ಯಲಹಂಕ: ಪುಲ್ವಾಮಾ ಭಯೋತ್ಪಾದಕರ ದಾಳಿಯಲ್ಲಿ ಮಡಿದ ಹುತಾತ್ಮ ವೀರಯೋಧರಿಗೆ ಇಂದು ಸಿಆರ್‌ಪಿಎಫ್ ಕ್ಯಾಂಪಸ್‌ನಲ್ಲಿ ನಮನ ಸಲ್ಲಿಸಲಾಯಿತು. ದೇಶದ ಆಂತರಿಕೆ ಮತ್ತು ಬಾಹ್ಯ ರಕ್ಷಣೆಯ ಸಮಯದಲ್ಲಿ 30 ಸಾವಿರಕ್ಕೂ ಹೆಚ್ಚು ಯೋಧರು ಹುತಾತ್ಮರಾಗಿದ್ದು, ವೀರಯೋಧರಿಗೆ ನಮನ ಸಲ್ಲಿಸುವ ಅಂಗವಾಗಿ ಸ್ಮರಣಾಂಜಲಿ ಕಾರ್ಯಕ್ರಮವನ್ನು ಮಾಜಿ ಯೋಧರು ಹಮ್ಮಿಕೊಂಡಿದ್ದರು. ಇದೇ ವೇಳೆ ಅವರು ಪ್ರತ್ಯೇಕ ಅರೆ ಸೇನಾ ಕಲ್ಯಾಣ ಮಂಡಳಿ ರಚಿಸುವಂತೆ ಸರ್ಕಾರಕ್ಕೆ ಮನವಿ ಮಾಡಿದರು.
ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿಯೋಧರ ಕ್ಷೇಮಾಭಿವೃದ್ಧಿ ಸಂಘದ ಗೌರವಾಧ್ಯಕ್ಷರಾದ ನಿವೃತ್ತ ಮಹಾನಿರೀಕ್ಷಕ ಕೆ.ಅರ್ಕೇಶ್ ಮಾತನಾಡಿ, ದೇಶದಲ್ಲಿ 10 ಲಕ್ಷಕ್ಕೂ ಹೆಚ್ಚು ಜನರು ಅರೆಸೇನಾ ಪಡೆಯ ಯೋಧರಿದ್ದಾರೆ. ಸಾಮಾನ್ಯವಾಗಿ ಜನರು ತಿಳಿದುಕೊಂಡಿರುವಂತೆ ಅರೆಸೇನಾ ಪಡೆಯ ಯೋಧರನ್ನು ಸೈನಿಕರಂದು ತಿಳಿದಿದ್ದಾರೆ. ಆದರೆ ಅರಸೇನಾ ಪಡೆಗಳು ಗೃಹ ಸಚಿವಾಲಯದ ಅಧೀನದಲ್ಲಿವೆ. ಸೈನಿಕರಿಗೆ ಸಿಗುವ ಸವಲತ್ತುಗಳು ಅರೆಸೇನಾ ಪಡೆಯ ಯೋಧರಿಗೆ ಸಿಗುತ್ತಿಲ್ಲ. ಅರೆಸೇನಾ ಪಡೆಯ ಮಾಜಿ ಯೋಧರ ಸಮಸ್ಯೆಗಳ ಪರಿಹಾರಕ್ಕಾಗಿ ಪ್ರತ್ಯೇಕ ಅರೆಸೇನಾ ಕಲ್ಯಾಣ ಮಂಡಳಿ ರಚಿಸುವಂತೆ ಅವರು ಆಗ್ರಹಿಸಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭಾಗವಹಿಸಿ ಅರೆಸೇನಾ ಪಡೆಯ ಮಾಜಿ ಯೋಧರ ಸಮಸ್ಯೆಗಳನ್ನು ಅಲಿಸಿದರು. ನಂತರ ಮಾತನಾಡಿ, ದೇಶಕ್ಕೆ ಕೃಷಿಕ, ಸೈನಿಕ, ಶಿಕ್ಷಕ ಆಧಾರಸ್ತಂಭಗಳು. ದೇಶದ ರಕ್ಷಣೆ ಮಾಡುವಾಗ ಲಕ್ಷಾಂತರ ಯೋಧರು ಪ್ರಾಣ ತೆತ್ತಿದ್ದಾರೆ. ಯಾರ ತ್ಯಾಗವನ್ನೂ ಮರೆಯಬಾರದು. ಈ ಹಿಂದಿನ ಸರ್ಕಾರ ಪ್ರತ್ಯೇಕ ಅರೆಸೇನಾ ಕಲ್ಯಾಣ ಮಂಡಳಿ ರಚನೆ ಮಾಡಿತು. ಆನಂತರ ಬಂದ ಮತ್ತೊಂದು ಸರ್ಕಾರ ಮಂಡಳಿಯನ್ನು ರದ್ದು ಮಾಡಿದೆ. ಮಂಡಳಿಗೆ ಮರುಜೀವ ಕೊಡುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಈ ಕುರಿತು ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುವುದಾಗಿ ಹೇಳಿದರು.
ಕಾರ್ಯಕ್ರಮದಲ್ಲಿ ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಹೆಚ್.ಆರ್.ಸಿಂಗ್, ರಾಷ್ಟ್ರೀಯ ಅಧ್ಯಕ್ಷ ರಾಣಾ, ಕೇಂದ್ರೀಯ ಅರೆಸೇನಾ ಪಡೆಗಳ ಮಾಜಿ ಯೋಧರ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷ ನರಸಿಂಹ ರೆಡ್ಡಿ, ಪ್ರಧಾನ ಕಾರ್ಯದರ್ಶಿ ರಾಜಗೋಪಾಲ್, ಕಾಂಗ್ರೆಸ್ ಮುಖಂಡ ನಿಕೇತ್ ರಾಜ್ ಮೌರ್ಯ ಭಾಗವಹಿಸಿದ್ದರು.
ಇದನ್ನೂಓದಿ: ಲೋಕಸಭೆ: ನಾನು ಟಿಕೆಟ್ ಆಕಾಂಕ್ಷಿಯಲ್ಲ, ವರಿಷ್ಠರ ಸೂಚನೆಯಂತೆ ನಡೆದುಕೊಳ್ಳುವೆ-ಶೆಟ್ಟರ್