ಹಾವೇರಿ: ಕಿತ್ತೂರು ಮತ್ತು ಕಲ್ಯಾಣ ಕರ್ನಾಟಕ ಭಾಗದ 12 ಲೋಕಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಸಾಧಿಸಲಿದೆ ಎಂದು ಕಾನೂನು ಸಚಿವ ಹೆಚ್.ಕೆ.ಪಾಟೀಲ್ ವಿಶ್ವಾಸ ವ್ಯಕ್ತಪಡಿಸಿದರು. ಹಾವೇರಿಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಆನಂದಸ್ವಾಮಿ ಗಡ್ಡದೇವರಮಠ ನಾಮಪತ್ರ ಸಲ್ಲಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ನಾನು ಮುಂಬೈ ಮತ್ತು ಹೈದರಾಬಾದ್ ಕರ್ನಾಟಕದ 6 ಕ್ಷೇತ್ರಗಳಲ್ಲಿ ಪ್ರವಾಸ ಮಾಡಿದ್ದೇನೆ. ನನ್ನ ಸ್ಪಷ್ಟ ಅನಿಸಿಕೆ ಏನೆಂದರೆ ಈ ಭಾಗದ 12ಕ್ಕೆ 12 ಕಡೆಗಳಲ್ಲಿ ನಾವು ಗೆಲ್ಲುತ್ತೇವೆ ಎಂದರು.
ಗ್ಯಾರಂಟಿಗಳಿಂದ ನಮ್ಮ ಪಕ್ಷಕ್ಕೆ ಬಲ ಬಂದಿದ್ದೆ. ಈ ಹಿಂದೆ ಹೆಣ್ಣು ಮಕ್ಕಳು ಸಾಲ ಮಾಡಿ ಹಬ್ಬದ ಸಂತೆ ಮಾಡಲು ಬರುತ್ತಿದ್ದರು. ಈ ಬಾರಿ ಯಾರಾದರೂ ಸಾಲ ತೆಗೆದುಕೊಂಡಿರುವುದನ್ನು ನೋಡಿದ್ದೀರಾ?. ಇದು ಬಡತನವನ್ನು ನಿರ್ಮೂಲನೆ ಮಾಡಿರುವಂತ ರೀತಿ ಎಂದ ಅವರು, ಕುಮಾರಸ್ವಾಮಿ ಮಹಿಳೆಯರಿಗೆ ಕಳಂಕ ತರುವ ಹೇಳಿಕೆ ನೀಡಿದ್ದಾರೆ. ನೀವು ಹೆಣ್ಣು ಮಕ್ಕಳ ಪಾದ ಮುಟ್ಟಿ ಕ್ಷಮೆ ಕೇಳಬೇಕು, ಇಲ್ಲವೆಂದರೆ ನಿಮ್ಮ ರಾಜಕೀಯ ಭವಿಷ್ಯಕ್ಕೆ ಗಂಡಾಂತರವಿದೆ, ಅದು ಅಂತ್ಯಕ್ಕೂ ಬರಬಹುದು ಎಂದು ಹೆಚ್ ಕೆ ಪಾಟೀಲ್ ಹೇಳಿದರು.
ಸಚಿವ ಶಿವಾನಂದ ಪಾಟೀಲ್ ಮಾತನಾಡಿ, ನಾವು ರಾಜ್ಯದಲ್ಲಿ ಕನಿಷ್ಠ 18 ರಿಂದ 20 ಲೋಕಸಭಾ ಕ್ಷೇತ್ರಗಳನ್ನು ಗೆದ್ದೇ ಗೆಲ್ಲುತ್ತೇವೆ. ಉತ್ತರ ಕರ್ನಾಟಕ ಭಾಗದಲ್ಲಿ ಕಾಂಗ್ರೆಸ್ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಸಾಧ್ಯತೆ ಇದೆ. ಮಹಿಳೆಯರು ನಮ್ಮ ಕಾರ್ಯಕ್ರಮಗಳನ್ನು ಮೆಚ್ಚಿ 100ಕ್ಕೆ 80 ರಷ್ಟು ನಮಗೆ ಮತ ಹಾಕುತ್ತಾರೆ ಎಂಬ ಆತ್ಮವಿಶ್ವಾಸ ನಮಗಿದೆ. ಬಸವರಾಜ ರಾಯರೆಡ್ಡಿ ಅವರು ಸಿದ್ದರಾಮಯ್ಯ ಅವರು ಇನ್ನೂ ನಾಲ್ಕು ವರ್ಷ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂಬ ಹೇಳಿಕೆಗೆ ಪ್ರತಿಕ್ರಿಯಿಸಿ, ಸಿದ್ದರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ಇಬ್ಬರೂ ಮುಂದುವರೆಯುತ್ತಾರೆ. ಅವರ ಹುದ್ದೆ ಭರ್ತಿಯಾಗಿದೆ. ನಾನು ಬಾಗಲಕೋಟೆ, ವಿಜಯಪುರ ಮತ್ತು ಹಾವೇರಿಯಲ್ಲಿ ಓಡಾಡಿದ್ದೇನೆ. ಈ ಮೂರು ಕ್ಷೇತ್ರಗಳಲ್ಲಿ ಗೆಲುವು ಸಾಧಿಸುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇದನ್ನೂ ಓದಿ: ವಿಜಯೇಂದ್ರ ನನ್ನ ಬಗ್ಗೆ ಸೂಕ್ಕಿನ ಮಾತನ್ನು ಆಡುತ್ತಿದ್ದಾರೆ: ಕೆ ಎಸ್ ಈಶ್ವರಪ್ಪ - Lok Sabha Election 2024