ಬೆಂಗಳೂರು/ಕೋಲಾರ: ಕಾಂಗ್ರೆಸ್ ಗೆ ತೀವ್ರ ಕಗ್ಗಂಟಾಗಿ ಪರಿಣಮಿಸಿದ್ದ ಕೋಲಾರ ಲೋಕಸಭೆ ಕ್ಷೇತ್ರದಲ್ಲಿ ಹೈಕಮಾಂಡ್ ಮೂರನೇ ಅಭ್ಯರ್ಥಿಗೆ ಟಿಕೆಟ್ ನೀಡಿದೆ. ಕೋಲಾರದಲ್ಲಿ ಕಾಂಗ್ರೆಸ್ ಬಣ ರಾಜಕೀಯ ಹೈಕಮಾಂಡ್ ಗೆ ದೊಡ್ಡ ತಲೆನೋವಾಗಿತ್ತು. ಇದೀಗ ಬಣಗಳ ಹೊರಗಿನ ಮೂರನೇ ಅಭ್ಯರ್ಥಿ ಮಾಜಿ ಮೇಯರ್ ವಿಜಯಕುಮಾರ್ ಪುತ್ರ ಗೌತಮ್ ಗೆ ಟಿಕೆಟ್ ನೀಡಲಾಗಿದೆ. ಇವರು ಪರಿಶಿಷ್ಟ ಜಾತಿ ಎಡಗೈ ಸಮುದಾಯಕ್ಕೆ ಸೇರಿದವರಾಗಿದ್ದಾರೆ.
ಕೋಲಾರದಿಂದ ರಾಜ್ಯಸಭೆ ಮಾಜಿ ಸದಸ್ಯ ಡಾ. ಎಲ್. ಹನುಮಂತಯ್ಯ, ಆಹಾರ ಸಚಿವ ಕೆ. ಹೆಚ್. ಮುನಿಯಪ್ಪ ಅಳಿಯ ಚಿಕ್ಕಪೆದ್ದಣ್ಣ ನಡುವೆ ಟಿಕೆಟ್‌ಗಾಗಿ ಭಾರೀ ಪೈಪೋಟಿ ಏರ್ಪಟ್ಟಿತ್ತು. ಸಚಿವ ಕೆ.ಹೆಚ್. ಮುನಿಯಪ್ಪ ತಮ್ಮ ಅಳಿಯನಿಗೆ ಟಿಕೆಟ್ ಕೊಡಿಸಲು ಪಟ್ಟು ಹಿಡಿದಿದ್ದರು. ಹೈಕಮಾಂಡ್, ಸಿಎಂ ಸಿದ್ದರಾಮಯ್ಯ, ಡಿಕೆಶಿ ಮುಂದೆ ಪ್ರಬಲ ಲಾಬಿ ನಡೆಸಿದ್ದರು.
ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡುವ ಬಗ್ಗೆ ಮಾಜಿ ಸಚಿವ ರಮೇಶ್ ಕುಮಾರ್ ಬಣ ವಿರೋಧ ವ್ಯಕ್ತಪಡಿಸಿದ್ದರು. ಸಚಿವರ ಅಳಿಯನಿಗೆ ಟಿಕೆಟ್ ಬಹುತೇಕ ಫಿಕ್ಸ್ ಎಂಬ ಮಾಹಿತಿ ಬಂದ ಹಿನ್ನೆಲೆ ಕೋಲಾರ ಶಾಸಕರು ರಾಜೀನಾಮೆ ನೀಡುವ ಹಂತದವರೆಗೆ ಹೋಗಿ ಸಚಿವ ಮುನಿಯಪ್ಪ ಅಳಿಯನಿಗೆ ಟಿಕೆಟ್ ನೀಡದಂತೆ ಬಂಡಾಯ ಎದ್ದಿದ್ದರು. ಎರಡೂ ಕಡೆಯಿಂದ ನಾ ಕೊಡೆ ನಾ ಬಿಡೆ ಎಂಬಂತಾದ ಕಾರಣ ಕೊನೆಯದಾಗಿ ಮೂರನೇ ಅಭ್ಯರ್ಥಿಗೆ ಹೈಕಮಾಂಡ್ ಮಣೆ ಹಾಕಿದೆ.
ಕ್ಷೇತ್ರದ ಇಬ್ಬರು ಪ್ರಭಾವಿ ನಾಯಕರ ಬಣ ರಾಜಕೀಯದ ಪರಿಣಾಮ ಕಾಂಗ್ರೆಸ್ ಅಭ್ಯರ್ಥಿಗಳ ಮೇಲಾಗುವುದು ಬೇಡ ಎಂಬ ಉದ್ದೇಶದಿಂದ ಇದೀಗ ಯಾವುದೇ ಬಣದಿಂದ ಗುರುತಿಸಲ್ಪಡದ ಮೂರನೇ ವ್ಯಕ್ತಿಗೆ ಹೈಕಮಾಂಡ್ ಮಣೆ ಹಾಕಿದೆ. ಅಲ್ಲಿಗೆ ಕಾಂಗ್ರೆಸ್ ರಾಜ್ಯದ ಎಲ್ಲಾ 28 ಕ್ಷೇತ್ರಗಳಿಗೆ ತನ್ನ ಅಭ್ಯರ್ಥಿಗಳನ್ನು ಘೋಷಿಸಿದೆ.
