ಮಂಗಳೂರು: ಸಹಾಯದ ನೆಪದಲ್ಲಿ ಜ್ಯೂಸ್‌ನಲ್ಲಿ ಮತ್ತು ಬರುವ ಔಷಧ ಬೆರೆಸಿ ಯುವಕನೋರ್ವ ತನ್ನ ಮೇಲೆ ಅತ್ಯಾಚಾರ ನಡೆಸಿದ್ದಲ್ಲದೇ 62 ಸಾವಿರ ರೂ. ಕಳವು ಮಾಡಿದ್ದಾನೆ. ಆತನ ಅಣ್ಣನೂ ಲೈಂಗಿಕ ಕಿರುಕುಳ ನೀಡಿ ಮಾನಭಂಗಕ್ಕೆ ಯತ್ನಿಸಿರುವುದಾಗಿ ಯುವತಿಯೊಬ್ಬಳು ಕದ್ರಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.
ಯುವತಿ ನೀಡಿದ ದೂರಿನ ವಿವರ: ಜು.21ರಂದು ನನ್ನ ಕಾರು ಕದ್ರಿಯಲ್ಲಿ ಕೆಟ್ಟು ಹೋಗಿತ್ತು. ಈ ವೇಳೆ ಅದೇ ರಸ್ತೆಯಲ್ಲಿ ಬರುತ್ತಿದ್ದ ಬೈಕ್ ಸವಾರ ಮುಹಮ್ಮದ್ ಶಫಿನ್ ಎಂಬಾತ ಕಾರನ್ನು ಸರಿಪಡಿಸಿ, ಬಳಿಕ ಅದೇ ಕಾರಿನಲ್ಲಿ ಕೊಡಿಯಾಲಬೈಲಿನ ಅಪಾರ್ಟ್ಮೆಂಟ್ ಒಂದರಲ್ಲಿರುವ ಮನೆಗೆ ನನ್ನನ್ನು ಬಿಟ್ಟು ಬಂದಿದ್ದ. ಈ ವೇಳೆ ಆತ ನನ್ನ ಮೊಬೈಲ್ ನಂಬರ್ ಪಡೆದುಕೊಂಡಿದ್ದ. ಆ.8ರಂದು ನಮ್ಮ ಮನೆಯ ಫ್ರಿಡ್ಜ್ ಕೆಟ್ಟು ಹೋಗಿದ್ದು, ಮನೆಯಲ್ಲಿ ಒಬ್ಬಳೇ ಇರುವುದರಿಂದ ಸಹಾಯಕ್ಕಾಗಿ ಶಫಿನ್‌ಗೆ ಕರೆಮಾಡಿದ್ದೆ.
ಆತ ತನ್ನ ಪರಿಚಿತ ರಿಪೇರಿಯವನನ್ನು ಮನೆಗೆ ಕರೆದುಕೊಂಡು ಬಂದು ಫ್ರಿಡ್ಜ್ ರಿಪೇರಿ ಮಾಡಿಸಿದ್ದ. ಬಳಿಕ ಎಲೆಕ್ಟ್ರಿಶಿಯನ್‌ನನ್ನು ಬಿಟ್ಟು ಬರುವುದಾಗಿ, ಅಲ್ಲಿಯವರೆಗೂ ಫ್ರಿಡ್ಜ್ ಆನ್ ಮಾಡದಂತೆ ಸೂಚಿಸಿದ್ದ. ಕೆಲವು ಹೊತ್ತಿನ ಬಳಿಕ ಶಫಿನ್ ವಾಪಸ್ ಬಂದಿದ್ದು, ಈ ವೇಳೆ ಹಣ್ಣು ಹಾಗೂ ಜ್ಯೂಸ್ ತಂದಿದ್ದ. ಜ್ಯೂಸ್ ಕುಡಿದ ನಾನು ನಿದ್ದೆಗೆ ಜಾರಿದೆ. ಎಚ್ಚರಗೊಂಡಾಗ ಅನುಮಾನಗೊಂಡು ವಿಚಾರಿಸಿದಾಗ ಆತ ದೈಹಿಕ ಸಂಪರ್ಕ ನಡೆಸಿರುವುದಾಗಿ ತಿಳಿಸಿದ್ದಾನೆ. ಜೊತೆಗೆ ಮುಂದೆಯೂ ಸಹಕರಿಸಬೇಕು. ಇಲ್ಲದಿದ್ದರೆ ಜಾಲತಾಣದಲ್ಲಿ ಈಗಾಗಲೇ ಮಾಡಿದ ವೀಡಿಯೋವನ್ನು ಹಾಕುವುದಾಗಿ ಬೆದರಿಕೆ ಹಾಕಿದ್ದ. ಜೊತೆಗೆ ನನ್ನ ಕಾರನ್ನೂ ತನ್ನಲ್ಲೇ ಇಟ್ಟುಕೊಂಡಿದ್ದ.
