ಮೈಸೂರು: ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ತಾವು ಅಧಿಕಾರಕ್ಕೆ ಬಂದರೆ ರೈತರ ಸಾಲಮನ್ನಾ ಮಾಡುತ್ತೇವೆ ಹಾಗೂ ಮಹಿಳೆಯರಿಗೆ ಒಂದು ಲಕ್ಷ ಹಣ ನೀಡುತ್ತೇವೆಂದು ಘೋಷಿಸಿದ್ದು, ದೇಶದಲ್ಲಿ ಕಾಂಗ್ರೆಸ್ 50 ಸೀಟ್ ಸಹ ಗೆಲ್ಲುವುದಿಲ್ಲ. ಇನ್ನು ಪ್ರಣಾಳಿಕೆ ಜಾರಿ ಹೇಗೆ ಸಾಧ್ಯ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರಶ್ನೆ ಮಾಡಿದರು.
ಇಂದು ಮೈಸೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತಾನಾಡಿದ ಅವರು, ರಾಜ್ಯಕ್ಕೆ ಮೋದಿ ಪ್ರಚಾರಕ್ಕೆ ಬಂದ ಸಂದರ್ಭದಲ್ಲಿ ಕಾಂಗ್ರೆಸ್ನ ಮುಖಂಡರು ಹಾಗೂ ನಲಪಾಡ್ ಚೊಂಬು ಪ್ರದರ್ಶನ ಮಾಡಿದ್ದ ಬಗ್ಗೆ ಪ್ರತಿಕ್ರಿಯಿಸಿದ ವಿಜಯೇಂದ್ರ, ಚುನಾವಣೆ ಮುಗಿದ ಮೇಲೆ ನಲಪಾಡ್ ಹಾಗೂ ಕಾಂಗ್ರೆಸ್ ನಾಯಕರಿಗೆ ಅದೇ ಸ್ಥಿತಿ ಬರಲಿದೆ. ಫಲಿತಾಂಶದ ನಂತರ ಚೊಂಬು ಹಿಡಿದುಕೊಂಡು ರಸ್ತೆಗೆ ಬರುವ ಸ್ಥಿತಿ ಕಾಂಗ್ರೆಸ್ ಗೆ ಬಂದೊದಗಲಿದೆ ಎಂದು ಟೀಕಿಸಿದರು.
ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ಚೊಂಬು ಜಾಹೀರಾತಿಗೆ ಹಾಗೂ ಕೇಂದ್ರ ಸರ್ಕಾರ ವಿರುದ್ಧ ಕಾಂಗ್ರೆಸ್ ನಾಯಕರು ನೀಡುತ್ತಿರುವ ಹೇಳಿಕೆಗಳಿಗೆ ಕವಡೆಕಾಸಿನ ಕಿಮ್ಮತ್ತು ಇಲ್ಲ. ಅವರು ಏನಾದರೂ ಯಾವುದಾದರೂ ಜಾಹೀರಾತು ಕೊಡಲಿ. ಈ ಬಾರಿ ಕೇಂದ್ರದಲ್ಲಿ ಮೋದಿ ಅವರೇ ಪ್ರಧಾನಿ ಆಗುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ನೇಹಾ ಹತ್ಯೆ ಪ್ರಕರಣ: ಗಂಭೀರ ಘಟನೆ
ಹುಬ್ಬಳ್ಳಿಯ ಬಿವಿಬಿ ಕಾಲೇಜಿನ ಕ್ಯಾಂಪಸ್ನಲ್ಲಿ ಏಪ್ರಿಲ್ 18 ರ ಸಂಜೆ ನಡೆದ ಎಂಸಿಎ ವಿದ್ಯಾರ್ಥಿನಿ ನೇಹಾ ಹಿರೇಮಠ್ ಹತ್ಯೆ ಪ್ರಕರಣ ವೈಯಕ್ತಿಕ ವಿಚಾರಕ್ಕೆ ಕೊಲೆ ಆಗಿದೆ ಎಂಬ ಸಚಿವರ ಹೇಳಿಕೆ ಸರಿಯಲ್ಲ. ಇದೊಂದು ಅಕ್ಷಮ್ಯ ಅಪರಾಧ, ಕಾಂಗ್ರೆಸ್ ಸಚಿವರು ಒಂದು ಸಮುದಾಯ ಓಲೈಸಲು ಮುಂದಾಗಿರುವುದು ಸರಿಯಲ್ಲ. ನೇಹಾ ಪೋಷಕರು ದುಃಖದಲ್ಲಿದ್ದಾರೆ, ಈ ಸಂದರ್ಭದಲ್ಲಿ ಅವರಿಗೆ ಸಾಂತ್ವನ ಹೇಳಬೇಕು. ರಾಜ್ಯದಲ್ಲಿ ಹೆಣ್ಣು ಮಕ್ಕಳಿಗೆ ರಕ್ಷಣೆ ನೀಡಬೇಕು. ಈ ವಿಚಾರದಲ್ಲಿ ಬಿಜೆಪಿ ಹೋರಾಟ ಮಾಡುತ್ತದೆ ಎಂದು ವಿಜಯೇಂದ್ರ ತಿಳಿಸಿದರು.
ನೇಹಾ ಪೋಷಕರು ಈ ಘಟನೆ ಹಿಂದೆ ಲವ್ ಜಿಹಾದ್ ಇದೆ ಎಂದು ಆರೋಪಿಸಿದ್ದಾರೆ. ರಾಜ್ಯದಲ್ಲಿ ತಾಲಿಬಾನ್ ರೀತಿ ಸರ್ಕಾರ ಇದೆ ಎಂದು ಜನರೇ ಮಾತನಾಡುತ್ತಿದ್ದಾರೆ. ಇದಕ್ಕೆಲ್ಲಾ ಜನರೇ ಉತ್ತರ ನೀಡುತ್ತಾರೆ ಎಂದು ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದರು.