ಹಾವೇರಿ: ಬಸವರಾಜ ಬೊಮ್ಮಾಯಿ ಅವರ ಬಳಿ ದುಡ್ಡಿದೆ. ಹಾಗಾಗಿ, ಅವರು ಲೀಡರ್ಗಳನ್ನು ಬುಕ್ ಮಾಡ್ತಾರೆ ಎಂದು ಹಾವೇರಿ ಜಿಲ್ಲಾ ಶಿಗ್ಗಾವಿ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಯಾಸೀರ್ ಖಾನ್ ಪಠಾಣ್ ಆರೋಪಿಸಿದರು.
ಹಾವೇರಿ ಜಿಲ್ಲೆ ಸವಣೂರು ತಾಲೂಕು ಚಿಲ್ಲೂರಿನಲ್ಲಿಂದು ಮತಯಾಚನೆ ಬಳಿಕ ಮಾಧ್ಯಮದವರೊಂದಿಗೆ ಮಾತನಾಡುತ್ತಾ, ನಮಗೆ ಲೀಡರ್ಗಳನ್ನು ಬುಕ್ ಮಾಡಲು ಆಗಲ್ಲ. ಮತದಾರರನ್ನು ಖರೀದಿ ಮಾಡಲು ಆಗಲ್ಲ. ನಾವು ಬಡವರು. ನಮಗೆ ಬುಕ್ ಮಾಡಲು ಬರಲ್ಲ ಎಂದು ಹೇಳಿದರು.
ನಾನು ಪ್ರಚಾರ ಮಾಡಲ್ಲ. ಅವರೂ ಪ್ರಚಾರ ಮಾಡೋದು ಬೇಡ. ನವೆಂಬರ್ 13ನೇ ತಾರೀಖಿನವರೆಗೆ ಧರ್ಮಸ್ಥಳದಲ್ಲಿ ಕೂರೋಣ. ಅವಾಗ ಗೆದ್ದು ತೋರಿಸಲಿ ಎಂದು ಇದೇ ವೇಳೆ ಬೊಮ್ಮಾಯಿಗೆ ಸವಾಲು ಹಾಕಿದರು.
ಪ್ರತಿ ತಿಂಗಳು ಗೃಹಲಕ್ಷ್ಮಿ ದುಡ್ಡು ಬರ್ತಿದೆ. ಇವರು ಎಷ್ಟೇ ದುಡ್ಡು ಹರಿಸಿದರೂ ಸಕ್ಸೆಸ್ ಆಗಲ್ಲ. ಪ್ರಹ್ಲಾದ್ ಜೋಶಿ ಗೆದ್ದರೂ ಇಲ್ಲಿ ಸೋತಿದ್ದಾರೆ. ಬಿಜೆಪಿಯವರು ದುಡ್ಡಿನ ಹೊಳೆ ಹರಿಸಿದರೂ ನಾವೇ ಗೆಲ್ತೀವಿ. ನಮ್ಮದು ಸ್ಟ್ರಾಟಜಿ ಇಲ್ಲ, ಜನಸೇವೆ ಅಷ್ಟೇ. ಎಲ್ಲರೂ ಕೂಡಿ ಕೆಲಸ ಮಾಡುತ್ತಿದ್ದೇವೆ. ಸಿದ್ದರಾಮಯ್ಯ ವಿರುದ್ದ ಮುಡಾ ಹಗರಣದಲ್ಲಿ ನಡೆದ ಪಿತೂರಿ ಜನಾಂದೋಲನ ಆಗಿ ಬದಲಾಗಿದೆ. ಕ್ಷೇತ್ರದ ಜನ ಜನಾಂದೋಲನ ನಡೆಸಿದ್ದಾರೆ. ದುಡ್ಡಿನ ಸುರಿಮಳೆ ಒಂದೆಡೆ, ಸರ್ಕಾರದ ಯೋಜನೆಗಳು ಇನ್ನೊಂದು ಕಡೆ. ಹಾಗಾಗಿ ನಾವು ಗೆದ್ದೇ ಗೆಲ್ತೀವಿ ಎಂದರು.
ಬೊಮ್ಮಾಯಿ ತಿರುಗೇಟು: ಬಸವರಾಜ್ ಬೊಮ್ಮಾಯಿ ಹಣ ಹಂಚುತ್ತಿದ್ದಾರೆ ಎಂಬ ಯಾಸೀರ್ ಖಾನ್ ಆರೋಪಕ್ಕೆ ಸಂಸದ ಬಸವರಾಜ್ ಬೊಮ್ಮಾಯಿ ತಿರುಗೇಟು ನೀಡಿದ್ದಾರೆ. ಶಿಗ್ಗಾವಿಯ ನಿವಾಸದಲ್ಲಿ ಮಾತನಾಡಿದ ಅವರು, ಜನರಿಗೆ ಹಣ, ಹೆಂಡ ಹಂಚೋರು ಯಾರು ಅಂತ ಗೊತ್ತಿದೆ. ಈ ರೀತಿಯ ಆರೋಪ ಮಾಡುವ ಮೂಲಕ ಕಾಂಗ್ರೆಸ್ ಅಭ್ಯರ್ಥಿ ಸೋಲನ್ನು ಒಪ್ಪಿಕೊಳ್ಳುತ್ತಿದ್ದಾರೆ ಎಂದು ತಿಳಿಸಿದರು.
ಇದನ್ನೂ ಓದಿ: ಶಿಗ್ಗಾವಿಗೆ ಯಾರೇ ಪ್ರಚಾರಕ್ಕೆ ಬಂದ್ರೂ ಏನೂ ಮಾಡೋಕಾಗಲ್ಲ, ಇಲ್ಲಿನ ಜನ ಬುದ್ಧಿವಂತರು: ಭರತ್ ಬೊಮ್ಮಾಯಿ