ಬೆಳಗಾವಿ: ಇನ್ನೊಂದು ವಾರದಲ್ಲಿ ಲೋಕಸಭಾ ಚುನಾವಣೆಗೆ ಅಭ್ಯರ್ಥಿಗಳ ಪಟ್ಟಿಯನ್ನು ಬಿಡುಗಡೆ ಮಾಡಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.
ಬೆಳಗಾವಿಯಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಅವರು, ಲೋಕಸಭಾ ಚುನಾವಣೆಗೆ ತಯಾರಿ ಮಾಡಿಕೊಳ್ಳಲಾಗಿದ್ದು, ಈಗಾಗಲೇ ಕಾರ್ಯಕರ್ತರಿಗೆ ಸೂಚನೆ ಸಹ ನೀಡಿದ್ದೇವೆ. ಬೆಳಗಾವಿ ಹಾಗೂ ಚಿಕ್ಕೋಡಿ ಲೋಕಸಭೆ ಕ್ಷೇತ್ರದ ಅಭ್ಯರ್ಥಿಗಳನ್ನು ಹೈಕಮಾಂಡ್ ಫೈನಲ್ ಮಾಡಲಿದೆ ಎಂದು ಹೇಳಿದರು.
ಇನ್ನು ಬೆಳಗಾವಿ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಸಚಿವೆ ಹೆಬ್ಬಾಳ್ಕರ್ ಸ್ಪರ್ಧೆ ಮಾಡ್ತಾರಾ? ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಚಿವ ಸತೀಶ ಜಾರಕಿಹೊಳಿ, ಹೆಬ್ಬಾಳ್ಕರ್ ಅವರ ಹೆಸರು ಇಲ್ಲ. ಅವರ ಪುತ್ರ ಮೃಣಾಲ್ ಹೆಸರು ಸೇರಿದಂತೆ ಚಿಕ್ಕೋಡಿ ಹಾಗೂ ಬೆಳಗಾವಿ ಕ್ಷೇತ್ರಕ್ಕೆ ತಲಾ ಎರಡು ಹೆಸರು ಫೈನಲ್ ಮಾಡಿ ಹೈಕಮಾಂಡ್ಗೆ ಕಳುಹಿಸಲಾಗಿದೆ. ಅಂತಿಮವಾಗಿ ಅಭ್ಯರ್ಥಿ ಯಾರಾಗಬೇಕೆಂಬುವದನ್ನು ಹೈಕಮಾಂಡ್ ನಿರ್ಧರಿಸುತ್ತದೆ ಎಂದು ಸ್ಪಷ್ಟಪಡಿಸಿದರು.
ಪುತ್ರಿ ಪ್ರಿಯಾಂಕಾ ಸ್ಪರ್ಧಿಸುವದಿಲ್ಲ: ಪುತ್ರಿ ಪ್ರಿಯಾಂಕಾ ಸ್ಪರ್ಧಿಸುವುದಿಲ್ಲ. ಈ ಬಗ್ಗೆ ಹಿಂದೆಯೂ ನಾನು ಹೇಳಿದ್ದೇನೆ. ಚಿಕ್ಕೋಡಿ ಕ್ಷೇತ್ರಕ್ಕೆ ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ನೀಡಲು ಚಿಂತನೆ ನಡೆಸಿದ್ದೇವೆ. ಜಾತಿ ಲೆಕ್ಕಾಚಾರಕ್ಕಿಂತ ಗೆಲ್ಲಲು ಮಾನದಂಡ ಇಟ್ಟುಕೊಂಡು ಟಿಕೆಟ್ ನೀಡಲಾಗುತ್ತದೆ. ಚಿಕ್ಕೋಡಿಯಿಂದ ಹೊಸಮುಖ ಪ್ರಯೋಗ ಮಾಡಲಾಗುತ್ತಿದೆ. ಹೊಸ ನಾಯಕರು, ಕಾರ್ಯಕರ್ತರು ಬರಬೇಕು. ಅದಕ್ಕೆ ಹೊಸ ಪ್ರಯೋಗ ಮಾಡಲಾಗುತ್ತಿದೆ ಎನ್ನುವ ಮೂಲಕ ಈ ಬಾರಿ ಹೊಸಬರಿಗೆ ಟಿಕೆಟ್ ಎಂಬ ಸುಳಿವನ್ನು ಸಚಿವ ಸತೀಶ್ ಜಾರಕಿಹೊಳಿ ಬಿಟ್ಟುಕೊಟ್ಟರು.