ಈ ನಡುವೆ ನಮ್ಮ ಮನೆಯವರು ಕಾರು ಕೇಳಿದ್ದರು. ಆತನಿಂದ ಕಾರನ್ನು ಪಡೆದುಕೊಳ್ಳಬೇಕೆಂದು ಅ.25ರಂದು ಆತನ ವಿಳಾಸ ಹುಡುಕಿಕೊಂಡು ಆತ ವಾಸವಿದ್ದ ಅಪಾರ್ಟ್‌ಮೆಂಟ್‌ಗೆ ಹೋದಾಗ ಕಾರು ಪಾರ್ಕಿಂಗ್ ಸ್ಥಳದಲ್ಲಿತ್ತು. ವಾಚ್‌ಮನ್ ಬಳಿ ಮನೆಯ ವಿಳಾಸ ಪಡೆದು ಹೋಗಿ ಆತನ ತಾಯಿಯಲ್ಲಿ ಕಾರು ವಾಪಸ್ ನೀಡುವಂತೆ ವಿನಂತಿಸಿದಾಗ ಅಲ್ಲಿದ್ದ ಶಫಿನ್‌ನ ಅಣ್ಣ ಮುಹಮ್ಮದ್ ಶಿಯಾಬ್ ನನ್ನ ಮೇಲೆ ಅತ್ಯಾಚಾರಕ್ಕೆ ಯತ್ನಿಸಿದ್ದ. ಕೊಲೆ ಬೆದರಿಕೆಯನ್ನೂ ಹಾಕಿದ್ದ. ಹಾಗಾಗಿ ಆತನಿಂದ ತಪ್ಪಿಸಿಕೊಂಡು ಮನೆಗೆ ಬಂದೆ. ಅ.27ರಂದು ರಾತ್ರಿ 9 ಗಂಟೆ ವೇಳೆ ಶಫೀನ್ ಅಕ್ರಮವಾಗಿ ತಮ್ಮ ಮನೆಗೆ ಪ್ರವೇಶಿಸಿ, ಬ್ಯಾಗ್ನಲ್ಲಿದ್ದ 62 ಸಾವಿರ ರೂ. ಹಣ ಕಳವು ಮಾಡಿಕೊಂಡು ಹೋಗಿದ್ದಾನೆ ಯುವತಿ ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಯುವತಿ ದೂರಿನಲ್ಲಿ ಆಗ್ರಹಿಸಿದ್ದಾರೆ. ಪ್ರಕರಣ ದಾಖಲಿಸಿದ ಬಳಿಕ ಶಿಯಾಬ್ ಪತ್ನಿಯೂ ಕರೆ ಮಾಡಿ ಬೆದರಿಕೆ ಹಾಕಿದ್ದು, ಆಕೆಯ ವಿರುದ್ಧವೂ ಕ್ರಮ ಕೈಗೊಳ್ಳುವಂತೆ ಯುವತಿ ಇನ್ನೊಂದು ದೂರು ನೀಡಿದ್ದು, ಕದ್ರಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಡೇಟಿಂಗ್ ಆ್ಯಪ್‌ನಲ್ಲಿ ಪರಿಚಯವಾದ ಯುವಕನಿಂದ ಅತ್ಯಾಚಾರ, ಗರ್ಭಪಾತ ಆರೋಪ: ಬೆಂಗಳೂರಲ್ಲಿ ಯುವತಿ ದೂರು