ಬೆಂಗಳೂರು: "ನಾವು ಸತ್ತರೂ ಅಥವಾ ನಮ್ಮನ್ನು ನೇಣಿಗೆ ಹಾಕಿದರೂ ಸಹ ಇಂಡಿಯಾ ಜಿಂದಾಬಾದೇ. ಒಂದು ಸಮುದಾಯವನ್ನು, ಪಕ್ಷವನ್ನು ಇಷ್ಟೊಂದು ಟಾರ್ಗೆಟ್ ಮಾಡಿ ಕೀಳು ಮಟ್ಟದ ರಾಜಕಾರಣ ಮಾಡುವುದಾದರೆ ನಾವೇನು ವಿಷ ಸೇವಿಸಿ ಸಾಯಬೇಕಾ" ಎಂದು ಕಾಂಗ್ರೆಸ್ ಶಾಸಕ ರಿಜ್ವಾನ್ ಅರ್ಷದ್ ಪ್ರಶ್ನಿಸಿದರು. ಇಂದು ಸದನದ ಕಲಾಪಗಳಿಗೆ ಹಾಜರಾಗುವ ಮುನ್ನ ವಿಧಾನಸೌಧದ ಆವರಣದಲ್ಲಿ ಪಾಕ್ ಪರ ಘೋಷಣೆ ಕೂಗಿದ ಆರೋಪ ಪ್ರಕರಣದ ಕುರಿತು ಅವರು ಪ್ರತಿಕ್ರಿಯಿಸಿದರು.
"ಮಾಧ್ಯಮದವರು ಕೂಡಾ ನಿನ್ನೆಯ ಘಟನೆಗೆ ಸಾಕ್ಷಿಯಾಗಿದ್ದೀರಿ. ನಮ್ಮ ಅಭ್ಯರ್ಥಿ ನಾಸೀರ್ ಹುಸೇನ್ ಚುನಾವಣೆಯಲ್ಲಿ ಗೆದ್ದು ಬಂದ ನಂತರ ಬೆಂಬಲಿಗರು "ನಾಸೀರ್ ಖಾನ್ ಜಿಂದಾಬಾದ್, ನಾಸೀರ್ ಸಾಬ್ ಜಿಂದಾಬಾದ್" ಎಂದು ಕೂಗಿದ್ದಾರೆ. ಆದರೆ ಅದನ್ನೇ ನಮ್ಮ ನೆರೆಯ ದೇಶದ ಪರ ಘೋಷಣೆ ಕೂಗಿದ್ದಾರೆ ಎಂದು ಹೇಳುವುದು ಸರಿಯೇ?. ನಮ್ಮ ಸಮುದಾಯಕ್ಕಾಗಲಿ, ಪಕ್ಷಕ್ಕಾಗಲಿ ಇಷ್ಟು ಟಾರ್ಗೆಟ್ ಮಾಡಬೇಕಾದದ್ದೇನಿದೆ" ಎಂದರು.
"ಯಾರಾದರೂ ಆ ರೀತಿ ಕೂಗಿದ್ದರೆ ನೇಣಿಗೆ ಹಾಕಲಿ, ಸಮಗ್ರವಾದ ತನಿಖೆಯಾಗಲಿ. ಆದರೆ ನಾವು ಮಾತ್ರ ನಮ್ಮನ್ನು ನೇಣಿಗೆ ಹಾಕಿದರೂ, ಸಾಯಿಸಿದರೂ ಎಂದಿಗೂ ಇಂಡಿಯಾ ಜಿಂದಾಬಾದೇ. ಆದರೆ ಈ ಮಟ್ಟದ ಕೀಳು ರಾಜಕಾರಣದಲ್ಲಿ ಯಾರೂ ಸಹ ಸಹಿಸುವುದಿಲ್ಲ. ನಾವೇನು ವಿಷ ಸೇವಿಸಿ ಸಾಯಬೇಕಾ? ಬದುಕಬಾರದಾ?" ಎಂದು ಹೇಳಿದರು.
ಇದನ್ನೂ ಓದಿ: ವಿಧಾನಸಭೆಯಲ್ಲೂ ಪ್ರತಿಧ್ವನಿಸಿದ ಪಾಕಿಸ್ತಾನದ ಪರ ಘೋಷಣೆ ಆರೋಪ ಪ್ರಕರಣ: 10 ನಿಮಿಷ ಸದನ ಮುಂದೂಡಿಕೆ