ಬೆಂಗಳೂರು: ದೇವೇಗೌಡರ ಕುಟುಂಬವನ್ನು ರಾಜಕೀಯವಾಗಿ ಮುಗಿಸಬೇಕು ಎನ್ನುವ ಷಡ್ಯಂತ್ರ ಆಯಿತು. ಈಗ ಯಡಿಯೂರಪ್ಪನವರ ಕುಟುಂಬವನ್ನು ರಾಜಕೀಯವಾಗಿ ಮುಗಿಸುವ ಕುತಂತ್ರ ಆರಂಭವಾಗಿದೆ ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವರಾದ ಹೆಚ್.ಡಿ.ಕುಮಾರಸ್ವಾಮಿ ಟೀಕಿಸಿದರು.
ಕೇಂದ್ರ ಸಚಿವರಾದ ಮೇಲೆ ರಾಜ್ಯಕ್ಕೆ ಮೊದಲ ಭೇಟಿ ಕೊಟ್ಟ ವೇಳೆ ಪಕ್ಷದ ಕಚೇರಿಯಲ್ಲಿ ಕಾರ್ಯಕರ್ತರ ಅಭಿನಂದನೆ ಸ್ವೀಕರಿಸಿ ಮಾತನಾಡಿದ ಅವರು, 82 ವರ್ಷದ ಯಡಿಯೂರಪ್ಪನವರ ಮೇಲೆ ಕಾಂಗ್ರೆಸ್ ಸೇಡಿನ ರಾಜಕಾರಣ ಮಾಡುತ್ತಿದೆ. ರಾಜ್ಯದ ರೈತ ನಾಯಕ ಯಡಿಯೂರಪ್ಪರ ಮೇಲೆ ರಾಜಕೀಯ ಷಡ್ಯಂತ್ರ ನಡೆಯುತ್ತಿದೆ. ಅವರನ್ನು ಜೈಲಿಗೆ ಕಳಿಸಲೇಬೇಕು ಎಂಬಂತೆ ಕಾಂಗ್ರೆಸ್ ಕೆಲಸ ಮಾಡುತ್ತಿದೆ. ಯಡಿಯೂರಪ್ಪ ಅವರ ವ್ಯಕ್ತಿತ್ವಕ್ಕೆ ಮಸಿ ಬಳಿಯುವ ಕೆಲಸವಾಗುತ್ತಿದೆ. ಅವರ ಪ್ರಯತ್ನ ಫಲಪ್ರದ ಆಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
ಡಿಕೆಶಿ ವಿರುದ್ಧ ಹೆಚ್‌ಡಿಕೆ ಆಕ್ರೋಶ: ನಾಲ್ಕು ತಿಂಗಳ ಹಿಂದಿನ ಪ್ರಕರಣ ಇದು. ಇವತ್ತು ಯಡಿಯೂರಪ್ಪನವರ ಮೇಲೆ ಜಾಮೀನುರಹಿತ ಕೇಸ್ ಹಾಕಲು ಹೊರಟಿದ್ದಾರೆ. ನಾವು ಎಂಟು ಸ್ಥಾನ ಗೆದ್ದಿದ್ದೇವೆ ಎಂದು ಬೀಗುತ್ತಿದ್ದಾರೆ. ಹಾಸನ ಚುನಾವಣೆಯಲ್ಲಿ ಗೆಲ್ಲಲು ಪೆನ್ಡ್ರೈವ್ಗಳನ್ನು ಹರಿಬಿಟ್ಟು ನೀಚ ರಾಜಕಾರಣ ಮಾಡಿದವರು ಇವರು. ಪೆನ್ಡ್ರೈವ್ ಪ್ರಕರಣದಲ್ಲಿ ಆಡಿಯೋ ಬಂತಲ್ಲಾ, ಅದರ ಬಗ್ಗೆ ಏನು ಕ್ರಮ ತೆಗೆದುಕೊಂಡರು? ಸಿಡಿ ಶಿವು ಅವರೇ, ನಾನು ಕೇಂದ್ರ ಸಚಿವನಾಗಿದ್ದೇನೆ. ಈಗ ನಾನು ನಿಮ್ಮ ಮಟ್ಟಕ್ಕೆ ಇಳಿಯಲ್ಲ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್ ವಿರುದ್ಧ ಪ್ರಹಾರ ನಡೆಸಿದರು.
