ಮೈಸೂರು: ಬಿಜೆಪಿ ಮತ್ತು ಜೆಡಿಎಸ್ ಮುಖಂಡರೊಂದಿಗೆ ಸೇರಿ ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ಸಿಎಂ ಸಿದ್ದರಾಮಯ್ಯ ಮತ್ತು ಅವರ ಕುಟುಂಬದ ವಿರುದ್ಧ ಆರ್‌ಟಿಐ ಕಾರ್ಯಕರ್ತರಾದ ಗಂಗರಾಜು ಮತ್ತು ಸ್ನೇಹಮಯಿ ಕೃಷ್ಣ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ. ಅಲ್ಲದೆ, ಅವರನ್ನು ಕೂಡಲೇ ಬಂಧಿಸಿ, ಕಾನೂನು ಕ್ರಮ ಜರುಗಿಸುವಂತೆ ಮೈಸೂರು ನಗರ ಮತ್ತು ಜಿಲ್ಲಾ ಕಾಂಗ್ರೆಸ್ ನಿಯೋಗದಿಂದ ನಗರ ಪೊಲೀಸ್ ಆಯುಕ್ತರಿಗೆ ಮನವಿ ಸಲ್ಲಿಸಲಾಯಿತು.
ಮುಡಾದಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಈಗಾಗಲೇ ನ್ಯಾಯಾಂಗ ತನಿಖೆ ನಡೆಯುತ್ತಿದೆ. ಸಿದ್ದರಾಮಯ್ಯನವರ ಪತ್ನಿ ಪಾರ್ವತಮ್ಮ ಅವರ 3 ಎಕರೆ 16 ಗುಂಟೆ ಜಾಗವನ್ನು ಪಡೆದಿರುವ ಮುಡಾ, 50:50 ಅನುಪಾತದಲ್ಲಿ ಜಮೀನಿಗೆ ಪರ್ಯಾಯವಾಗಿ ನಿವೇಶಗಳನ್ನು ಹಂಚಿಕೆ ಮಾಡಿದೆ. ಆದರೆ, ಇದರ ಬಗ್ಗೆ ಸುಳ್ಳು ದಾಖಲೆಗಳನ್ನು ಸೃಷ್ಟಿ ಮಾಡಿಕೊಂಡಿರುವ ಆರ್‌ಟಿಐ ಕಾರ್ಯಕರ್ತರಾದ ಗಂಗರಾಜು ಮತ್ತು ಸ್ನೇಹಮಯಿ ಕೃಷ್ಣ, ಕಳೆದ 30 ದಿನಗಳಿಂದ ಮಾಧ್ಯಮಗಳು ಹಾಗೂ ಸಾಮಾಜಿಕ ಜಾಲತಾಣಗಳ ಮೂಲಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ಅಪಪ್ರಚಾರ ನಡೆಸುತ್ತಿದ್ದಾರೆ.
ಸುಳ್ಳು ದಾಖಲೆಗಳನ್ನು ಸೃಷ್ಟಿಸಿಕೊಂಡು ದೊಡ್ಡ ಹಗರಣವನ್ನೇ ಮಾಡಿದ್ದಾರೆಂದು ಅಪಪ್ರಚಾರ ಮಾಡುತ್ತಿದ್ದಾರೆ. ಇವರ ಬಳಿ ದಾಖಲೆಗಳಿದ್ದರೆ ಅವುಗಳನ್ನು ನ್ಯಾಯಾಂಗ ತನಿಖೆಗೆ ನೀಡಬೇಕು. ಅದನ್ನು ಬಿಟ್ಟು ಮುಖ್ಯಮಂತ್ರಿಗಳ ಘನತೆಗೆ ಧಕ್ಕೆ ತರುವುದು ಹಾಗೂ ಅವರ ಕುಟುಂಬವನ್ನು ನಿಂದಿಸುತ್ತಿದ್ದಾರೆ. ಸುಳ್ಳಿಗೆ ಪುಷ್ಟಿ ನೀಡುತ್ತಿದ್ದಾರೆ. ಆದ್ದರಿಂದ ಈ ಇಬ್ಬರೂ ಆರ್‌ಟಿಐ ಕಾರ್ಯಕರ್ತರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು.
ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ ಮಾತನಾಡಿ, ''ಆರ್‌ಟಿಐ ಕಾರ್ಯಕರ್ತರಾದ ಗಂಗರಾಜು ಮತ್ತು ಸ್ನೇಹಮಯಿ ಕೃಷ್ಣ ಬಿಜೆಪಿ ಮತ್ತು ಜೆಡಿಎಸ್ ಏಜೆಂಟ್‌ಗಳಾಗಿದ್ದು, ರೋಲ್‌ಕಾಲ್ ಗಿರಾಕಿಗಳಾಗಿದ್ದಾರೆ. ಅವರ ವರ್ತನೆ ಇದೇ ರೀತಿ ಮುಂದುವರೆದರೆ ಕಾಂಗ್ರೆಸ್ ಕಾರ್ಯಕರ್ತರು ಪ್ರತಿಭಟಿಸಬೇಕಾಗುತ್ತದೆ'' ಎಂದು ಎಚ್ಚರಿಸಿದರು.
ವ್ಯವಸ್ಥೆಯ ವಿರುದ್ಧ ಪ್ರತಿಭಟನೆ: ಮೈಸೂರು ಜಿಲ್ಲಾ ಗ್ರಾಮಾಂತರ ಸಮಿತಿ ಅರ್ಧಕ್ಷ ಡಾ. ಬಿ. ಜೆ. ವಿಜಯ್‌ಕುಮಾರ್ ಮಾತನಾಡಿ, ಸುಮಾರು 7 ವರ್ಷದ ಹಿಂದೆ ಮುಖ್ಯಮಂತ್ರಿಗಳು ಮನೆ ಕಟ್ಟುವಾಗ ಇದೇ ಅಪಪ್ರಚಾರ ಮಾಡಿ ಕೋರ್ಟ್‌ಗೂ ಹೋಗಿದ್ದರು. ಆದರೆ, ಅಂದಿನ ನ್ಯಾಯಾಧೀಶರು ಛೀಮಾರಿ ಹಾಕಿ, ಅರ್ಜಿ ವಜಾ ಮಾಡಿದ್ದರು. ಇಬ್ಬರು ಆರ್‌ಟಿಐ ಕಾರ್ಯಕರ್ತರ ಮೇಲೆ ಆರೇಳು ಕೇಸ್‌ಗಳಿದ್ದು, ಪೊಲೀಸರು ಗಮನಿಸಬೇಕು. ಆಕಸ್ಮಾತ್ ಪೊಲೀಸರು ಕ್ರಮಕೈಗೊಳ್ಳದಿದ್ದರೆ ವ್ಯವಸ್ಥೆಯ ವಿರುದ್ಧ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ತಾಕೀತು ಮಾಡಿದರು. ನಗರಾಧ್ಯಕ್ಷ ಆರ್. ಮೂರ್ತಿ ಸೇರಿದಂತೆ ಕಾಂಗ್ರೆಸ್ ನಿಯೋಗದಲ್ಲಿ ನಗರ ಮತ್ತು ಜಿಲ್ಲಾ ಕಾಂಗ್ರೆಸ್ ಮುಖಂಡರು ಇದ್ದರು.
ಇದನ್ನೂ ಓದಿ: ಅಭಿವೃದ್ಧಿ ಕಾಮಗಾರಿಗಳಿಗೆ ಅನುದಾನ ಬಿಡುಗಡೆಗೆ ಕೋರಿದ್ದ ಶಾಸಕರ ಅರ್ಜಿ ವಜಾ - High court