ಬೆಳಗಾವಿ: ಬೆಳಗಾವಿ ಹತ್ತು ಹಲವು ವಿಶೇಷತೆಗಳನ್ನು ಹೊಂದಿರುವ ಲೋಕಸಭಾ ಕ್ಷೇತ್ರ. ರಾಜ್ಯ ರಾಜಕೀಯದ ಮೇಲೆ ಪರಿಣಾಮ ಬೀರುವ ಘಟಾನುಘಟಿ ನಾಯಕರ ತವರೂರು ಕೂಡಾ ಹೌದು. ರಾಜ್ಯದಲ್ಲಿ ಒಂದು ಸರ್ಕಾರವನ್ನು ಕೈಬಿಡುವ, ಮತ್ತೊಂದು ಸರ್ಕಾರವನ್ನು ತಂದು ಕೂರಿಸುವ ತಾಕತ್ತು ಈ ಕ್ಷೇತ್ರಕ್ಕಿದೆ. ಮೊದಲು ಕಾಂಗ್ರೆಸ್ ಭದ್ರಕೋಟೆಯಾಗಿದ್ದ ಬೆಳಗಾವಿ, ಕಳೆದ ಐದು ಚುನಾವಣೆಗಳಲ್ಲಿ ಬಿಜೆಪಿ ವಶದಲ್ಲಿದೆ. 14 ಬಾರಿ ಲಿಂಗಾಯತ ನಾಯಕರು ಗೆಲುವು ಸಾಧಿಸಿದ್ದಾರೆ.
![ಉಭಯ ಪಕ್ಷಗಳ ಅಭ್ಯರ್ಥಿಗಳು](https://etvbharatimages.akamaized.net/etvbharat/prod-images/12-04-2024/21207586_bng.jpg)
ಬೆಳಗಾವಿ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 8 ವಿಧಾನಸಭೆ ಕ್ಷೇತ್ರಗಳಿವೆ. ಅವುಗಳೆಂದರೆ ಬೆಳಗಾವಿ ಉತ್ತರ, ಬೆಳಗಾವಿ ಗ್ರಾಮೀಣ, ಬೆಳಗಾವಿ ದಕ್ಷಿಣ, ಅರಭಾವಿ, ಗೋಕಾಕ, ಸವದತ್ತಿ, ರಾಮದುರ್ಗ ಮತ್ತು ಬೈಲಹೊಂಗಲ. ಈ ಪೈಕಿ ಸದ್ಯ 5 ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದರೆ, ಮೂರು ಕ್ಷೇತ್ರಗಳಲ್ಲಿ ಬಿಜೆಪಿಯವರಿದ್ದಾರೆ. 1957ರಿಂದ ಇದುವರೆಗೆ ಎರಡು ಉಪಚುನಾವಣೆಗಳು ನಡೆದಿವೆ. 18 ಸಾರ್ವತ್ರಿಕ ಚುನಾವಣೆಗಳನ್ನು ಕ್ಷೇತ್ರ ಕಂಡಿದೆ.
