ಮೈಸೂರು: ಮುಡಾ ಹಗರಣದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ಕ್ರಮ ಖಂಡಿಸಿ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಉಪಾಧ್ಯಕ್ಷೆ ಡಾ.ಪುಷ್ಪಾ ಅಮರನಾಥ್ ನೇತೃತ್ವದಲ್ಲಿ ಕಾಂಗ್ರೆಸ್ ಮಹಿಳಾ ಮೋರ್ಚಾದ ಕಾರ್ಯಕರ್ತೆಯರು ಇಂದು ಪ್ರತಿಭಟನೆ ನಡೆಸಿದರು.
ಇಲ್ಲಿನ ಕಾಂಗ್ರೆಸ್ ಭವನದ ಆವರಣದಲ್ಲಿ ಸಮಾವೇಶಗೊಂಡ ಕಾರ್ಯಕರ್ತೆಯರು, ಬಿಜೆಪಿ ಮತ್ತು ಜೆಡಿಎಸ್ ವಿರುದ್ಧ ಘೊಷಣೆಗಳನ್ನು ಕೂಗಿದರು. ನಾನೂ ಸಿದ್ದರಾಮಯ್ಯ ಪರ, ನಾನು ಶಕ್ತಿ ಯೋಜನೆಯ ಫಲಾನುಭವಿ, ಗವರ್ನರ್ ಗೋ ಬ್ಯಾಕ್ ಎಂಬೆಲ್ಲಾ ಫಲಕಗಳನ್ನು ಹಿಡಿದು ಆಕ್ರೋಶ ವ್ಯಕ್ತಪಡಿಸಿದರು.
ಡಾ.ಪುಷ್ಪಾ ಅಮರನಾಥ್ ಮಾತನಾಡಿ, "ರಾಜ್ಯಪಾಲರು ರಾಜ್ಯಪಾಲನೆ ಬಿಟ್ಟು ರಾಜಕಾರಣ ಮಾಡುತ್ತಿದ್ದಾರೆ. ಜೆಡಿಎಸ್, ಬಿಜೆಪಿ ನಾಯಕರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಧಿಕಾರದಿಂದ ಕೆಳಗಿಳಿಸಲು ಷಡ್ಯಂತ್ರ ರೂಪಿಸಿದ್ದಾರೆ. ಇದು ಫಲಿಸುವುದಿಲ್ಲ. ಮುಖ್ಯಮಂತ್ರಿಗಳು ಬಡವರ ಪರವಾಗಿ ರೂಪಿಸಿರುವ ಕಾರ್ಯಕ್ರಮಗಳ ಯಶಸ್ಸು ಸಹಿಸಲಾಗದೇ ಬಿಜೆಪಿ ಹಾಗೂ ಜೆಡಿಎಸ್ ನವರು ಸಿಎಂ ವಿರುದ್ಧ ಹುನ್ನಾರ ನಡೆಸಿದ್ದಾರೆ" ಎಂದು ದೂರಿದರು.

"ರಾಜ್ಯದ ಎಲ್ಲ ಮಹಿಳೆಯರು ಸಿದ್ದರಾಮಯ್ಯ ಪರವಾಗಿದ್ದೇವೆ. ಮುಡಾ ಹಗರಣದಲ್ಲಿ ಸಿದ್ದರಾಮಯ್ಯ ಅವರು ಯಾವುದೇ ತಪ್ಪು ಮಾಡಿಲ್ಲ. ಬಿಜೆಪಿ, ಜೆಡಿಎಸ್ ವಿರುದ್ಧದ ಈ ಹೋರಾಟದಲ್ಲಿ ಗೆಲ್ಲುವುದು ನೂರಕ್ಕೆ ನೂರು ಗ್ಯಾರಂಟಿಯಾಗಿದೆ. ಯಾವತ್ತೂ ಸತ್ಯವೇ ಗೆಲ್ಲಲಿದೆ. ಸಿದ್ದರಾಮಯ್ಯ ರಾಜೀನಾಮೆ ಕೇಳಲು ಬಿಜೆಪಿ, ಜೆಡಿಎಸ್ ನಾಯಕರಿಗೆ ನೈತಿಕತೆ ಇಲ್ಲ. ರಾಜ್ಯಪಾಲರು ಮತ್ತು ಕೇಂದ್ರ ಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ತಮ್ಮ ಸ್ಥಾನಗಳಿಗೆ ರಾಜೀನಾಮೆ ನೀಡಬೇಕು. ರಾಜ್ಯಪಾಲರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ, ಜೆಡಿಎಸ್ ನಾಯಕರು ಯಾವಾಗ ಪಾದಯಾತ್ರೆ ಮಾಡುತ್ತಾರೆ" ಎಂದು ಪ್ರಶ್ನಿಸಿದರು.
ಚಿಕ್ಕಮಗಳೂರು- ರಾಜ್ಯಪಾಲರ ಪ್ರತಿಕೃತಿ ದಹಿಸಿ ಪ್ರತಿಭಟನೆ: ಮತ್ತೊಂದೆಡೆ, ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಹಿನ್ನೆಲೆಯಲ್ಲಿ ರಾಜ್ಯಪಾಲರ ವಿರುದ್ಧ ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಪ್ರತಿಭಟನೆ ನಡೆಯಿತು. ಅಜ್ಜಂಪುರ ಪಟ್ಟಣದ ಮುಖ್ಯ ವೃತ್ತದಲ್ಲಿ ರಾಜ್ಯಪಾಲರ ಪ್ರತಿಕೃತಿ ದಹಿಸಿ, ಹೆದ್ದಾರಿ ತಡೆದು ಟೈಯರ್ಗೆ ಬೆಂಕಿ ಹಚ್ಚಿ ಕಾಂಗ್ರೆಸ್ ಕಾರ್ಯಕರ್ತರು ಧಿಕ್ಕಾರ ಕೂಗಿದರು. ತರೀಕೆರೆ ಶಾಸಕ ಜಿ.ಎಸ್.ಶ್ರೀನಿವಾಸ್ ನೇತೃತ್ವದಲ್ಲಿ ಅಜ್ಜಂಪುರ ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.
ರಾಜ್ಯಪಾಲರು ಕೇಂದ್ರದ ಕೈಗೊಂಬೆ ಆಗಿದ್ದಾರೆ ಎಂದು ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು. ಸಿಎಂ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆಸುತ್ತಿದೆ. ಇದೇ ವೇಳೆ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಕೂಡಲೇ ರಾಜ್ಯಪಾಲರನ್ನು ವಾಪಸ್ ಕರೆಸಿಕೊಳ್ಳಬೇಕೆಂದು ಆಗ್ರಹಿಸಿದರು. ಇದೇ ರೀತಿ ಕಳಸ ತಾಲೂಕಿನಲ್ಲಿಯೂ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಮುಖಂಡರು ಪ್ರತಿಭಟಿಸಿ ರಾಜ್ಯಪಾಲರ ನಡೆಯನ್ನು ಖಂಡಿಸಿದರು.
ಇದನ್ನೂ ಓದಿ: ನಾಳೆ ವಿಧಾನಸೌಧದ ಗಾಂಧಿ ಪ್ರತಿಮೆಯೆದುರು ಬಿಜೆಪಿ ಶಾಸಕರ ಪ್ರತಿಭಟನೆ - MLC N Ravikumar