ನಾನು ಕೇಂದ್ರ ಸಚಿವನಾದ ಮೇಲೆ ಕೆಲವರಿಗೆ ನಿದ್ದೆ ಬರುತ್ತಿಲ್ಲ, ಊಟ ಸೇರುತ್ತಿಲ್ಲ. ನಾನು ಯಾರ ಮೇಲೂ ದ್ವೇಷ ಸಾಧಿಸಲ್ಲ. ಆ ಜಾಯಮಾನ ನನ್ನದಲ್ಲ ಎಂದು ತಿರುಗೇಟು ನೀಡಿದರು. ನಾನು ಕೇಂದ್ರ ಸರ್ಕಾರದಲ್ಲಿ ಉಕ್ಕು ಮತ್ತು ಬೃಹತ್ ಕೈಗಾರಿಕಾ ಸಚಿವನಾಗಿರಬಹುದು. ರಾಜ್ಯದ ಹಿತವನ್ನು ಎಂದಿಗೂ ಮರೆಯಲಾರೆ. ಬನ್ನಿ, ಯಾವುದೇ ಇಲಾಖೆಯ ಏನೇ ಕೆಲಸಗಳಿದ್ದರೂ ಮಾಡಿಕೊಡುತ್ತೇನೆ. ನನಗೆ ಸ್ವಲ್ಪ ಸಮಯ ಬೇಕು ಎಂದು ಹೇಳಿದರು.
ರಾಜಕೀಯದಲ್ಲಿ ಯಾರು ಯಾರನ್ನೂ ಮುಗಿಸಲು ಸಾಧ್ಯವಿಲ್ಲ. ನೆರೆಯ ಆಂಧ್ರಪ್ರದೇಶದಲ್ಲಿ ಚಂದ್ರಬಾಬು ನಾಯ್ಡು ಹಿಂದಿನ ಚುನಾವಣೆಯಲ್ಲಿ ಎಷ್ಟು ಸ್ಥಾನಗಳನ್ನು ಗೆದ್ದಿದ್ದರು? ಕಡೆಗೆ ಅನೇಕ ಶಾಸಕರು ಅವರನ್ನು ಬಿಟ್ಟು ಹೋದರು. ಅವರನ್ನು ಜೈಲಿಗೂ ಕಳಿಸಿದರು. ಈಗ ಮತ್ತೆ ಎಷ್ಟು ಸ್ಥಾನಗಳನ್ನು ಗೆದ್ದು ಅಧಿಕಾರಕ್ಕೆ ಬಂದರು ಎನ್ನುವುದನ್ನು ಗಮನಿಸಬೇಕು.
ಕರ್ನಾಟಕದಲ್ಲಿಯೂ ಇದು ನಡೆಯುತ್ತದೆ. ಒಂದು ಸಲ ಅವಕಾಶ ಕೊಡಿ ಅಂತಾ ಕೇಳಿದೆ. ನಾನು ಹೇಳಿದ ಕಾರ್ಯಕ್ರಮಗಳನ್ನು ಅನುಷ್ಠಾನ ಮಾಡದಿದ್ದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದೂ ಹೇಳಿದ್ದೆ. ಅದಕ್ಕೂ ಅವಹೇಳನ ಮಾಡಿದರು. ಕಾಲಚಕ್ರ ತಿರುಗುತ್ತದೆ ಎನ್ನುವುದನ್ನು ಯಾರೂ ಮರೆಯಬಾರದು ಎಂದು ಹೇಳಿದರು.
ಕಾರ್ಯಕರ್ತರ ಗೌರವ ಉಳಿಸುವ ನಿಟ್ಟಿನಲ್ಲಿ ನಿಮ್ಮ ಕೆಲಸ ಮಾಡುತ್ತೇನೆ. ಕುಮಾರಸ್ವಾಮಿ ಕೇಂದ್ರದ ಸಚಿವರಾಗಿದ್ದಾರೆ. ನಮ್ಮ ಕೈಗೆ ಸಿಗಲ್ಲ ಎಂದು ಯಾರೂ ಭಾವಿಸಬೇಡಿ. ಯಾವುದೇ ಸಮಯದಲ್ಲಿ ಬಂದು ನಿಮ್ಮ ಕಷ್ಟ ಹೇಳಿಕೊಳ್ಳಬಹುದು. ನಾನೆಂದಿಗೂ ನಿಮ್ಮ ಜತೆಯಲ್ಲಿಯೇ ಇರುತ್ತೇನೆ ಎಂದರು.