1957ರಿಂದ 2019ರವರೆಗೆ ಕಾಂಗ್ರೆಸ್ 11 ಬಾರಿ, ಜನತಾದಳ ಒಮ್ಮೆ ಹಾಗೂ ಬಿಜೆಪಿ 6 ಬಾರಿ ಜಯ ಗಳಿಸಿವೆ. ಕಾಂಗ್ರೆಸ್ ಪಕ್ಷದ 11 ಗೆಲುವಿನಲ್ಲಿ ಜಗಜೀವನ ರಾಂ ಗುಂಪಿನ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದಿಂದ 1971ರಲ್ಲಿ ಸ್ಪರ್ಧಿಸಿದ್ದ ಎ.ಕೆ.ಕೊಟ್ರಶೆಟ್ಟಿ ಗೆಲುವು ಸಾಧಿಸಿದ್ದರು. 1980ರಿಂದ 1991ರವರೆಗೆ ಸತತ 4 ಬಾರಿ ಕಾಂಗ್ರೆಸ್‌ನಿಂದ ಎಸ್.ಬಿ.ಸಿದ್ನಾಳ ಗೆದ್ದಿದ್ದರು. ಕಾಂಗ್ರೆಸ್ ಭದ್ರಕೋಟೆಯಲ್ಲಿ 2004ರಿಂದ ಸತತವಾಗಿ ನಾಲ್ಕು ಬಾರಿ ಗೆಲ್ಲುವ ಮೂಲಕ ಸುರೇಶ ಅಂಗಡಿ ಅವರು ಸಿದ್ನಾಳ ಅವರ ದಾಖಲೆ ಸರಿಗಟ್ಟಿದ್ದರು. ಸುರೇಶ ಅಂಗಡಿ ಅಕಾಲಿಕ ಸಾವಿನ ಬಳಿಕ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ಮಂಗಲಾ ಅಂಗಡಿ ಗೆದ್ದು, ಕ್ಷೇತ್ರದಲ್ಲಿ ಬಿಜೆಪಿ ತನ್ನ ಪಾರುಪತ್ಯ ಮುಂದುವರಿಸಿತು. ಕ್ಷೇತ್ರದಲ್ಲಿ ಲಿಂಗಾಯತರ ಪ್ರಾಬಲ್ಯವಿದ್ದರೂ ಎರಡು ಬಾರಿ ಬ್ರಾಹ್ಮಣ ಸಮುದಾಯದ ಬಿ.ಎನ್.ದಾತಾರ್, ಒಮ್ಮೆ ಕುರುಬ ಸಮುದಾಯದ ಅಮರಸಿಂಹ ಪಾಟೀಲ, ಒಮ್ಮೆ ಮುಸ್ಲಿಂ ಸಮುದಾಯದ ಎನ್.ಎಂ.ನಬೀಸಾಬ ಲೋಕಸಭೆಗೆ ಆಯ್ಕೆಯಾಗಿದ್ದರು. ಒಟ್ಟು 18 ಚುನಾವಣೆಗಳಲ್ಲಿ 14 ಬಾರಿ ಲಿಂಗಾಯತ ಸಮುದಾಯದ ಅಭ್ಯರ್ಥಿಗಳೇ ಗೆದ್ದು ಬಂದಿದ್ದಾರೆ.
ಜಾತಿ ಲೆಕ್ಕಾಚಾರ: ಲಿಂಗಾಯತ ಮತದಾರರು 5.5 ಲಕ್ಷ, ಎಸ್ಸಿ-ಎಸ್ಟಿ 2.83 ಲಕ್ಷ, ಮರಾಠಾ 2.50 ಲಕ್ಷ, ಮುಸ್ಲಿಂ 3 ಲಕ್ಷ, ಕುರುಬ 2 ಲಕ್ಷ, ಜೈನ 50 ಸಾವಿರ, ಉಪ್ಪಾರ 80 ಸಾವಿರ, ಬ್ರಾಹ್ಮಣ 60 ಸಾವಿರ, ಲಂಬಾಣಿ 45 ಸಾವಿರ, ಹಣಬರ 20 ಸಾವಿರ ಮತದಾರರು ಇದ್ದಾರೆ.
