ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿರುವ ರಾಜ್ಯಪಾಲರ ನಡೆ ಖಂಡಿಸಿ ಕಾಂಗ್ರೆಸ್ ಮುಖಂಡರು ಫ್ರೀಡಂ ಪಾರ್ಕ್ನಲ್ಲಿಂದು ಪ್ರತಿಭಟನೆ ನಡೆಸಿದರು. ರಾಜ್ಯಪಾಲರ ನಡೆ ವಿರುದ್ದ ಆಕ್ರೋಶ ಹೊರಹಾಕಿದ ಕೈ ಮುಖಂಡರು, ಕೇಂದ್ರ ಸರ್ಕಾರ ಹಾಗೂ ಬಿಜೆಪಿ ವಿರುದ್ದ ಧಿಕ್ಕಾರ ಕೂಗಿದರು.
ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ಸಿಎಂ ವಿರುದ್ಧ ಪ್ರಾಸಿಕ್ಯೂಷನ್‌ಗೆ ಕೊಟ್ಟಿದ್ದಾರೆ. ಅಧಿಕಾರ ದುರುಪಯೋಗ ಮಾಡಿ ತನಿಖೆಗೆ ಕೊಟ್ಟಿದ್ದಾರೆ. ನೀವೇ ನಮಗೆ ಪ್ರತಿಜ್ಞಾವಿಧಿ ಬೋಧಿಸಿದ್ದೀರಿ. ಈಗ ಇದೇ ಸರ್ಕಾರ ಬೀಳಿಸೋಕೂ ಒಳಸಂಚು ಮಾಡ್ತಿದ್ದೀರಿ. ಆ ಕುರ್ಚಿಗೆ ನೀವು ಕಳಂಕ ತರುತ್ತಿದ್ದೀರಿ. ನೀವು ಕಳಂಕ ತರಬಾರದೆಂದು ಸಲಹೆ ಕೊಡ್ತೇವೆ. ಸಿಎಂ ಯಾವ ತಪ್ಪು ಮಾಡಿದ್ದಾರೆ. ಅಗಾದ ತಪ್ಪಿದೆ ಅಂತ ಹೇಗೆ ಹೇಳ್ತೀರಿ?. ಯಾವುದಾದ್ರೂ ಸಂಸ್ಥೆ ತಪ್ಪಾಗಿದೆ ಅಂತ ಕೊಟ್ಟಿದ್ಯಾ ಎಂದು ಪ್ರಶ್ನಿಸಿದರು.
'ನವರಂಗಿ ನಕಲಿ ಸ್ವಾಮಿ ವಿರುದ್ಧ ತನಿಖೆಗೆ ಕೊಟ್ಟಿಲ್ಲ': ಕಳಂಕಿತರು ತನಿಖೆಗೆ ಕೊಡಿ ಅಂದ್ರೆ ಕೊಟ್ಟಿಲ್ಲ. ನಾವು ಕೇಳ್ತಿರೋದಲ್ಲ, ಲೋಕಾಯುಕ್ತ ಕೇಳ್ತಿದೆ. ಜನತಾದಳದ ಅಗ್ರಗಣ್ಯ ನಾಯಕ. ನವರಂಗಿ ನಕಲಿ ಸ್ವಾಮಿ ವಿರುದ್ಧ ತನಿಖೆಗೆ ಕೊಟ್ಟಿಲ್ಲ. ಬರೀ ಬುರುಡೆ ಬಿಟ್ಕೊಂಡು ಓಡಾಡ್ತಿದ್ದಾರೆ. ಲೋಕಾಯುಕ್ತರೇ ಕೇಳಿದ್ರೂ ಯಾಕೆ ಕೊಡಲಿಲ್ಲ?. ಒಂದೇ ದಿನಕ್ಕೆ ನೀವು ನೋಟಿಸ್ ಕೊಟ್ರಿ. ಟಿ.ಜೆ.ಅಬ್ರಹಾಂ ದೂರು ಕೊಟ್ಟದ್ದೇ ತಡ ಶೋಕಾಸ್ ನೋಟಿಸ್ ಕೊಟ್ಟಿದ್ದೀರಿ. ನಿಮ್ಮನ್ನು ಉಪಯೋಗಿಸಿ ಸರ್ಕಾರ ಕೀಳೋಕೆ ನೋಡ್ತಿದ್ದಾರೆ. ಮಂತ್ರದಿಂದ ಮಾವಿನಕಾಯಿ ಉದರಲ್ಲ. 10 ವರ್ಷ ನಾವೇ ಅಧಿಕಾರದಲ್ಲಿರುತ್ತೇವೆ. ಹಿಂದುಳಿದ ನಾಯಕನ ಮೇಲೆ ಹಗೆ ಸಾದಿಸ್ತೀರಿ ಎಂದು ಕಿಡಿಕಾರಿದರು.
