ಬೆಂಗಳೂರು : ಜೈನಮುನಿಗಳಾದ ಆಚಾರ್ಯ 108 ವಿದ್ಯಾಸಾಗರ ಮಹಾರಾಜರ ನಿಧನಕ್ಕೆ ವಿಧಾನಸಭೆಯಲ್ಲಿ ಇಂದು ಸಂತಾಪ ಸೂಚಿಸಲಾಯಿತು. ಬೆಳಗ್ಗೆ ಸದನ ಆರಂಭವಾಗುತ್ತಿದ್ದಂತೆ ಸ್ಪೀಕರ್ ಯು.ಟಿ. ಖಾದರ್ ಅವರು, ಸಂತಾಪ ಸೂಚನಾ ನಿರ್ಣಯ ಮಂಡಿಸಿ, ವಿದ್ಯಾಸಾಗರ ಮಹಾರಾಜರು ನಿಧನರಾಗಿರುವುದನ್ನು ಅತ್ಯಂತ ವಿಷಾದದಿಂದ ಸದನಕ್ಕೆ ತಿಳಿಸಿದರು.
ವಿದ್ಯಾಸಾಗರ ಮಹಾರಾಜರು 1946ರ ಅಕ್ಟೋಬರ್ 10ರಂದು ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗದಲ್ಲಿ ಜನಿಸಿದರು. ದಿಗಂಬರ ಜೈನ ಪಂಥದವರಾಗಿದ್ದ ಮುನಿಗಳು ತಮ್ಮ 22ನೇ ವಯಸ್ಸಿನಲ್ಲಿ ಆಚಾರ್ಯ ಜ್ಞಾನಸಾಗರ ಮುನಿಮಹಾರಾಜರಿಂದ ಮುನಿದೀಕ್ಷೆ ಪಡೆದು ನಂತರ ಆಚಾರ್ಯ ಪದವಿ ಪಡೆದಿದ್ದ ವಿದ್ಯಾಸಾಗರ ಮಹಾರಾಜರು ಸಂಸ್ಕೃತ, ಪ್ರಾಕೃತ ಭಾಷೆಗಳು ಸೇರಿದಂತೆ ಹಲವು ಕೃತಿಗಳನ್ನು ರಚಿಸಿದ್ದಾರೆ. ಅದರಲ್ಲಿ ನಿರಂಜನ ಶತಕ, ಭಾವನ ಶತಕ, ಶ್ರಮನ ಶತಕ ಪ್ರಮುಖವಾಗಿವೆ. ಅಲ್ಲದೆ, ಕನ್ನಡ, ಹಿಂದಿ ಹಾಗೂ ಮರಾಠಿ ಸೇರಿದಂತೆ 8 ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದ ಅವರು, ಹಿಂದಿಯಲ್ಲಿ ರಚಿಸಿದ ಮೂಖಮಾಠಿ ಎಂಬ ಮಹಾಕಾವ್ಯವು ಪ್ರಸಿದ್ಧಿಯಾಗಿದೆ ಎಂದು ಹೇಳಿದರು.
ಜೈನಮುನಿಗಳಾಗಿ ವಿದ್ಯಾಸಾಗರ ಮಹಾರಾಜರು 120 ಜನರಿಗೆ ಮುನಿದೀಕ್ಷೆ ಹಾಗೂ ಹಲವರಿಗೆ ಬ್ರಹ್ಮಚರ್ಯ ದೀಕ್ಷೆಗಳನ್ನು ನೀಡಿದ್ದಾರೆ. ದೇಶದಲ್ಲಿಯೇ ಅತಿದೊಡ್ಡ ಗೋಶಾಲೆಯನ್ನು ನಿರ್ಮಿಸಿದ್ದು, ಬಡ ನಿರ್ಗತಿಕ ಮಕ್ಕಳಿಗೆ ಪದವಿಯವರೆಗೆ ಉಚಿತ ಶಿಕ್ಷಣವನ್ನು ನೀಡಿದ್ದಾರೆ. ತಮ್ಮ ಜೀವನದುದ್ದಕ್ಕೂ ಜೈನ ಧರ್ಮದ ತತ್ವಗಳನ್ನು ಪಾಲಿಸಿ, ಬೋಧಿಸುತ್ತ ಕವಿ, ಯೋಗಿ, ಸಾಧಕ-ಚಿಂತಕ ಹಾಗೂ ದಾರ್ಶನಿಕ ರೂಪದಲ್ಲಿ ಕಾಣಿಸಿಕೊಂಡಿದ್ದ ಮೇರು ಸಂತ ಆಚಾರ್ಯರು ಛತ್ತೀಸ್‍ಗಡ ರಾಜ್ಯದ ಡೋಂಗರಗಡದಲ್ಲಿರುವ ಚಂದ್ರಗಿರಿ ತೀರ್ಥದಲ್ಲಿ ಸಲ್ಲೇಖನ ವ್ರತ ಕೈಗೊಂಡು, ನಿನ್ನೆ ನಸುಕಿನಜಾವ ಇಹಲೋಕವನ್ನು ತ್ಯಜಿಸಿದ್ದಾರೆ ಎಂದು ವಿಷಾದಿಸಿದರು.
