ಹಾಸನ: ಪೊಲೀಸ್ ಕಾನ್ಸ್ಟೇಬಲ್ವೋರ್ವರನ್ನು ಬೀಕರವಾಗಿ ಕೊಚ್ಚಿ ಕೊಲೆಗೈದಿರುವ ಪ್ರಕರಣ ಹಾಸನ ತಾಲೂಕಿನ ದುದ್ದ ಸಮೀಪ ಸೋಮವಾರ ರಾತ್ರಿ ನಡೆದಿದೆ. ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದ ಹರೀಶ್ (32) ಕೊಲೆಯಾದವರು.
ಕರ್ನಾಟಕ ಕೈಗಾರಿಕಾ ಭದ್ರತಾ ಪಡೆಯ ಕಾನ್ಸ್ಟೇಬಲ್ ಆಗಿ ಕಾರ್ಯ ನಿರ್ವಹಿಸುತ್ತಿದ್ದ ಹರೀಶ್, ಇದೇ ನವೆಂಬರ್ 11ರಂದು ನಿಶ್ಚಯವಾಗಿದ್ದ ಯುವತಿಯ ಜೊತೆ ಸಪ್ತಪದಿ ತುಳಿಯಬೇಕಿತ್ತು.
ಸೋಮವಾರ ರಾತ್ರಿ ತನ್ನ ಸ್ನೇಹಿತರಿಗೆ, ಸಂಬಂಧಿಕರಿಗೆ ಲಗ್ನಪತ್ರಿಕೆ ಕೊಟ್ಟು ಹರೀಶ್ ಮನೆಗೆ ವಾಪಸಾಗುತ್ತಿದ್ದರು. ಈ ವೇಳೆ ದುದ್ದ ಹೊರವಲಯದ ಸ್ಕೈ ಲ್ಯಾಂಡ್ ಹೋಟೆಲ್ ಸಮೀಪ ದ್ವಿಚಕ್ರ ವಾಹನವನ್ನು ಅಡ್ಡಗಟ್ಟಿದ ದುಷ್ಕರ್ಮಿಗಳು, ಮನಸೋಇಚ್ಛೆ ಹಲ್ಲೆ ಮಾಡಿ ಬರ್ಬರವಾಗಿ ಕೊಲೆ ಮಾಡಿದ್ದಾರೆ.
ಎಸ್ಪಿ ಮಹಮದ್ ಸುಜಿತಾ ಹಾಗೂ ದುದ್ದ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಹಾಸನದ ಜಯಚಾಮರಾಜೇಂದ್ರ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ. ದುದ್ದ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
ಈಗಾಗಲೇ ಮೂವರು ಆರೋಪಿಗಳನ್ನು ಗುರುತಿಸಿರುವ ಪೊಲೀಸರು, ಇಂದು ಸಂಜೆಯೊಳಗೆ ಪ್ರಮುಖ ಆರೋಪಿಯನ್ನು ಬಂಧಿಸುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ವಿವಾಹೇತರ ಸಂಬಂಧಕ್ಕೆ ಪತಿಯ ಕೊಲೆ: ವಾಮಾಚಾರದ ಕಥೆ ಕಟ್ಟಿದ್ದ ಪತ್ನಿ ಸೇರಿ ಮೂವರ ಬಂಧನ!