ಬೆಂಗಳೂರು: ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿಯವರ ವಿರುದ್ಧ ನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್ ಅವರು ದೂರು ನೀಡಿದ್ದಾರೆ ಎಂದು ವಿಧಾನ ಪರಿಷತ್ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಅವರು ತಿಳಿಸಿದರು.
ಇಂದು ದೂರು ನೀಡಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ತಕ್ಷಣ ಎಫ್‍ಐಆರ್ ದಾಖಲಿಸಲು ಪೊಲೀಸರನ್ನು ಕೋರಿದ್ದೇವೆ ಎಂದು ಹೇಳಿದರು.
ಇದರಲ್ಲಿ ಜಾಮೀನುರಹಿತ ವಾರಂಟ್ ಇದೆ. ಆದ್ದರಿಂದ ಅವರ ಮೇಲೆ ಕ್ರಮ ಜರುಗಿಸಬೇಕಿದೆ ಎಂದು ಒತ್ತಾಯಿಸಿದರು. ಭಾರತದ ಬಗ್ಗೆ ಹೊರದೇಶದಲ್ಲಿ ಕುಳಿತು ಅಪಮಾನಕರ ಹೇಳಿಕೆ ನೀಡಿದ್ದಾರೆ. ಸಮುದಾಯಗಳನ್ನು ನಿಂದಿಸಿದ್ದಾರೆ. ಅವರು ಪ್ರಬುದ್ಧರಾಗಿದ್ದಾರೆಂದು ಭಾವಿಸಿದ್ದೆವು. ಪ್ರಬುದ್ಧತೆ ಪಡೆದಿಲ್ಲವೆಂದು ಈಗ ಗೊತ್ತಾಗುತ್ತಿದೆ ಎಂದರು.
1977-78ರಲ್ಲಿ ಮೊರಾರ್ಜಿ ದೇಸಾಯಿಯವರ ಸರ್ಕಾರ ಇದ್ದಾಗ ರಾಹುಲ್ ಅವರ ಅಜ್ಜಿ ಇಂದಿರಾ ಗಾಂಧಿಯವರನ್ನು ಬಂಧಿಸಿದ್ದರು. ಮತ್ತೆ ಚುನಾವಣೆ ನಡೆದಾಗ ಇಂದಿರಾ ಅವರು ಮತ್ತೆ ಪ್ರಧಾನಿಯಾದರು. ಅಮೆರಿಕಕ್ಕೆ ಹೋದಾಗ ಅಲ್ಲಿನ ಪತ್ರಕರ್ತರು ಇಂದಿರಾ ಅವರನ್ನು ನೀವು ಎಲ್ಲರನ್ನು ತುರ್ತು ಪರಿಸ್ಥಿತಿ ವೇಳೆ ಜೈಲಿಗೆ ಕಳಿಸಿದ್ದೀರಿ. ಈಗ ನಿಮ್ಮ ಜೈಲಿನ ಅನುಭವ ಹೇಳಿ ಎಂದು ಪ್ರಶ್ನಿಸಿದ್ದರು. ಆಗ ಅವರ ಅಜ್ಜಿ, ಅದು ನನ್ನ ದೇಶದ ವಿಚಾರ; ಹೊರಗಡೆ ಅದನ್ನು ನಾನು ಪ್ರಸ್ತಾಪ ಮಾಡುವುದಿಲ್ಲ ಎಂದಿದ್ದರು ಎಂದು ಗಮನ ಸೆಳೆದರು. ‘ರಾಹುಲ್ ಅವರೇ, ನಿಮ್ಮ ಅಜ್ಜಿಯನ್ನು ನೋಡಿ ನೀವು ಕಲಿತಿಲ್ಲ ಅಲ್ಲವೇ? ಇನ್ನೇನು ಕಲೀತೀರಿ ನೀವು’ ಎಂದು ಪ್ರಶ್ನೆಯನ್ನು ಮುಂದಿಟ್ಟರು.
