ಬೆಂಗಳೂರು: 'ಒಂದು ದೇಶ, ಒಂದು ಚುನಾವಣೆ' ನಡೆಸಲು ಕೇಂದ್ರ ಸರ್ಕಾರ ಕೈಗೊಳ್ಳುತ್ತಿರುವ ಕ್ರಮವನ್ನು ಸ್ವಾಗತಿಸುತ್ತೇನೆ. ಪ್ರಧಾನಿ ನರೇಂದ್ರ ಮೋದಿಯವರ ಭಯದಿಂದಾಗಿ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ ಎಂದು ಪ್ರತಿಪಕ್ಷ ನಾಯಕ ಆರ್.ಅಶೋಕ್ ಟೀಕಿಸಿದರು.
ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ''ಒಂದು ದೇಶ, ಒಂದು ಚುನಾವಣೆ ನಡೆಸುವುದರಿಂದ ತೆರಿಗೆದಾರರ ಹಣ ಉಳಿತಾಯವಾಗುತ್ತದೆ. ಸ್ಥಳೀಯ ಸಂಸ್ಥೆಗಳ ಚುನಾವಣೆ, ವಿಧಾನಸಭೆ, ಲೋಕಸಭೆ ಹೀಗೆ ಒಂದೊಂದು ಚುನಾವಣೆ ಒಮ್ಮೊಮ್ಮೆ ನಡೆದಾಗ ನೀತಿ ಸಂಹಿತೆ ಜಾರಿಯಾಗುತ್ತದೆ. ಇದರಿಂದಾಗಿ ಕಾಮಗಾರಿಗಳು ವಿಳಂಬವಾಗಿ ಸರ್ಕಾರ ಯಾವುದೇ ಯೋಜನೆಯನ್ನು ಸರಿಯಾಗಿ ಜಾರಿ ಮಾಡಲು ಸಾಧ್ಯವಾಗುವುದಿಲ್ಲ. ಹೊಸ ಕ್ರಮದಿಂದ ಈ ಸಮಸ್ಯೆ ನಿವಾರಣೆಯಾಗಲಿದೆ'' ಎಂದು ತಿಳಿಸಿದರು.
''ಕಾಂಗ್ರೆಸ್ ಮತ್ತು ಕಮ್ಯುನಿಸ್ಟ್ ಪಕ್ಷಗಳು ಇಂತಹ ಕ್ರಮಕ್ಕೆ ವಿರೋಧ ಮಾಡುವುದು ಸಹಜ. ಲೋಕಸಭೆ ಮತ್ತು ವಿಧಾನಸಭೆ ಚುನಾವಣೆ ಒಟ್ಟಿಗೆ ನಡೆದರೆ, ಸಮಸ್ಯೆಯಾಗುತ್ತದೆ ಎಂದು ಅವರು ಹೆದರಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಅವರಿಗೆ ಮೋದಿಯವರ ಭಯವಿದೆ. ಈ ಕ್ರಮದಿಂದಾಗಿ ಪ್ರಧಾನಿ ಮತ್ತು ಮುಖ್ಯಮಂತ್ರಿಗೆ 5 ವರ್ಷಗಳ ಸಂಪೂರ್ಣ ಅವಧಿ ದೊರೆಯುತ್ತದೆ. ಆ ದೃಷ್ಟಿಯಿಂದ ಇದು ಉತ್ತಮ ಕ್ರಮ'' ಎಂದು ಹೇಳಿದರು.
ಮತ್ತೆ ಮೋದಿಯೇ ಪ್ರಧಾನಿಯಾಗಲಿದ್ದಾರೆ: ''ಪ್ರಧಾನಿ ನರೇಂದ್ರ ಮೋದಿಯವರ ಹತ್ತಿರ ಹೋಗುವ ಸರಿಸಮನಾದ ನಾಯಕರು ಯಾರೂ ಕಾಂಗ್ರೆಸ್‌ನಲ್ಲಿಲ್ಲ. ರಾಹುಲ್ ಗಾಂಧಿಯವರಿಗೆ ಮಾತನಾಡಲು ಬರಲ್ಲ, ತೀರ್ಮಾನ ಕೈಗೊಳ್ಳಲು ಬರುವುದಿಲ್ಲ. ಅವರು ಮಕ್ಕಳಂತೆ ಆಟವಾಡುತ್ತಿದ್ದು, ಅವರಿಗೆ ಪ್ರಬುದ್ಧತೆ ಇಲ್ಲ ಎಂಬುದು ಅವರ ವರ್ತನೆಯಿಂದ ಗೊತ್ತಾಗುತ್ತದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರ ಅತಂತ್ರವಾಗಿದ್ದು, ಆ ವಿಷಯ ಮರೆಮಾಚಲು ಮೋದಿ ಸರ್ಕಾರದ ಬಗ್ಗೆ ಟೀಕೆ ಮಾಡಲಾಗುತ್ತಿದೆ. ನರೇಂದ್ರ ಮೋದಿಯವರು ಖಂಡಿತ 5 ವರ್ಷ ಆಡಳಿತ ನಡೆಸಲಿದ್ದಾರೆ. ಆ ನಂತರವೂ ಕೂಡ ಅವರೇ ಪ್ರಧಾನಿಯಾಗಲಿದ್ದಾರೆ'' ಎಂದರು.
ದೇಶ ಹೀಯಾಳಿಸುವ ಮಾತನಾಡಬಾರದು: ''ಕಾಂಗ್ರೆಸ್‌ಗೆ ಪ್ರಧಾನಿ ಯಾರೆಂದು ಘೋಷಿಸುವ ತಾಕತ್ತು ಕೂಡ ಇಲ್ಲ. ಇಂತಹ ಸ್ಥಿತಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಟೀಕೆ ಮಾಡಬಾರದು. ರಾಹುಲ್ ಗಾಂಧಿಯವರು ವಿದೇಶಕ್ಕೆ ಹೋಗಿ ಸಂವಿಧಾನ ಹಾಗೂ ಮೀಸಲು ಬಗ್ಗೆ ಮಾತನಾಡಿದ್ದಾರೆ. ಈ ವಿಚಾರಗಳನ್ನು ದೇಶದೊಳಗೆ ಮಾತಾಡಬೇಕು. ಅಲ್ಲಿ ಹೋಗಿ ದೇಶವನ್ನು ಹೀಯಾಳಿಸುವ ಮಾತಾಡಬಾರದು'' ಎಂದು ಆರ್.ಅಶೋಕ್ ಕಿಡಿಕಾರಿದರು.
''ತನ್ನ ಹಿಂದೆ ಇರುವವರೇ ಮುಗಿಸುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ. ಆರೇಳು ಜನರು ಅವರ ಕುರ್ಚಿಗೆ ಹಳ್ಳ ತೋಡಲು ಸಿದ್ಧವಾಗಿದ್ದಾರೆ'' ಎಂದು ಅಶೋಕ್ ವ್ಯಂಗ್ಯವಾಡಿದರು.
ಇದನ್ನೂ ಓದಿ: ಸಂಗೊಳ್ಳಿ ರಾಯಣ್ಣನ ಹೆಸರು ಹೇಳಲೂ ಸಿದ್ದರಾಮಯ್ಯರಿಗೆ ನೈತಿಕತೆ ಇಲ್ಲ; ರವಿಕುಮಾರ್ - Ravikumar slams CM