ಮೋದಿ ಅವರಿಗೆ ಕೃತಜ್ಞತೆ: ಪ್ರಧಾನಿ ನರೇಂದ್ರ ಮೋದಿ ಅವರು ನನ್ನ ಮೇಲೆ ನಂಬಿಕೆ ಇರಿಸಿ ಎರಡು ಖಾತೆಗಳನ್ನು ಕೊಟ್ಟಿದ್ದಾರೆ. ಅವರ ನಿರೀಕ್ಷೆಯನ್ನು ಹುಸಿ ಮಾಡುವುದಿಲ್ಲ. ಹಾಗೆಯೇ ನಾಡಿನ, ದೇಶದ ಹಿತಕ್ಕಾಗಿ ದುಡಿಯುತ್ತೇನೆ. ಉದ್ಯೋಗ ಸೃಷ್ಟಿ, ಉತ್ಪಾದನೆ ಹೆಚ್ಚಳ, ಜಿಡಿಪಿ ವೃದ್ಧಿ ಸೇರಿದಂತೆ ದೇಶಕ್ಕೆ ಒಳ್ಳೆಯದಾಗುವ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ಕೈಗಾರಿಕಾ ಕ್ಷೇತ್ರದಲ್ಲಿ ಸಾಮಾನ್ಯ ಜನರಿಗೂ ಉಪಯೋಗ ಆಗುವ ರೀತಿಯಲ್ಲಿ ದುಡಿಯುತ್ತೇನೆ. ನನ್ನ ಶಕ್ತಿ ಮೀರಿ ಕೆಲಸ ಮಾಡುತ್ತೇನೆ. ಪಕ್ಷದ ಕಚೇರಿಯಲ್ಲಿ ನಡೆದ ಅಭಿನಂದನಾ ಸಭೆಯಲ್ಲಿ ಜೆಡಿಎಸ್ ನಗರ ಘಟಕದ ಅಧ್ಯಕ್ಷರಾದ ಹೆಚ್.ಎಂ.ರಮೇಶ್ ಗೌಡ ಎಲ್ಲರನ್ನೂ ಸ್ವಾಗತಿಸಿದರು.
ರಾಜ್ಯಪಾಲರನ್ನು ಭೇಟಿಯಾದ ಹೆಚ್.ಡಿ.ಕುಮಾರಸ್ವಾಮಿ: ಹೆಚ್.ಡಿ.ಕುಮಾರಸ್ವಾಮಿ ಅವರು ಇಂದು ಸಂಜೆ ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಅವರನ್ನು ರಾಜಭವನದಲ್ಲಿ ಸೌಹಾರ್ದಯುತ ಭೇಟಿ ಮಾಡಿದರು. ಈ ವೇಳೆ ರಾಜ್ಯಪಾಲರು, ಕುಮಾರಸ್ವಾಮಿ ಅವರನ್ನು ಅಭಿನಂದಿಸಿದರು. ಕೆಲ ಸಮಯ ಇಬ್ಬರೂ ಸೌಹಾರ್ದಯುತ ಮಾತುಕತೆ ನಡೆಸಿದರು.
ರಾಜ್ಯಪಾಲರ ಭೇಟಿ ಬಳಿಕ ರಾಜಭವನದ ಬಳಿ ಹೆಚ್.ಡಿ ಕುಮಾರಸ್ವಾಮಿ ಮಾಧ್ಯಮಗಳ ಜೊತೆ ಮಾತನಾಡಿ, ಕೇಂದ್ರದಲ್ಲಿ ಸಚಿವ ಸ್ಥಾನ ವಹಿಸಿಕೊಂಡ ಬಳಿಕ ರಾಜ್ಯಕ್ಕೆ ಬಂದಿದ್ದೇನೆ. ರಾಜ್ಯಪಾಲರ ಜೊತೆ ಸೌಹಾರ್ದಯುತವಾದ ಭೇಟಿ ಇದು ಎಂದರು.
