ಬೆಂಗಳೂರು : ಜೆಡಿಎಸ್ ಅಂತಿಮ ದಿನಗಳನ್ನು ಎಣಿಸುತ್ತಿದೆ ಅಂತಾ ಹೇಳೋಕೆ ಬಯಸುತ್ತೇನೆ. ಒಕ್ಕಲಿಗರ ನಾಯಕತ್ವವನ್ನ ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ ಎಂದು ಕಾಂಗ್ರೆಸ್ ವಿಜೇತ ಅಭ್ಯರ್ಥಿ ಸಿ. ಪಿ ಯೋಗೇಶ್ವರ್ ತಿಳಿಸಿದ್ದಾರೆ.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಚನ್ನಪಟ್ಟಣ ಉಪಚುನಾವಣೆಯಲ್ಲಿ ಗೆಲುವು ನಿರೀಕ್ಷೆ ಮಾಡಿದ್ದೆ. ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳಿಗೆ 30 ಸಾವಿರ ಮತಗಳಿಂದ ಗೆಲ್ಲುತ್ತೇನೆ ಅಂತಾ ಮಾಹಿತಿ ಕೊಟ್ಟಿದ್ದೆ. ನನ್ನ ನಿರೀಕ್ಷೆಗೆ ಹತ್ತಿರವಾದ ಗೆಲುವು. ಜೆಡಿಎಸ್ ಅಸ್ತಿತ್ವದ ಚುನಾವಣೆ. ದೇವೇಗೌಡರು ಹೋರಾಟದಲ್ಲಿ ಸಾಮಾಜಿಕ ಕಳಕಳಿ ಇರಲಿಲ್ಲ. ಸ್ವಾರ್ಥ ಇತ್ತು, ಕುಟುಂಬದವರನ್ನು ಬೆಳೆಸೋ ಹೋರಾಟ ಎಂದರು.
ಇವತ್ತು ಹಳೆ ಮೈಸೂರು ಭಾಗದಲ್ಲಿ ಡಿಸಿಎಂ ಡಿ. ಕೆ ಶಿವಕುಮಾರ್ ನಾಯಕತ್ವ ನಮ್ಮ ಜನ ಒಪ್ಪಿಕೊಂಡಿದ್ದಾರೆ. ನಿಖಿಲ್ ಇನ್ನೂ ಯುವಕ, 36 ವರ್ಷದ ಯುವಕ 63 ವರ್ಷದವರ ಥರ ಮಾತಾಡ್ತಾನೆ. ಒಕ್ಕಲಿಗರ ನಾಯಕತ್ವವನ್ನು ದೇವೇಗೌಡರ ಕುಟುಂಬದಿಂದ ಜನ ಕಿತ್ತುಕೊಂಡಿದ್ದಾರೆ ಎಂದು ಹೇಳಿದರು.
ವಿಜಯೇಂದ್ರ, ಬಿಎಸ್ವೈ ಕುತಂತ್ರದಿಂದ ಎನ್ಡಿಎ ಬಿಟ್ಟೆ: ವಿಜಯೇಂದ್ರ ಅವರು ನನ್ನ ಬ್ಯಾಟರಿ ವೀಕ್ ಆಗಿದೆ ಅಂತಾ ಇದ್ರು. ಅವರಿಗೆ ಹೇಳುತ್ತೇನೆ ನಿಮ್ಮ ಬ್ಯಾಟರಿ ವೀಕ್ ಆದಾಗ ನಾನು ಚಾರ್ಜ್ ಮಾಡಿದ್ದು. ವಿಜಯೇಂದ್ರ, ಯಡಿಯೂರಪ್ಪ ಷಡ್ಯಂತ್ರದಿಂದ ನಾನು ಎನ್ಡಿಎ ಬಿಟ್ಟೆ ಎಂದು ಇದೇ ವೇಳೆ ವಾಗ್ದಾಳಿ ನಡೆಸಿದರು.
ಜಮೀರ್ ಅಹಮ್ಮದ್ ಹೇಳಿಕೆ ಏನು ಮುಖ್ಯ ಆಗಲ್ಲ. ಗೆಲುವಿನ ಕ್ರೆಡಿಟ್ ಕಾಂಗ್ರೆಸ್ಗೆ ಸಲ್ಲುತ್ತದೆ. ಅದರಲ್ಲೂ ಮುಖ್ಯಮಂತ್ರಿ ಹಾಗೂ ಉಪ ಮುಖ್ಯಮಂತ್ರಿಗಳಿಗೆ ಸಲ್ಲುತ್ತದೆ. ಡಿ ಕೆ ಸುರೇಶ್ ನನ್ನ ಜೊತೆ ಚುನಾವಣೆ ಪೂರ್ತಿ ನಿಂತುಕೊಂಡರು. ಹಾಗಾಗಿ ಇದೊಂದು ಸಂಘಟಿತವಾದ ಗೆಲುವು ಎಂದರು.
ಕುಮಾರಸ್ವಾಮಿಗೆ ಅಧಿಕಾರದ ದಾಹ : 100ಕ್ಕೆ 100 ಭಾಗ ಒಕ್ಕಲಿಗರ ಒಲವನ್ನು ದೇವೇಗೌಡರ ಕುಟುಂಬ ಕಳೆದುಕೊಳ್ಳುತ್ತಾ ಇದೆ. ಬರೀ ಸ್ವಾರ್ಥ, ಕುಟುಂಬ ಬೆಳೆಸೋಕೆ ಅಷ್ಟೇ. ಈಗೀಗ ಒಕ್ಕಲಿಗರ ಒಲವನ್ನು ದೇವೇಗೌಡ ಕುಟುಂಬ ಕಳೆದುಕೊಳ್ಳುತ್ತಾ ಇದೆ. ಅವತ್ತು ದೇವೇಗೌಡರು ದೈತ್ಯ ಶಕ್ತಿ ಅಂತಾ ಹೇಳಿದ್ದೆ. ಇವತ್ತು ಆ ದೈತ್ಯ ಶಕ್ತಿ ಕಡಿಮೆ ಆಗ್ತಿದೆ. ಕುಮಾರಸ್ವಾಮಿಗೆ ಅಧಿಕಾರದ ದಾಹ, ಯಾರನ್ನೂ ಸಹಿಸಲ್ಲ. ಅಪ್ಪನನ್ನು ಸಹಿಸಲ್ಲ, ಮಗನನ್ನು ಸಹಿಸಲ್ಲ. ಮಂಡ್ಯದಲ್ಲಿ ಕುಮಾರಸ್ವಾಮಿ, ನಿಖಿಲ್ನ ನಿಲ್ಲಿಸಿದ್ರೆ ಈ ಬಾರಿ ಗೆಲ್ಲುತ್ತಾ ಇದ್ದನೇನೋ. ರಾಜೀನಾಮೆ ಕೊಟ್ಟು ಮಂಡ್ಯಗೆ ಹೋಗೋ ಅವಶ್ಯಕತೆ ಏನಿತ್ತು? ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ : ಚನ್ನಪಟ್ಟಣದಲ್ಲಿ ಗೆಲುವಿನ ಪತಾಕೆ ಹಾರಿಸಿದ ಸೈನಿಕ; ರಾಜಕೀಯದ ಚಕ್ರವ್ಯೂಹದಲ್ಲಿ ಮತ್ತೆ ಸೋತ ಅಭಿಮನ್ಯು