ಸಮುದಾಯ | ಮತದಾರರು |
---|---|
ಲಿಂಗಾಯತ | 5.5 ಲಕ್ಷ |
ಎಸ್ಸಿ-ಎಸ್ಟಿ | 2.83 ಲಕ್ಷ |
ಮರಾಠಾ | 2.50 ಲಕ್ಷ |
ಮುಸ್ಲಿಂ | 3 ಲಕ್ಷ |
ಕುರುಬ | 2 ಲಕ್ಷ |
ಜೈನ | 50 ಸಾವಿರ |
ಉಪ್ಪಾರ | 80 ಸಾವಿರ |
ಬ್ರಾಹ್ಮಣ | 60 ಸಾವಿರ |
ಲಂಬಾಣಿ | 45 ಸಾವಿರ |
ಹಣಬರ | 20 ಸಾವಿರ |
ಈವರೆಗೆ ಗೆದ್ದ ಸಂಸದರ ಪಟ್ಟಿ: 1957 ಹಾಗೂ 1962ರಲ್ಲಿ ನಡೆದ ಎರಡೂ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಬಿ.ಎನ್.ದಾತಾರ್ ಗೆದ್ದರೆ, 1963ರಲ್ಲಿ ನಡೆದ ಚುನಾವಣೆಯಲ್ಲಿ ಹೆಚ್.ವಿ.ಕೌಜಲಗಿ ಕಾಂಗ್ರೆಸ್‌ನಿಂದ, 1967ರಲ್ಲಿ ಎನ್.ಎಂ.ನಬೀಸಾಬ್ ಕಾಂಗ್ರೆಸ್‌ನಿಂದ, 1971ರಲ್ಲಿ ಎ.ಕೆ.ಕೊಟ್ರಶೆಟ್ಟಿ ಎನ್.ಸಿ.ಜಿ.(ಜಗಜೀವನ್ ರಾಮ್ ಗುಂಪು) ಪಕ್ಷದಿಂದ, 1977ರಲ್ಲಿ ಎ.ಕೆ.ಕೊಟ್ರಶೆಟ್ಟಿ ಕಾಂಗ್ರೆಸ್‌ನಿಂದ, 1980, 1984, 1989 ಮತ್ತು 1991ರಲ್ಲಿ ನಡೆದ ನಾಲ್ಕೂ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಎಸ್.ಬಿ. ಸಿದ್ನಾಳ ಆಯ್ಕೆ ಆಗಿದ್ದಾರೆ.
![ಬೆಳಗಾವಿ](https://etvbharatimages.akamaized.net/etvbharat/prod-images/12-04-2024/bgm-belagavi-lokasabha-report_28032024113205_2803f_1711605725_392.jpg)
1996ರಲ್ಲಿ ಶಿವಾನಂದ ಕೌಜಲಗಿ ಜನತಾದಳದಿಂದ, 1998ರಲ್ಲಿ ಬಾಬಾಗೌಡ ಪಾಟೀಲ ಬಿಜೆಪಿಯಿಂದ, 1999ರಲ್ಲಿ ಅಮರಸಿಂಹ ಪಾಟೀಲ ಕಾಂಗ್ರೆಸ್‌ನಿಂದ, 2004, 2009, 2014 ಮತ್ತು 2019ರಲ್ಲಿ ನಡೆದ ಈ ನಾಲ್ಕೂ ಚುನಾವಣೆಯಲ್ಲಿ ಬಿಜೆಪಿಯಿಂದ ಸುರೇಶ ಅಂಗಡಿ ಗೆದ್ದರೆ, 2021ರಲ್ಲಿ ನಡೆದ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಅವರ ಪತ್ನಿ ಮಂಗಲ ಆಯ್ಕೆ ಆಗಿದ್ದರು.
ಕ್ರ.ಸ | ವರ್ಷ | ಅಭ್ಯರ್ಥಿಗಳ ಹೆಸರು | ಪಕ್ಷ |
---|---|---|---|
1 | 1957 | ಬಿ.ಎನ್.ದಾತಾರ್ | ಕಾಂಗ್ರೆಸ್ |
2 | 1962 | ಬಿ.ಎನ್.ದಾತಾರ್ | ಕಾಂಗ್ರೆಸ್ |
3 | 1963 | ಹೆಚ್.ವ್ಹಿ.ಕೌಜಲಗಿ | ಕಾಂಗ್ರೆಸ್ |
4 | 1967 | ಎನ್.ಎಂ.ನಬೀಸಾಬ್ | ಕಾಂಗ್ರೆಸ್ |
5 | 1971 | ಎ.ಕೆ.ಕೊಟ್ರಶೆಟ್ಟಿ | ಎನ್.ಸಿ.ಜಿ |