ಸಭಾಧ್ಯಕ್ಷರು ಮಂಡಿಸಿದ ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದ ಕಂದಾಯ ಸಚಿವ ಕೃಷ್ಣಭೈರೇಗೌಡ ಅವರು, ವಿದ್ಯಾಸಾಗರ ಮಹಾರಾಜರು ಸಲ್ಲೇಖನ ವ್ರತ ಆಚರಣೆ ಮೂಲಕ ದೇಹತ್ಯಾಗ ಮಾಡಿದ್ದಾರೆ. ಲೌಖಿಕ ಜೀವನವನ್ನು ತ್ಯಾಗ ಮಾಡಿ ಮೇಲ್ಮಟ್ಟದ ಜೀವನ ನಡೆಸಿ ನಮ್ಮೆಲ್ಲರಿಗೂ ದಾರಿ ತೋರಿಸಿದ್ದಾರೆ. ನಾವೆಲ್ಲ ಆಸೆ, ಆಕಾಂಕ್ಷೆಗಳ ಜಂಜಾಟದ ಬದುಕಿನಲ್ಲಿ ಸಿಲುಕುತ್ತೇವೆ. ಅವುಗಳ ಹೊರತಾಗಿಯೂ ಜೀವನ ನಡೆಸಬಹುದು ಎಂದು ಅವರು ತೋರಿಸಿದ್ದಾರೆ. ಅವರ ಆಲೋಚನೆಗಳು ಅಮರವಾಗಿ ನಮ್ಮೊಂದಿಗೆ ಉಳಿಯಲಿದೆ ಎಂದು ಸ್ಮರಿಸಿದರು.
ಪ್ರತಿಪಕ್ಷ ನಾಯಕ ಆರ್.ಅಶೋಕ್ ಮಾತನಾಡಿ, ವಿದ್ಯಾಸಾಗರ ಮಹಾರಾಜರ ಇಡೀ ಕುಟುಂಬ ಜೈನ ಪರಂಪರೆಗೆ ಸೇರಿದವರು. ನಮ್ಮ ದೇಶದಲ್ಲಿ ಋಷಿಮುನಿಗಳ ಪರಂಪರೆ ಇದೆ. ಧರ್ಮ, ಸಂಸ್ಕೃತಿ ಉಳಿಸಲು ಅವರು ಮಾಡಿರುವ ಕಾರ್ಯ ಸ್ಮರಣೀಯ ಎಂದರು.
ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಮಾತನಾಡಿ, ಜೈನ ಧರ್ಮೀಯರು ಸಣ್ಣ ವಯಸ್ಸಿನಲ್ಲಿಯೇ ದೀಕ್ಷೆ ಪಡೆಯುತ್ತಾರೆ. ಐಷಾರಾಮಿ ಜೀವನವನ್ನು ತ್ಯಜಿಸಿ ಧರ್ಮದ ಹಾದಿಯಲ್ಲಿ ನಡೆಯುತ್ತಾರೆ. ಗೋವಿನ ರಕ್ಷಣೆ ಪವಿತ್ರವೆಂದು ಭಾವಿಸಿದ್ದಾರೆ. ನಂದಗಾವ್‍ನಲ್ಲಿ 3 ಸಾವಿರ ಎಕರೆಯಲ್ಲಿ ಒಂದೂವರೆ ಲಕ್ಷ ಗೋವುಗಳನ್ನು ಸಂರಕ್ಷಣೆ ಮಾಡಲಾಗಿದೆ. ದೇಶ ಹಾಗೂ ಸಮಾಜಕ್ಕೆ ಅವರು ಮಾಡಿದ ಸೇವೆ ಉತ್ತಮವಾದುದು ಎಂದು ಗುಣಗಾನ ಮಾಡಿದರು.
