ಬೆಂಗಳೂರು: ''ಡಾ.ಸಿ.ಎನ್.ಮಂಜುನಾಥ್ ಪ್ರಬಲ ಅಭ್ಯರ್ಥಿ ಆಗಿದ್ದರೆ, ಜೆಡಿಎಸ್ ಸಿಂಬಲ್ನಿಂದ ಅವರನ್ನು ನಿಲ್ಲಿಸಬೇಕಿತ್ತು'' ಎಂದು ಸಂಸದ ಡಿ.ಕೆ.ಸುರೇಶ್ ತಿಳಿಸಿದರು. ಸದಾಶಿವನಗರದಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದ ಶಾಸಕರ ಜೊತೆ ಸಭೆ ನಡೆಸಿದ ಬಳಿಕ ಅವರು ಮಾತನಾಡಿದರು.
''ಇಂದು ಚುನಾವಣೆ ಸಂಬಂಧ ಸಭೆ ಕರೆದಿದ್ದು, ಕಾರ್ಯತಂತ್ರದ ಕುರಿತು ಸಭೆ ಮಾಡಿದ್ದೇವೆ. ಯಾವ ಮಾನದಂಡದ ಮೇಲೆ ಚುನಾವಣೆ ಎದುರಿಸಬೇಕು ಎಂಬ ಅನೇಕ ವಿಚಾರಗಳ ಕುರಿತು ಚರ್ಚೆ ಆಗಿದೆ. ಶಾಸಕರು, ಸೋತ ಅಭ್ಯರ್ಥಿಗಳ ಜೊತೆ ಸಭೆ ಮಾಡಿದ್ದೇನೆ'' ಎಂದರು.
ಮಂಜುನಾಥ್ ಅವರು ಪ್ರಬಲ ಅಭ್ಯರ್ಥಿಯೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ''ಸಿಂಬಲ್ ಅಥವಾ ವ್ಯಕ್ತಿ ಬಗ್ಗೆ ಮಾತಾಡಲು ಹೋಗಲ್ಲ. ನಾನು ಕ್ಷೇತ್ರದಲ್ಲಿ ದುಡಿದಿದ್ದೇನೆ. ಅದರ ಕೂಲಿಯನ್ನು ಜನರ ಬಳಿ ಕೇಳುತ್ತಿದ್ದೇನೆ. ಮಂಜುನಾಥ್ ಸ್ಪರ್ಧೆಯು ಅವರ ತೀರ್ಮಾನ. ಅದರ ಬಗ್ಗೆ ನಾನು ಚರ್ಚೆ ಮಾಡಲ್ಲ. ಅವರ ಕಾರ್ಯಕರ್ತರಿಗೆ ನಾನು ಕರೆ ಕೊಡುವುದೇನೆಂದರೆ, ಜಾತ್ಯಾತೀತ ಮಹಿಳೆ ಇಂದು ತೆನೆ ಇಳಿಸಿದ್ದಾಳೆ. ದಯವಿಟ್ಟು ನಾನು ಸ್ನೇಹಿತ, ಸಹೋದರನಾಗಿ ಬೆಂಬಲ ಕೇಳುತ್ತಿದ್ದೇನೆ'' ಎಂದರು.
''ಸೇವೆ ಮಾಡಲು ನಾನು ಸಿದ್ಧನಿದ್ದೇನೆ. ಯಾವುದೇ ರಾಗ, ದ್ವೇಷ ಇಲ್ಲ. ನಾನು ಅಭಿವೃದ್ಧಿ ಮಾಡಲು ಬಂದಿದ್ದೇನೆ. ನೀವು ಸಹಕಾರ ಕೊಡಿ ಅಂತ ಕೇಳುತ್ತಿದ್ದೇನೆ. ಮುಕ್ತ ಮನಸ್ಸಿನಿಂದ ಕಾಂಗ್ರೆಸ್ ಪಕ್ಷಕ್ಕೆ ಬನ್ನಿ ಎನ್ನುತ್ತೇನೆ. ಯಾರು ಶಸ್ತ್ರ ತ್ಯಾಗ ಮಾಡಿದ್ದಾರೆಯೋ ಆ ಕಾರ್ಯಕರ್ತರಿಗೂ ಕರೆ ನೀಡುತ್ತೇನೆ. ಅಭಿವೃದ್ಧಿಗಾಗಿ ನಮ್ಮ ಜೊತೆ ಬನ್ನಿ. ದುಡಿದ ಕಾರ್ಯಕರ್ತರಿಗೆ ರಕ್ಷಣೆ ಕೊಡಲು ಮುಂದಾಗಿದ್ದೇನೆ. ಅವರ ಪಕ್ಷ ಪ್ರಬಲವಾಗಿ ಇದೆಯೋ, ಇಲ್ವೋ ಗೊತ್ತಿಲ್ಲ. ಕಾರ್ಯಕರ್ತರ ಜೊತೆ ನಾನು ಹೊಂದಾಣಿಕೆ ಮಾಡಿಕೊಂಡು ಹೋಗುತ್ತೇನೆ ಬನ್ನಿ'' ಎಂದು ಕರೆ ನೀಡಿದರು.