6 | 1977 | ಎ.ಕೆ.ಕೊಟ್ರಶೆಟ್ಟಿ | ಕಾಂಗ್ರೆಸ್ |
7 | 1980 | ಎಸ್.ಬಿ. ಸಿದ್ನಾಳ | ಕಾಂಗ್ರೆಸ್ |
8 | 1984 | ಎಸ್.ಬಿ. ಸಿದ್ನಾಳ | ಕಾಂಗ್ರೆಸ್ |
9 | 1989 | ಎಸ್.ಬಿ. ಸಿದ್ನಾಳ | ಕಾಂಗ್ರೆಸ್ |
10 | 1991 | ಎಸ್.ಬಿ. ಸಿದ್ನಾಳ | ಕಾಂಗ್ರೆಸ್ |
11 | 1996 | ಶಿವಾನಂದ ಕೌಜಲಗಿ | ಜನತಾದಳ |
12 | 1998 | ಬಾಬಾಗೌಡ ಪಾಟೀಲ | ಬಿಜೆಪಿ |
13 | 1999 | ಅಮರಸಿಂಹ ಪಾಟೀಲ | ಕಾಂಗ್ರೆಸ್ |
14 | 2004 | ಸುರೇಶ ಅಂಗಡಿ | ಬಿಜೆಪಿ |
15 | 2009 | ಸುರೇಶ ಅಂಗಡಿ | ಬಿಜೆಪಿ |
16 | 2014 | ಸುರೇಶ ಅಂಗಡಿ | ಬಿಜೆಪಿ |
17 | 2019 | ಸುರೇಶ ಅಂಗಡಿ | ಬಿಜೆಪಿ |
18 | 2021 | ಮಂಗಲ ಸುರೇಶ ಅಂಗಡಿ | ಬಿಜೆಪಿ |
ಹಿಂದಿನ 5 ಚುನಾವಣೆಗಳ ವಿವರ:
2004ರ ಚುನಾವಣೆ: ಬಿಜೆಪಿಯಿಂದ ಸ್ಪರ್ಧಿಸಿದ್ದ ಸುರೇಶ ಅಂಗಡಿ 4,10,843 ಮತಗಳನ್ನು ಪಡೆದು ಮೊದಲ ಬಾರಿ ಸಂಸದರಾದರು. ಕಾಂಗ್ರೆಸ್ ಅಭ್ಯರ್ಥಿ ಅಮರಸಿಂಹ ಪಾಟೀಲ 3,26,090 ಮತಗಳನ್ನು ಪಡೆದು ಎರಡನೇ ಸ್ಥಾನ ಪಡೆದರೆ, ಜೆಡಿಎಸ್ನಿಂದ ಕಣಕ್ಕಿಳಿದಿದ್ದ ಜಮೀಲ್ ಅಹ್ಮದ್ ಕಾಸಿಂಸಾಹೇಬ ರೇಝಾ 66,831 ಮತಗಳನ್ನು ಪಡೆದು ಮೂಲರನೇ ಸ್ಥಾನಕ್ಕೆ ಕುಸಿದಿದ್ದರು. 84,753 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಕಂಡಿದ್ದರು.
ಪಕ್ಷ | ಅಭ್ಯರ್ಥಿಗಳು | ಪಡೆದ ಮತಗಳು |
---|---|---|
ಬಿಜೆಪಿ | ಸುರೇಶ ಅಂಗಡಿ | 4,10,843 |
ಕಾಂಗ್ರೆಸ್ | ಅಮರಸಿಂಹ ಪಾಟೀಲ್ | 3,26,090 |
ಜೆಡಿಎಸ್ | ಜಮೀಲ್ ಅಹ್ಮದ್ ರೇಝಾ | 66,831 |
ಗೆಲುವಿನ ಅಂತರ | 84,753 |
2009ರ ಚುನಾವಣೆ: ಬಿಜೆಪಿಯಿಂದ ಮತ್ತೆ ಕಣಕ್ಕಿಳಿದಿದ್ದ ಸುರೇಶ ಅಂಗಡಿ ಅವರು 3,84,324 ಮತಗಳನ್ನು ಪಡೆದು ಎರಡನೇ ಬಾರಿ ಸಂಸತ್ಗೆ ಆಯ್ಕೆ ಆದರು. ಕಾಂಗ್ರೆಸ್‌ನಿಂದ ಮತ್ತೆ ಸ್ಪರ್ಧಿಸಿದ್ದ ಅಮರಸಿಂಹ ಪಾಟೀಲ 2,65,637 ಮತಗಳನ್ನು ಪಡೆದು ಮತ್ತೆ ಸೋಲು ಕಂಡರು. 68,594 ಮತಗಳನ್ನು ಪಡೆದ ಜೆಡಿಎಸ್ ಅಭ್ಯರ್ಥಿ ಎ.ಬಿ.ಪಾಟೀಲ ಸ್ಥಾನ ಮೂರಕ್ಕೆ ಕುಸಿದಿದ್ದರು. ಸುರೇಶ ಅಂಗಡಿ 1,18,687 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.
