ಯಾದಗಿರಿ: ಹೃದಯಾಘಾತದಿಂದ ಭಾನುವಾರ ಮಧ್ಯಾಹ್ನ ನಿಧನರಾದ ಸುರಪುರ ಕ್ಷೇತ್ರದ ಕಾಂಗ್ರೆಸ್ ಶಾಸಕ ಹಾಗೂ ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷರಾಗಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಅಂತ್ಯಕ್ರಿಯೆ ಸುರಪುರ ನಗರದಲ್ಲಿ ಇಂದು ಸಂಜೆ 5 ಗಂಟೆಗೆ ಸಕಲ ಸರ್ಕಾರಿ ಗೌರವಗಳೊಂದಿಗೆ ನೆರವೇರಿತು.
ಇಂದು ಬೆಳಗ್ಗೆ ಪಾರ್ಥಿವ ಶರೀರವನ್ನು ಸುರಪುರಕ್ಕೆ ತರಲಾಗಿತ್ತು. ಸಾರ್ವಜನಿಕರ ದರ್ಶನಕ್ಕಾಗಿ ಜಿಲ್ಲಾಡಳಿತ ಪ್ರಭು ಕಾಲೇಜು ಮೈದಾನದಲ್ಲಿ ವ್ಯವಸ್ಥೆ ಮಾಡಿತ್ತು. ಬೆಳಗ್ಗೆಯಿಂದಲೇ ಜನರು ಮೈದಾನಕ್ಕೆ ಆಗಮಿಸಿ, ಅಂತಿಮ ದರ್ಶನ ಪಡೆದರು. ಮಧ್ಯಾಹ್ನ 3 ಗಂಟೆಗೆ ನಾಯಕ ಅವರ ರಾಜಕೀಯ ಗುರುಗಳಾದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಪ್ರಿಯಾಂಕ್ ಖರ್ಗೆ, ಶರಣಬಸಪ್ಪ ದರ್ಶನಾಪೂರ, ಸತೀಶ್ ಜಾರಕಿಹೋಳಿ, ಬಿ.ನಾಗೇಂದ್ರ, ತೆಲಂಗಾಣ ರಾಜ್ಯದ ಲೋಕೋಪಯೋಗಿ ಸಚಿವ ಕೋಮಟರಡ್ಡಿ ವೆಂಕಟರಡ್ಡಿ, ರಾಯಚೂರು ಸಂಸದ ರಾಜಾ ಅಮರೇಶ್ವರ ನಾಯಕ, ಶಾಸಕರಾದ ಶರಣಗೌಡ ಕಂದಕೂರ, ಕರೆಮ್ಮ ನಾಯಕ ದೇವದುರ್ಗ, ಚನ್ನಾರಡ್ಡಿ ಪಾಟೀಲ್ ತುನ್ನೂರ, ವಿಜಯಾನಂದ ಕಾಶಪ್ಪನವರ್, ಮಾಜಿ ಸಚಿವರಾದ ಕೆ.ಶಿವನಗೌಡ ನಾಯಕ್, ಅಮರೇಗೌಡ ಪಾಟೀಲ್ ಬಯ್ಯಾಪೂರ, ಡಾ.ಎ.ಬಿ.ಮಾಲಕಾರಡ್ಡಿ, ಮಾಜಿ ಶಾಸಕ ಯತೀಂದ್ರ ಸಿದ್ದರಾಮಯ್ಯ, ಅಮಾತೆಪ್ಪ ಕಂದಕೂರ ಸೇರಿದಂತೆ ಅನೇಕ ಗಣ್ಯರು ಹಾಗೂ ಅಧಿಕಾರಿಗಳು ಮತ್ತು ನಾನಾ ಮಠಾಧೀಶರು ಅಂತಿಮ ನಮನ ಸಲ್ಲಿಸಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ರಾಜಾ ವೆಂಕಟಪ್ಪ ನಾಯಕ ಅವರ ಪತ್ನಿ ಹಾಗೂ ಪುತ್ರರಾದ ರಾಜಾ ವೇಣುಗೋಪಾಲ ನಾಯಕ, ಸಂತೋಷ ಹಾಗೂ ರಾಜಾ ಕುಮಾರ ನಾಯಕ ಅವರಿಗೆ ಗಣ್ಯರು ಹಾಗೂ ಮಠಾಧೀಶರು ಸಾಂತ್ವನ ಹೇಳಿದರು. ಬಳಿಕ ತೆರೆದ ವಾಹನದಲ್ಲಿ ಅವರ ಪಾರ್ಥಿವ ಶರೀರವನ್ನು ರುಧ್ರಭೂಮಿಯವರೆಗೆ ಮೆರವಣಿಗೆ ನಡೆಸಲಾಯಿತು.
ನಂತರ ತಂದೆಯ ಚಿತೆಗೆ ಹಿರಿಯ ಪುತ್ರ ರಾಜಾ ವೇಣು ಗೋಪಾಲ್ ನಾಯಕ ಅವರು ರಾಜಾ ಮನೆತನದ ಧಾರ್ಮಿಕ ವಿಧಿ-ವಿಧಾನಗಳೊಂದಿಗೆ ಅಗ್ನಿಸ್ಪರ್ಶ ಮಾಡಿದರು.
ಇದನ್ನೂ ಓದಿ: ಸಕಲ ಸರ್ಕಾರಿ ಗೌರವದೊಂದಿಗೆ ಇಂದು ರಾಜಾ ವೆಂಕಟಪ್ಪ ನಾಯಕ ಅಂತ್ಯಸಂಸ್ಕಾರ: ಸರ್ಕಾರದ ಆದೇಶ