ಮೋದಿಯವರ ಕುರಿತು ಹಗುರವಾಗಿ ಹೊರದೇಶದಲ್ಲಿ ಮಾತನಾಡುತ್ತೀರಿ. ನೀವೇನೇ ಮಾತನಾಡಬೇಕಿದ್ದರೂ ನಮ್ಮ ದೇಶದಲ್ಲಿ ಮಾತನಾಡಿ ಎಂದರಲ್ಲದೆ, ಅಂಥ ಕೆಟ್ಟ ಪರಿಸ್ಥಿತಿಯನ್ನು ಕಾಂಗ್ರೆಸ್ಸಿನಿಂದ ಮತ್ತು ರಾಹುಲ್ ಗಾಂಧಿಯಿಂದ ಈ ದೇಶವಾಸಿಗಳು ಅನುಭವಿಸಬೇಕಾಗಿದೆ ಎಂದು ತಿಳಿಸಿದರು.
Bengaluru | Karnataka BJP files a formal complaint with High Ground PS Police Inspector regarding Congress MP and Lok Sabha LoP Rahul Gandhi " for making divisive and provocative remarks targeting the sc, st and obc communities, endangering india's internal security, sovereignty,… pic.twitter.com/sWw9kLU37C
— ANI (@ANI) September 21, 2024
ಬಿಜಾಪುರ (ವಿಜಯಪುರ), ಬೆಳಗಾವಿ, ಬಾಗಲಕೋಟೆಯಲ್ಲೂ ಇವತ್ತು ದೂರುಗಳನ್ನು ಕೊಡಲಾಗಿದೆ. ಬೇರೆ ರಾಜ್ಯಗಳಲ್ಲೂ ಕೂಡ ದೂರುಗಳು ದಾಖಲಾಗಿವೆ. ಯಾವುದೇ ಸಬೂಬು ನೀಡದೆ ಎಫ್‍ಐಆರ್ ಮಾಡಬೇಕು ಎಂದು ಆಗ್ರಹಿಸಿದರು.
ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. ಹಿಂದೂಗಳ ಮೇಲೆ ದಬ್ಬಾಳಿಕೆ ನಡೆಯುತ್ತಿದೆ. ಸಂವಿಧಾನ ರಕ್ಷಕರು ತಾವೇ ಎನ್ನುತ್ತಾರೆ. ಸಂವಿಧಾನಕ್ಕೆ ಅಪಮಾನ ಮಾಡುತ್ತಾರೆ. ಭ್ರಷ್ಟಾಚಾರಗಳನ್ನು ಮುಚ್ಚಿಕೊಳ್ಳುವ ಕಾರಣಕ್ಕಾಗಿ ರಾಜ್ಯದಲ್ಲಿ ಅಭಿವೃದ್ಧಿ ಕಾರ್ಯಗಳು ಸಂಪೂರ್ಣ ಸ್ಥಗಿತವಾಗಿವೆ ಎಂದು ಅವರು ಟೀಕಿಸಿದರು.
Bengaluru: BJP leader and former IPS & former Bengaluru Police Commissioner, Bhaskar Rao says, " today, the bjp has filed a criminal complaint against lop rahul gandhi, clearly spelling out offences of bringing divisiveness among communities, through his remarks against obcs and… https://t.co/MNjL1RPPak pic.twitter.com/KiZo9Ak2Qi
— ANI (@ANI) September 21, 2024
ವಿಧಾನಪರಿಷತ್ ಸದಸ್ಯ ಎನ್. ರವಿಕುಮಾರ್, ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ಪಕ್ಷದ ಮುಖಂಡ ಭಾಸ್ಕರ್ ರಾವ್, ಬಿಜೆಪಿ ಎಸ್‍ಸಿ ಮೋರ್ಚಾ ರಾಜ್ಯ ಉಪಾಧ್ಯಕ್ಷ ಹೂಡಿ ಮಂಜುನಾಥ್, ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಕಾನೂನು ಪ್ರಕೋಷ್ಠದ ರಾಜ್ಯ ಸಂಚಾಲಕ ವಸಂತ್ ಕುಮಾರ್ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಇದನ್ನೂ ಓದಿ: ರಾಹುಲ್ ಗಾಂಧಿ ವಿರುದ್ಧ ಅವಹೇಳನಕಾರಿ ಹೇಳಿಕೆ ಆರೋಪ: ಕೇಂದ್ರ ಸಚಿವರ ವಿರುದ್ಧ FIR ದಾಖಲು - FIR Against Union Minister