ಪಕ್ಷ | ಅಭ್ಯರ್ಥಿಗಳು | ಪಡೆದ ಮತಗಳು |
---|---|---|
ಬಿಜೆಪಿ | ಸುರೇಶ ಅಂಗಡಿ | 3,84,324 |
ಕಾಂಗ್ರೆಸ್ | ಅಮರಸಿಂಹ ಪಾಟೀಲ | 2,65,637 |
ಜೆಡಿಎಸ್ | ಎ.ಬಿ.ಪಾಟೀಲ | 68,594 |
ಗೆಲುವಿನ ಅಂತರ | 1,18,687 |
2014ರ ಚುನಾವಣೆ: ಬಿಜೆಪಿಯಿಂದ ಮೂರನೇ ಬಾರಿಗೆ ಸ್ಪರ್ಧಿಸಿದ್ದ ಸುರೇಶ ಅಂಗಡಿ ಅವರು 5,54,417 ಮತಗಳನ್ನು ಪಡೆದು ಮತ್ತೆ ಸಂಸತ್ ಪ್ರವೇಶ ಮಾಡಿದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಲಕ್ಷ್ಮೀ ಹೆಬ್ಬಾಳ್ಕರ್ 4,78,557 ಮತಗಳನ್ನು ಪಡೆದರೆ, ಆಮ್ ಆದ್ಮಿ ಪಕ್ಷದಿಂದ ಸ್ಪರ್ಧೆ ಮಾಡಿದ್ದ ಮುತ್ತಪ್ಪ ಅಂಗಡಿ 8,524 ಮತ ಪಡೆದು ಸೋಲು ಕಂಡಿದ್ದರು. ಸುರೇಶ ಅಂಗಡಿ ಅವರು 75,860 ಮತಗಳ ಅಂತರದಿಂದ ಗೆಲುವಿನ ನಗೆ ಬೀರಿದ್ದರು.
ಪಕ್ಷ | ಅಭ್ಯರ್ಥಿಗಳು | ಪಡೆದ ಮತಗಳು |
---|---|---|
ಬಿಜೆಪಿ | ಸುರೇಶ ಅಂಗಡಿ | 5,54,417 |
ಕಾಂಗ್ರೆಸ್ | ಲಕ್ಷ್ಮೀ ಹೆಬ್ಬಾಳ್ಕರ್ | 4,78,557 |
ಆಪ್ | ಮುತ್ತಪ್ಪ ಅಂಗಡಿ | 8,524 |
ಗೆಲುವಿನ ಅಂತರ | 75,860 |
2019ರ ಚುನಾವಣೆ: ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸುರೇಶ ಅಂಗಡಿ ಅವರು ಬರೋಬ್ಬರಿ 7,56,986 ಮತಗಳನ್ನು ಪಡೆದು ಸತತ ನಾಲ್ಕನೆ ಬಾರಿ ಗೆಲುವಿನ ನಗೆ ಬೀರಿದರೆ, ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಡಾ. ವಿರೂಪಾಕ್ಷ ಸಾಧುನವರ ಅವರು 3,69,944 ಮತಗಳನ್ನು, ಐಎನ್ಡಿಪಿ ಅಭ್ಯರ್ಥಿಯಾಗಿದ್ದ ಗಣೇಶ ದಡ್ಡಿಕರ್ 8150 ಮತಗಳನ್ನು ಪಡೆದು ಸೋಲು ಕಂಡಿದ್ದರು. 3,87,042 ಮತಗಳ ಅಂತರದಿಂದ ಬಿಜೆಪಿ ಅಭ್ಯರ್ಥಿ ಗೆಲುವು ಕಂಡಿದ್ದರು.