ಬಿ.ಎಸ್.ಯಡಿಯೂರಪ್ಪನವರಿಗೆ ಜಾಮೀನು ಸಿಕ್ಕ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಸರ್ಕಾರದ ನಾಲ್ಕು ತಿಂಗಳ ನಡವಳಿಕೆ ಮೇಲೆ ರಾಜ್ಯವೇ ಅನುಮಾನ ಪಡಬೇಕು. ಸರ್ಕಾರದಲ್ಲಿ ಕಾನೂನು ಅನುಭವ ಇರುವವರು ಸಾಕಷ್ಟು ಜನ ಇದ್ದಾರೆ. ಸಿಎಂ ಸಿದ್ದರಾಮಯ್ಯ ಈಗ ನಾಲ್ಕು ತಿಂಗಳ ನಂತರ ಈ ಕೇಸ್ ಕೆದಕ್ಕಿದ್ದಾರೆ. ನನ್ನ ವಿಚಾರದಲ್ಲೂ ನನ್ನ ಮುಗಿಸಲು ಪ್ರಯತ್ನ ಮಾಡ್ತಿದ್ದಾರೆ. ಕೆಲವು ನಾಯಕರು ನನ್ನ ಮುಗಿಸುವ ಪ್ರಯತ್ನ ಮಾಡ್ತಿದ್ದಾರೆ. ಮಾಡಲಿ ಪಾಪ ಎಂದು ಹೇಳಿದರು.
ಕುಮಾರಸ್ವಾಮಿಯನ್ನು ಜೈಲಿಗೆ ಹಾಕಬೇಕು ಎಂಬ ಪ್ರಯತ್ನ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ, ಹೌದು, ಯಾವುದೋ ಹಳೇ ಕೇಸ್ ಹುಡುಕುತ್ತಿದ್ದಾರೆ. ಅವರಿಗೆ ರಾಜ್ಯದ ಅಭಿವೃದ್ಧಿ ಬಗ್ಗೆ ಚಿಂತನೆ ಇಲ್ಲ. ಕುಮಾರಸ್ವಾಮಿ ಅವರನ್ನು ಹೇಗೆ ಮುಗಿಸಬೇಕು ಎಂಬ ಪ್ಲ್ಯಾನ್ ಮಾಡ್ತಿದ್ದಾರೆ ಎಂದರು.
ಚಿತ್ರನಟ ದರ್ಶನ್ ಕೇಸ್ನಲ್ಲಿ ಠಾಣೆಗೆ ಶಾಮಿಯಾನ ಹಾಕಿದ ವಿಚಾರದಲ್ಲಿ ಮಾತನಾಡಿದ ಹೆಚ್‌ಡಿಕೆ, ಇತಿಹಾಸದಲ್ಲಿ ಈ ರೀತಿಯ ಘಟನೆ ಎಂದೂ ನೋಡಿಲ್ಲ. ಈ ಸರ್ಕಾರಕ್ಕೆ ಗೌರವ ಇದ್ದರೆ ಸರಿಪಡಿಸಿಕೊಳ್ಳಲಿ ಎಂದು ಹೇಳಿದರು.
ತಂದೆ-ತಾಯಿ ಆಶೀರ್ವಾದ ಪಡೆದ ಹೆಚ್‌ಡಿಕೆ: ರಾಜಭವನದಿಂದ ಪದ್ಮನಾಭನಗರದ ದೇವೇಗೌಡರ ನಿವಾಸಕ್ಕೆ ಆಗಮಿಸಿದ ಕುಮಾರಸ್ವಾಮಿ, ತಂದೆ, ತಾಯಿಯನ್ನು ಭೇಟಿಯಾಗಿ ಆಶೀರ್ವಾದ ಪಡೆದರು.
ಇದನ್ನೂ ಓದಿ: ಕೇಂದ್ರ ಸಚಿವರಾಗಿ ಮೊದಲ ಬಾರಿಗೆ ರಾಜ್ಯಕ್ಕೆ ಆಗಮಿಸಿದ ಹೆಚ್.ಡಿ.ಕುಮಾರಸ್ವಾಮಿಗೆ ಅದ್ಧೂರಿ ಸ್ವಾಗತ - H D Kumaraswamy