ಶಾಸಕ ಚನ್ನಬಸಪ್ಪ ಅವರು ಸಂತಾಪ ಸೂಚನಾ ನಿರ್ಣಯವನ್ನು ಬೆಂಬಲಿಸಿ ಮಾತನಾಡಿದರು. ಬಳಿಕ ಸದನದ ಸದಸ್ಯರೆಲ್ಲರೂ ಎದ್ದು ನಿಂತು ಒಂದು ನಿಮಿಷ ಮೌನಾಚರಣೆ ಮಾಡುವ ಮೂಲಕ ಸಂತಾಪ ಸೂಚಿಸಿದರು.
ಇದನ್ನೂ ಓದಿ: ಪ್ರಶ್ನೆ ಕೇಳಲು ವಿಳಂಬ ಮಾಡಿದ ಕಾಂಗ್ರೆಸ್ ಶಾಸಕರು: ಗಾಡ್ ಫಾದರ್ಗಳ ಬಗ್ಗೆ ಸದನದಲ್ಲಿ ಚರ್ಚೆ
ಆರಗ ಜ್ಞಾನೇಂದ್ರ ಹಾಸ್ಯಚಟಾಕಿ: ''ಇಂದಿನಿಂದ ಶಾಸಕರಿಗೆ ಬೆಳಗಿನ ಲಘು ಉಪಹಾರದ ಜೊತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗುವುದು'' ಎಂದು ಸ್ಪೀಕರ್ ಯು.ಟಿ.ಖಾದರ್ ವಿಧಾನಸಭೆಯಲ್ಲಿ ತಿಳಿಸಿದರು. ''ಶಾಸಕರಿಗೆ ಸಸ್ಯಹಾರ, ಊಟದ ವ್ಯವಸ್ಥೆ ಮಾಡಲಾಗಿದೆ. ಮಧ್ಯಾಹ್ನದ ಊಟಕ್ಕಾಗಿ ಹೊರಗೆ ಹೋಗುವ ಅವಶ್ಯಕತೆ ಇಲ್ಲ. ಊಟಕ್ಕಾಗಿ ಹೊರಗೆ ಹೋಗುವುದರಿಂದ ಬಹಳಷ್ಟು ಸಮಯ ವ್ಯಯವಾಗಲಿದೆ. ಹಾಗಾಗಿ, ಇಲ್ಲೇ ಊಟದ ವ್ಯವಸ್ಥೆ ಇರಲಿದೆ'' ಎಂದರು.
ಆಗ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆಯವರು, ''ಇಲ್ಲೇ ಹಾಸ್ಟೆಲ್ ಮಾಡಿಸಿ, ಒಳಗೆ ಬಂದವರು, ಹೊರಗೆ ಹೋಗಬಾರದು ಒನ್ ವೇ ಆಗಿರಲಿ'' ಎಂದರು. ಇದಕ್ಕೆ ಬೆಂಬಲವೆಂಬಂತೆ ಬಿಜೆಪಿ ಹಿರಿಯ ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ''ತಿಂಡಿ, ಊಟ ಕೊಡುತ್ತೀರಿ, ಜೊತೆಗೆ ಹಾಸಿಗೆ, ದಿಂಬು ಕೊಟ್ಟರೆ ಒಳ್ಳೆಯದು. ಊಟ ಕೊಟ್ಟ ಮೇಲೆ ಮಲಗುವ ವ್ಯವಸ್ಥೆಯನ್ನೂ ಮಾಡಿ'' ಎಂದು ಹಾಸ್ಯಚಟಾಕಿ ಹಾರಿಸಿದರು.