ಜೆಡಿಎಸ್ನವರು ಆತಂಕದಿಂದ ಸಂಪರ್ಕಿಸುತ್ತಿದ್ದಾರೆ ಎಂದ ಡಿಕೆಶಿ: ಡಿಸಿಎಂ ಡಿ.ಕೆ.ಶಿವಕುಮಾರ್ ಮಾತನಾಡಿ, ''ನಾನು ಬೆಂಗಳೂರು ಗ್ರಾಮಾಂತರ ಕ್ಷೇತ್ರದ ತಯಾರಿ ಮಾಡಬೇಕಲ್ಲ. ಎರಡೂ ಪಕ್ಷದಿಂದ ನಮ್ಮ ಪಾರ್ಟಿ ಸೇರಲು ಪ್ರಯತ್ನ ಮಾಡುತ್ತಿದ್ದಾರೆ, ಅದನ್ನೇ ಚರ್ಚೆ ಮಾಡಿದೆವು. ಇಷ್ಟು ವರ್ಷ 5-6 ಕ್ಷೇತ್ರಗಳಲ್ಲಿ ಕಾಂಗ್ರೆಸ್-ಜೆಡಿಎಸ್ ನಡುವೆ ನೇರ ಸ್ಪರ್ಧೆ ಇತ್ತು. ಈಗ ದೇವೇಗೌಡರು, ಕುಮಾರಸ್ವಾಮಿ ಕುಟುಂಬದವರೇ ಬಿಜೆಪಿ ಸೇರಿದ್ದರಿಂದ ಜೆಡಿಎಸ್ ಕಾರ್ಯಕರ್ತರು ಆತಂಕದಿಂದ ನಮ್ಮನ್ನು ಸಂಪರ್ಕಿಸುತ್ತಿದ್ದಾರೆ. ಹಳೆಯದನ್ನೆಲ್ಲ ಮರೆತು ಪಕ್ಷಕ್ಕೆ ಸೇರ್ಪಡೆ ಮಾಡಿಕೊಳ್ಳುವ ಬಗ್ಗೆ ನಾಯಕರಿಗೆ ಸೂಚನೆ ನೀಡಿದ್ದೇವೆ'' ಎಂದರು.
''ಮೊದಲು ಅವರ ಪಕ್ಷದ ಬಗ್ಗೆ ಮಾತನಾಡಲಿ. ಕುಮಾರಸ್ವಾಮಿ, ದೇವೇಗೌಡರು ಜೆಡಿಎಸ್ ಇದೆಯಾ ಅಂತ ಹೇಳಲಿ. ಆಮೇಲೆ ಪ್ರಬಲ ಅಭ್ಯರ್ಥಿ ಬಗ್ಗೆ ಮಾತನಾಡಲಿ'' ಎಂದು ಡಿ.ಕೆ.ಶಿವಕುಮಾರ್ ಸವಾಲು ಹಾಕಿದರು.
ಇದನ್ನೂ ಓದಿ: ಚುನಾವಣಾ ಬಾಂಡ್ ಸಂಬಂಧ ಸುಪ್ರೀಂ ನೇತೃತ್ವದಲ್ಲಿ ತನಿಖೆ ನಡೆಸಿ, ಅಲ್ಲಿಯವರೆಗೆ ಬಿಜೆಪಿ ಖಾತೆ ಜಪ್ತಿ ಮಾಡಿ: ಖರ್ಗೆ