ಸಚಿವ ದಿನೇಶ್ ಗುಂಡೂರಾವ್ ಮಾತನಾಡಿ, ಸರ್ಕಾರವನ್ನು ಅಸ್ಥಿರಗೊಳಿಸುವ ಉದ್ದೇಶದಿಂದ ಬಿಜೆಪಿ, ಸಂಘ ಪರಿವಾರ, ಜೆಡಿಎಸ್, ಕೇಂದ್ರ ಸರ್ಕಾರ ಈ ಹುನ್ನಾರ ಮಾಡುತ್ತಿದೆ. ಕರ್ನಾಟಕಕ್ಕೆ ಕೇಂದ್ರದಿಂದ ಅನುದಾನ ತಾರತಮ್ಯ, ಅನ್ಯಾಯದ ಬಗ್ಗೆ ಹೋರಾಟ ಮಾಡಿದ್ದೆವು. ಸಿಎಂ ನೇತೃತ್ವದಲ್ಲಿ ದೆಹಲಿಗೆ ಹೋಗಿ ಪ್ರತಿಭಟನೆ ಮಾಡಿದ್ದೆವು. ಬರ ಪರಿಹರಾಕ್ಕಾಗಿ ನಾವು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದೆವು. ಇದನ್ನು ನೋಡಿ ಕೇಂದ್ರ ನಾಯಕರಿಗೆ ಸಹಿಸಲು ಆಗಿಲ್ಲ. ಸಿದ್ದರಾಮಯ್ಯ ವರ್ಚಸ್ಸು ಕುಗ್ಗಿಸಲು ಯತ್ನಿಸುತ್ತಿದ್ದಾರೆ. ಕುಮಾರಸ್ವಾಮಿ, ಪ್ರಲ್ಹಾದ್ ಜೋಶಿ, ಯಡಿಯೂರಪ್ಪ, ವಿಜಯೇಂದ್ರ ಎಲ್ಲರೂ ಸೇರಿ ಸಿಎಂಗೆ ಕೆಟ್ಟ ಹೆಸರು ತರಲು ಹೊರಟಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಚಿವ ಕೃಷ್ಣ ಬೈರೇಗೌಡ ಮಾತನಾಡಿ, ರಾಜ್ಯಪಾಲರು ಮಾಡಿದ ದಾಳಿ ಸಿದ್ದರಾಮಯ್ಯ ಮೇಲೆ ಅಲ್ಲ. ಕಾಂಗ್ರೆಸ್ ಸರ್ಕಾರದ ಮೇಲೆ ಅಲ್ಲ. ದಿಲ್ಲಿ ಏಜೆಂಟ್ ಆಗಿ ಕನ್ನಡಿಗರ ಮೇಲೆ ದಾಳಿ ಮಾಡುತ್ತಿದ್ದಾರೆ. ಕರ್ನಾಟಕದ ಸರ್ಕಾರ ಗುಲಾಮರಾಗಿ ಕೆಲಸ ಮಾಡಬೇಕು ಎಂಬುದು ಅವರ ಬಯಕೆ. ಸರ್ಕಾರವನ್ನು ಬುಡಮೇಲು ಮಾಡಬೇಕು ಎಂದು ರಾಜ್ಯಪಾಲರು ಬಳಸುತ್ತಿದ್ದಾರೆ ಎಂದು ದೂರಿದರು.
ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಸಿಎಂ ವಿರುದ್ಧ ಬಿಜೆಪಿ ಷಡ್ಯಂತ್ರ ನಡೆದಿದೆ. ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಟ್ಟಿದ್ದಾರೆ. ಅದಕ್ಕೆ ನಮ್ಮ ಪ್ರತಿಭಟನೆ ನಡೆದಿದೆ. ಭ್ರಷ್ಟಾಚಾರದ ಬಗ್ಗೆ ಮಾತನಾಡ್ತಾರೆ. ಅವರಿಗೆ ಯಾವ ನೈತಿಕತೆನೂ ಇಲ್ಲ. ಏಳು ಕೋಟಿ ಜನರಿಂದ ಸರ್ಕಾರ ಬಂದಿದೆ. ಕೊಟ್ಟ ಎಲ್ಲಾ ಭರವಸೆ ಈಡೇರಿಸಿದ್ದೇವೆ. ಅದಕ್ಕೆ ಇವತ್ತು ಷಡ್ಯಂತ್ರ ಮಾಡ್ತಿದ್ದಾರೆ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷರುಗಳು, ಸಚಿವರುಗಳು, ಸಂಸದರು, ಶಾಸಕರು, ಮಾಜಿ ಸಚಿವರು, ಮಾಜಿ ಶಾಸಕರು ಪಾಲ್ಗೊಂಡಿದ್ದರು.