ಹಾವೇರಿ: ಸಿದ್ದರಾಮಯ್ಯಗೆ ಎನ್ಡಿಎ ವಿರುದ್ಧ ಮಾತನಾಡುವುದಕ್ಕೆ ವಿಷಯಗಳಿಲ್ಲ. ಹೀಗಾಗಿ ಪದೇ ಪದೆ ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡಿ ರಾಜಕೀಯ ಭಯ ಹುಟ್ಟಿಸುತ್ತಿದ್ದಾರೆ ಎಂದು ಮಾಜಿ ಸಿಎಂ, ಹಾವೇರಿ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿರುವ ಬಸವರಾಜ ಬೊಮ್ಮಾಯಿ ಟೀಕಿಸಿದರು.
ಜಿಲ್ಲೆಯ ಸವಣೂರು ತಾಲೂಕಿನ ಕಳಸೂರಲ್ಲಿಂದು ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿದ್ದರಾಮಯ್ಯ ಕಳೆದ ಬಾರಿಯೂ ಅವರು ಇದನ್ನೇ ಮಾತನಾಡಿದ್ದರು. ಯಾವುದೇ ಕಾರಣಕ್ಕೂ ಸಂವಿಧಾನ ಬದಲಾವಣೆ ಆಗುವುದಿಲ್ಲ. ಅಂಬೇಡ್ಕರ್ ಅವರು ಇದ್ದರೂ ಸಂವಿಧಾನ ಬದಲಾವಣೆ ಮಾಡಲು ಆಗುವುದಿಲ್ಲ. ಸುಪ್ರಿಂ ಕೋರ್ಟ್ ಬೆಂಚ್ ಕೂಡ ಹೇಳಿದೆ. ಇದನ್ನು ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರು ಸ್ಪಷ್ಟಪಡಿಸಿದ್ದಾರೆ ಎಂದು ಬೊಮ್ಮಾಯಿ ತಿಳಿಸಿದರು.
ಎನ್ಡಿಎ 400 ಕ್ಷೇತ್ರಗಳಲ್ಲಿ ಜಯ ಸಾಧಿಸುತ್ತೆ: ಈ ಬಾರಿ ಬಿಜೆಪಿ ಅಥವಾ ಎನ್ಡಿಎ ಮೈತ್ರಿ ಕೂಟ 200 ಕ್ಷೇತ್ರಗಳಲ್ಲಿ ಜಯ ಗಳಿಸುವುದಿಲ್ಲ ಎಂಬ ಸಿಎಂ ಸಿದ್ದರಾಮಯ್ಯ ಹೇಳಿಕೆ ಕುರಿತಂತೆ ಮಾತನಾಡಿ, ಸಿದ್ದರಾಮಯ್ಯ ಎಲೆಯಲ್ಲಿ ಕತ್ತೆ ಬಿದ್ದಿದೆ. ಅವರು ಅಧಿಕಾರಕ್ಕೆ ಬರಲು 272 ಕ್ಷೇತ್ರಗಳನ್ನು ಗೆಲ್ಲಬೇಕು. ಆದರೆ ಅವರು ಕಾಂಗ್ರೆಸ್ ಸ್ಪರ್ಧಿಸಿದ್ದು ಬರೀ 230 ಕ್ಷೇತ್ರಗಳಲ್ಲಿ'' ಎಂದು ತಿರುಗೇಟು ಕೊಟ್ಟರು.
230 ಕ್ಷೇತ್ರಗಳಲ್ಲಿ ನಿಂತು ಇನ್ನೊಬ್ಬರ ಬಗ್ಗೆ ಮಾತನಾಡುತ್ತಾರೆ. ಪ್ರಸ್ತುತ ಲೋಕಸಭೆ ಚುನಾವಣೆಯಲ್ಲಿ ಅತ್ಯಂತ ಹೆಚ್ಚು ಕ್ಷೇತ್ರಗಳಲ್ಲಿ ಸ್ಪರ್ಧಿಸಿರುವುದು ಬಿಜೆಪಿ. 485 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದೇವೆ, ನೂರಕ್ಕೆ ನೂರರಷ್ಟು 370 ದಾಟುತ್ತೇವೆ. ಎನ್ಡಿಎ 400ಕ್ಕೂ ಅಧಿಕ ಕ್ಷೇತ್ರಗಳಲ್ಲಿ ಜಯಭೇರಿ ಬಾರಿಸುತ್ತೆ ಎಂದು ಬೊಮ್ಮಾಯಿ ವಿಶ್ವಾಸ ವ್ಯಕ್ತಪಡಿಸಿದರು.
ಸಂವಿಧಾನವು ಅಂಬೇಡ್ಕರ್ ಮಾಡಿದ ಶಾಶ್ವತ ಕೆಲಸ, ಅದನ್ನು ಯಾರು ಬದಲಾಯಿಸಲು ಸಾಧ್ಯವಿಲ್ಲ. ಭಾರತ ಮಾತಾ ಕಿ ಜೈ ಎಂಬುದನ್ನು ಕೂಗಲು ಭಾರತ ಮಾತೆಯ ಎಲ್ಲ ಮಕ್ಕಳಿಗೂ ಅಧಿಕಾರವಿದೆ. ಅವರು ಕೂಗುತ್ತಾರೆ ಎಂದರೆ ಸ್ವಾಗತವಿದೆ.
ಭಾರತ ಮಾತೆ ಇನ್ನಷ್ಟು ಖುಷಿ ಆಗುತ್ತಾಳೆ. ಖರ್ಗೆಯವರ ಅಪ್ಪಣೆ ಪಡೆದು ಅವರು ಭಾರತ ಮಾತಾ ಕಿ ಜೈ ಅಂದಿದ್ದಾರೆ ಅಂದರೆ ಅದು ಅಲ್ಲಿರುವ ಸ್ಥಿತಿಯನ್ನು ಬಿಂಬಿಸುತ್ತದೆ ಎಂದು ಬೊಮ್ಮಾಯಿ ಟೀಕಿಸಿದರು.