಲುವಿಗೆ ಬರುತ್ತಿಲ್ಲ. ಸರ್ಕಾರ ರಚನೆಗೂ ಮೊದಲು ನಮ್ಮ ಸರ್ಕಾರ ಬಂದ್ರೆ ಪಂಚಮಸಾಲಿ ಸಮಾಜಕ್ಕೆ ಮೀಸಲಾತಿ ನೀಡಲಾಗುವುದು ಎಂದು ಭರವಸೆ ನೀಡಿದ್ದರು. ಇನ್ನೇನು ಕೆಲವೇ ಕೆಲ ದಿನಗಳಲ್ಲಿ ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿ ಆಗುವುದರಿಂದ ಸರ್ಕಾರ ಏನೂ ಮಾಡಲು ಸಾಧ್ಯವಿಲ್ಲ. ಹಾಗಾಗಿ ಆದಷ್ಟು ಬೇಗ ಪಂಚಮಸಾಲಿ ಸಮಾಜಕ್ಕೆ 2ಎ ಮೀಸಲಾತಿ ಹಾಗೂ ಲಿಂಗಾಯತ ಸಮಾಜಕ್ಕೆ ಒಬಿಸಿ ಮೀಸಲಾತಿಗಾಗಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಒತ್ತಾಯಿಸಿ ಮಾರ್ಚ್ 12ರಂದು ಸಂಜೆ 4 ಗಂಟೆಗೆ ಶರಣು ಬಸವೇಶ್ವರ ಜಾತ್ರೆ ಮೈದಾನದಲ್ಲಿ ಬೃಹತ್ ಸಮಾವೇಶ ಏರ್ಪಡಿಸಲಾಗಿದೆ. ಇದರಲ್ಲಿ ಸಮಾಜದ ಬಾಂಧವರು ಹೆಚ್ಚಿನ ಸಂಖ್ಯೆಯಲ್ಲಿ ಸೇರಿ ಸರ್ಕಾರದ ಮೇಲೆ ಒತ್ತಡ ತರುವ ಮೂಲಕ ನಮ್ಮ ಹಕ್ಕು ಮಂಡನೆ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮ ಸಮಾಜದ ಋಣ ಕಾಂಗ್ರೆಸ್ ಪಕ್ಷದ ಮೇಲೆ ಇರುವುದರಿಂದ ನಮ್ಮ ಸಮಾಜಕ್ಕೆ ಸಾಮಾಜಿಕ ನ್ಯಾಯವನ್ನು ಒದಗಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಲ್ಲಿ ಆಗ್ರಹಿಸಿದರು.
ಹಿಂದೆ ಬಿಜೆಪಿ ಸರ್ಕಾರದ ಅವಧಿಯಲ್ಲಿ ಕಾಂಗ್ರೆಸ್ ಪಕ್ಷದ ಹಲವು ಮುಖಂಡರು ಪಂಚಮಸಾಲಿ ಸಮಾಜದ ಮೀಸಲಾತಿ ಬಗ್ಗೆ ದನಿ ಎತ್ತಿದ್ದರು. ಆದರೆ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಎಲ್ಲರೂ ಮೌನವಾಗಿದ್ದಾರೆ. ಈ ಹಿನ್ನೆಲೆ ಸಚಿವೆ ಲಕ್ಷ್ಮಿ ಹೆಬ್ಬಾಳಕರ್, ವಿನಯ್ ಕುಲಕರ್ಣಿ, ವಿಜಯಾನಂದ ಕಾಶಪ್ಪನವರ್ ವಿರುದ್ಧ ಜನರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಾನು ಕೂಡ ನಮ್ಮ ಸಮಾಜದ ಕಾಂಗ್ರೆಸ್ ಮುಖಂಡರನ್ನು ಸ್ವತಃ ಭೇಟಿ ಮಾಡಿ ಸಲಹೆ ನೀಡಿದ್ದೇನೆ. ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಕಚೇರಿಯಲ್ಲಿ ಪಂಚಮಸಾಲಿ ಸಮಾಜದ ಎಲ್ಲಾ ಶಾಸಕರ ಸಭೆ ನಡೆಸಿ ಅಧಿವೇಶನದ ಸಮಯದಲ್ಲಿ ಮೀಸಲಾತಿಗೋಸ್ಕರ ದ್ವನಿ ಎತ್ತುವಂತೆ ಸೂಚಿಸಿದ್ದೆ. ಸಮಯದ ಅಭಾವದಿಂದ ಧ್ವನಿ ಎತ್ತಲಿಲ್ಲ. ಪರವಾಗಿಲ್ಲ, ಸಮಾಜದ ಶಾಸಕರು-ಸಚಿವರು ದೆಹಲಿಗೆ ಒಂದು ನಿಯೋಗ ತೆಗೆದುಕೊಂಡು ಹೊಗಿ ಅಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ್ ಖರ್ಗೆ, ಕರ್ನಾಟಕ ಉಸ್ತುವಾರಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಲಿ. ಮೀಸಲಾತಿ ವಿಚಾರಕ್ಕೆ ಹಕ್ಕೊತ್ತಾಯ ಮಾಡುವಂತೆ ಹೇಳಿದರೂ ಕೂಡ ಈವರೆಗೆ ಆ ನಿಟ್ಟಿನಲ್ಲಿ ಕಾಂಗ್ರೆಸ್ ನಾಯಕರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸ್ವಾಮೀಜಿ ಅಸಮಾಧಾನ ವ್ಯಕ್ತಪಡಿಸಿದರು.
ಇದನ್ನೂ ಓದಿ: ಸ್ಫೋಟ ಸಂಭವಿಸಿ ವಾರದ ಬಳಿಕ ರಾಮೇಶ್ವರಂ ಕೆಫೆ ಪುನರಾರಂಭ: ಮೆಟಲ್, ಹ್ಯಾಂಡ್ ಡಿಟೆಕ್ಟರ್ ಅಳವಡಿಕೆ
2ಎ ಮೀಸಲಾತಿ ಕಲ್ಪಿಸಲು ಹಲವು ವರ್ಷಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಆದರೆ ಈವರೆಗೂ ಕಾಂಗ್ರೆಸ್ ಪಕ್ಷದಿಂದ ಉತ್ತಮ ಸ್ಪಂದನೆ ಸಿಕ್ಕಿಲ್ಲ. ಬಸವರಾಜ ಬೊಮ್ಮಾಯಿ ಅವರು ಅಧಿಕಾರದಲ್ಲಿ ಇರುವಾಗ ನಮ್ಮ ಬೇಡಿಕೆಗೆ ಸಿ.ಸಿ ಪಾಟೀಲ್, ಬಸನಗೌಡ ಪಾಟೀಲ್ ಯತ್ನಾಳ್, ಮಹೇಶ್ ಕುಮಠಳ್ಳಿ, ಸಿದ್ದು ಸವದಿ ಅವರು ಸಿಎಂ ಮೇಲೆ ಒತ್ತಡ ಹಾಕಿ ಒಟ್ಟಾಗಿ ಕುಳಿತು ನಮ್ಮ ಜೊತೆ ಸಮಾಲೋಚನೆ ನಡೆಸುತ್ತಿದ್ದರು. ಆದರೆ ಈಗ ಕಾಂಗ್ರೆಸ್ ಸರ್ಕಾರದಲ್ಲಿ ಆ ವಾತಾವರಣ ಇಲ್ಲ ಎಂದು ತೀವ್ರ ಅಸಮಧಾನ ಹೊರಹಾಕಿದರು.