ಸತೀಶ್ ಜಾರಕಿಹೊಳಿ ಲೋಕಸಭೆಗೆ ಬೇಡ: ಕಾರ್ಯಕರ್ತೆಯರ ಒತ್ತಾಯ
ಬೆಳಗಾವಿಯ ಕ್ಷೇತ್ರದಿಂದ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನು ಲೋಕಸಭೆಗೆ ಕಳಿಸದಂತೆ ಕಾಂಗ್ರೆಸ್ ಮಹಿಳಾ ಕಾರ್ಯಕರ್ತೆಯರು ಇತ್ತೀಚೆಗೆ ಒತ್ತಾಯಿಸಿದ್ದರು.
ಬಿಜೆಪಿ ಹಿಡಿತದಲ್ಲಿರುವ ಬೆಳಗಾವಿ ಲೋಕಸಭೆ ಕ್ಷೇತ್ರವನ್ನು ಕೈವಶ ಮಾಡಿಕೊಳ್ಳಲು ಕಾಂಗ್ರೆಸ್ ಹೈಕಮಾಂಡ್ ರಣತಂತ್ರ ರೂಪಿಸಿದೆ. ಅದರಲ್ಲೂ ಪ್ರಭಾವಿ ನಾಯಕ, ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಅವರನ್ನೇ ಕಣಕ್ಕಿಳಿಸಿದರೆ ಗೆಲುವು ಸುಲಭವಾಗುವ ಲೆಕ್ಕಾಚಾರವನ್ನು ಕಾಂಗ್ರೆಸ್ ಹೊಂದಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಅತ್ತ ಹೈಕಮಾಂಡ್ ಸತೀಶ್ ಕಣಕ್ಕಿಳಿಸಲು ತೆರೆಮರೆಯಲ್ಲಿ ಕಸರತ್ತು ನಡೆಸುತ್ತಿದೆ. ಆದರೆ ಇತ್ತ ಸತೀಶ್ ಅವರ ಮಹಿಳಾ ಅಭಿಮಾನಿಗಳು, ಕಾರ್ಯಕರ್ತೆಯರು ಯಾವುದೇ ಕಾರಣಕ್ಕೂ ಇದಕ್ಕೆ ನಾವು ಅವಕಾಶ ಕೊಡೋದಿಲ್ಲ. ನಮ್ಮ ಸಾಹೇಬರು ರಾಜ್ಯದಲ್ಲೇ ಮಂತ್ರಿಯಾಗಿ ಮುಂದುವರಿಯಬೇಕು. ಅಷ್ಟಕ್ಕೂ ಇದನ್ನು ಮೀರಿ ಟಿಕೆಟ್ ನೀಡಿದರೆ ಬೆಳಗಾವಿಯಿಂದ ದೆಹಲಿ ಚಲೋ ಮಾಡುತ್ತೇವೆ ಎಂದು ಕಾಂಗ್ರೆಸ್ ಹೈಕಮಾಂಡ್ಗೆ ಸಂದೇಶ ರವಾನಿಸಿದ್ದರು.
ಇದನ್ನೂಓದಿ:ಮಾರ್ಚ್ 17ಕ್ಕೆ ಚುನಾವಣಾ ರಾಜಕೀಯದಿಂದ ನಿವೃತ್ತಿ : ಸಂಸದ ವಿ ಶ್ರೀನಿವಾಸ್ ಪ್ರಸಾದ್