ಗುಂಪು ರಾಜಕಾರಣ ಇಲ್ಲ, ಯಾರೇ ಆದರೂ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ: ''ಗುಂಪು ರಾಜಕಾರಣ ನಮ್ಮಲ್ಲಿ ಇಲ್ಲ. ಯಾರೇ ಆದರೂ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ'' ಎಂದು ಕೋಲಾರ ಬಣಗಳಿಗೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಪಷ್ಟ ಸಂದೇಶ ರವಾನಿಸಿದ್ದಾರೆ.
ಕೋಲಾರ ಅಭ್ಯರ್ಥಿ ಘೋಷಣೆ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ''ಕೆ.ಹೆಚ್. ಮುನಿಯಪ್ಪ, ರಮೇಶ್ ಕುಮಾರ್ ಜೊತೆ ಮಾತನಾಡಿದ್ದೇನೆ. ಅವರವರ ಅಭಿಪ್ರಾಯಯನ್ನು ಹೇಳಿದ್ದಾರೆ. ಎರಡೂ ಬಣಗಳಿಗೂ ಟಿಕೆಟ್ ಕೊಟ್ಟಿಲ್ಲ. ಗುಂಪು ರಾಜಕಾರಣ ನಮ್ಮಲ್ಲಿ ಇಲ್ಲ. ಯಾರೇ ಆದರೂ ಲಕ್ಷ್ಮಣ ರೇಖೆ ದಾಟಲು ಸಾಧ್ಯವಿಲ್ಲ. ಸೀಟು ಗೆಲ್ಲೋದು ಬಿಡೋದು ನಂತರದ್ದು. ಪಕ್ಷದಲ್ಲಿ ಶಿಸ್ತು ಬಹಳ ಮುಖ್ಯ. ಅಂತಿಮವಾಗಿ ಯಾರೇ ಶಿಸ್ತು ಉಲ್ಲಂಘಿಸಿದರೂ ಕ್ರಮ ಕೈಗೊಳ್ತೇವೆ. ಶಿಸ್ತು ಉಲ್ಲಂಘನೆ ಮಾಡಿದವರೆಲ್ಲ ಈಗಾಗಲೇ ಕ್ಷಮೆ ಕೇಳಿದ್ದಾರೆ'' ಎಂದು ತಿಳಿಸಿದರು.
''ಶಾಸಕರು, ಸಚಿವರು ಯಾರೇ ಆದರೂ ಎಲ್ಲರೂ ಪಕ್ಷದ ತೀರ್ಮಾನಕ್ಕೆ ಬದ್ಧರಾಗಿರಬೇಕು. ಎಲ್ಲರೂ ಅಭ್ಯರ್ಥಿಯನ್ನು ಗೆಲ್ಲಿಸಿಕೊಂಡು ಬರುವುದಾಗಿ ಹೇಳಿದ್ದಾರೆ. ಗೌತಮ್ ಪಕ್ಷದ ಸಾಮಾನ್ಯ ಕಾರ್ಯಕರ್ತ. ಮಾಜಿ ಮೇಯರ್ ಪುತ್ರ. ಹೊಸ ಮುಖ ಗೌತಮ್ಗೆ ಅವಕಾಶ ನೀಡಿದ್ದೇವೆ. ಯಾವ ಒಳ ಏಟು ಇಲ್ಲದೇ ಕಾಂಗ್ರೆಸ್ ಪಕ್ಷಕ್ಕೆ ಕೆಲಸ ಮಾಡುತ್ತಾರೆ. ದಲಿತ ಬಲ ಸಮುದಾಯಕ್ಕೆ ಟಿಕೆಟ್ ನೀಡುವಂತೆ ಕೇಳಿದ್ದರು. ಸುಮಾರು ಕ್ಷೇತ್ರದಲ್ಲಿ ಎಡ ದಲಿತ ಸಮುದಾಯ ಹೆಚ್ಚಾಗಿದೆ. ಬಿಜೆಪಿ ಎರಡು ಸೀಟ್ ಕೊಟ್ಟಿದೆ. ಹಾಗಾಗಿ ನಾವೂ ಕೂಡ ಎರಡು ಸೀಟು ಕೊಟ್ಟಿದ್ದೇವೆ'' ಎಂದು ಡಿಕೆಶಿ ತಿಳಿಸಿದರು.
ಇದನ್ನೂ ಓದಿ: ಕೋಲಾರ ಕಾಂಗ್ರೆಸ್ ಅಭ್ಯರ್ಥಿಯಾಗಿ ಮೂರನೇ ವ್ಯಕ್ತಿ ಹೆಸರು ಮುನ್ನೆಲೆಗೆ - Kolar Congress Ticket