ಪಕ್ಷ | ಅಭ್ಯರ್ಥಿಗಳು | ಪಡೆದ ಮತಗಳು |
---|---|---|
ಬಿಜೆಪಿ | ಸುರೇಶ ಅಂಗಡಿ | 7,56,986 |
ಕಾಂಗ್ರೆಸ್ | ಡಾ. ವಿರೂಪಾಕ್ಷ ಸಾಧುನವರ | 3,69,944 |
ಐಎನ್ಡಿಪಿ | ಗಣೇಶ ದಡ್ಡಿಕರ್ | 8150 |
ಗೆಲುವಿನ ಅಂತರ | 3,87,042 |
2021(ಉಪ ಚುನಾವಣೆ) ಈ ಉಪಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧೆ ಮಾಡಿದ್ದ ಸುರೇಶ ಅಂಗಡಿ ಅವರ ಪತ್ನಿ ಮಂಗಲ ಸುರೇಶ ಅಂಗಡಿ ಅವರು 4,40,327 ಮತಗಳನ್ನು ಸಂಸತ್ ಪ್ರವೇಶ ಮಾಡಿದರು. ಕಾಂಗ್ರೆಸ್‌ನಿಂದ ಕಣಕ್ಕಿಳಿದಿದ್ದ ಸತೀಶ ಜಾರಕಿಹೊಳಿ ಅವರು 4,35,087 ಮತಗಳನ್ನು ಪಡೆದರೆ, ಪಕ್ಷೇತರ(ಎಂಇಸ್)ದಿಂದ ಸ್ಪರ್ಧಿಸಿದ್ದ ಶುಭಂ ಶೆಳ್ಕೆ ಅವರು 1,17,174 ಮತಗಳನ್ನು ಪಡೆದರು. ಗೆಲುವಿನ ಅಂತರ 5240.
ಪಕ್ಷ | ಅಭ್ಯರ್ಥಿಗಳು | ಪಡೆದ ಮತಗಳು |
---|---|---|
ಬಿಜೆಪಿ | ಮಂಗಲ ಸುರೇಶ ಅಂಗಡಿ | 4,40,327 |
ಕಾಂಗ್ರೆಸ್ | ಸತೀಶ ಜಾರಕಿಹೊಳಿ | 4,35,087 |
ಪಕ್ಷೇತರ(ಎಂಇಸ್) | ಶುಭಂ ಶೆಳ್ಕೆ | 1,17,174 |
ಗೆಲುವಿನ ಅಂತರ | 5240 |
ಮೂವರಿಗೆ ಮಾತ್ರ ಮಂತ್ರಿ ಸ್ಥಾನ: ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಸಂಪುಟದಲ್ಲಿ ಬಿ.ಎನ್.ದಾತಾರ್ ಕೇಂದ್ರ ಗೃಹ ವ್ಯವಹಾರಗಳ ಇಲಾಖೆ ರಾಜ್ಯ ಖಾತೆ ಸಚಿವರಾಗಿದ್ದರು. ಬಾಬಾಗೌಡ ಪಾಟೀಲ, ಅಟಲ್ ಬಿಹಾರಿ ವಾಜಪೇಯಿ ಸರ್ಕಾರದಲ್ಲಿ ಕೇಂದ್ರ ಗ್ರಾಮೀಣಾಭಿವೃದ್ಧಿ ಸಚಿವರಾಗಿ ಕೆಲಸ ಮಾಡಿದ್ದಾರೆ. ಇನ್ನು ನರೇಂದ್ರ ಮೋದಿ ಸಂಪುಟದಲ್ಲಿ ಸುರೇಶ ಅಂಗಡಿ ಕೇಂದ್ರ ರೈಲ್ವೆ ರಾಜ್ಯ ಖಾತೆ ಸಚಿವರಾಗಿದ್ದರು.
19ನೇ ಸಾರ್ವತ್ರಿಕ ಚುನಾವಣೆಯಲ್ಲಿ ಬೆಳಗಾವಿ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಮಾಜಿ ಸಿಎಂ ಜಗದೀಶ ಶೆಟ್ಟರ್ ಕಣಕ್ಕಿಳಿದರೆ, ಕಾಂಗ್ರೆಸ್‌ನಿಂದ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಪುತ್ರ ಮೃಣಾಲ್ಗೆ ಟಿಕೆಟ್ ನೀಡಿದೆ.