ಬೆಂಗಳೂರು: ಖಾಸಗಿ ವಾಹಿನಿಯಲ್ಲಿ ನಡೆದ ಕಾಮಿಡಿ ಶೋನಲ್ಲಿ ಭೋವಿ ಜನಾಂಗವನ್ನು ನಿಂದಿಸಿದ ಆರೋಪ ಸಂಬಂಧ ಎಫ್ಐಆರ್ ದಾಖಲಾದ ಬೆನ್ನಲ್ಲೇ ಹಾಸ್ಯನಟ ಹುಲಿ ಕಾರ್ತಿಕ್ ಸ್ಪಷ್ಟನೆ ನೀಡಿದ್ದಾರೆ.
"ನಾವು ಎಲ್ಲ ಸಮುದಾಯವನ್ನು ನಗಿಸುವ ಕೆಲಸ ಮಾಡುತ್ತೇವೆ. ಯಾವುದೇ ಸಮುದಾಯಕ್ಕೂ ನೋವಾಗುವ ರೀತಿಯಲ್ಲಿ ಮಾತನಾಡಿಲ್ಲ. ಯಾವುದೇ ಜಾತಿ, ಧರ್ಮದ ಬಗ್ಗೆ ಹಾಸ್ಯ ಮಾಡುವುದಕ್ಕೆ ಖಾಸಗಿ ವಾಹಿನಿಯಲ್ಲಿ ಅವಕಾಶ ಇರುವುದಿಲ್ಲ. ಇದಕ್ಕೆ ಸೂಕ್ತ ವ್ಯವಸ್ಥೆಯಿದ್ದು, ಅದರಂತೆ ಸ್ಕ್ರಿಪ್ಟ್ ತಯಾರಾಗಲಿದೆ" ಎಂದರು.
"ಕಾಮಿಡಿ ಸ್ಕಿಟ್‌ನಲ್ಲಿ ನಾನು ಬಳಸಿರುವ ಪದ 'ಹೊಂಡಾ' ಜಾತಿ ಸೂಚಕ ಪದವಲ್ಲ. ತುಕಾಲಿ ಸಂತೋಷ್ ಹೇಳಿದ ಡೈಲಾಗ್‌ಗೆ ಕೌಂಟರ್ ಡೈಲಾಗ್ ಹೇಳುವಾಗ 'ನೀನು ಗುಂಡನಾ? ರೋಡ್ನಲ್ಲಿ ಬಿದ್ದಿರುವ ಹೊಂಡಾ ಇದ್ದಂಗ್ ಇದ್ದೀಯಾ' ಎಂದು ಹೇಳಿದ್ದೇನೆ. ಖಾಸಗಿ ವಾಹಿನಿಯ ಕಾರ್ಯಕ್ರಮದಲ್ಲಿ ಈ ವಾಕ್ಯ ಬಳಕೆ ಮಾಡಿವಾಗ ಸ್ಪಷ್ಟವಾಗಿ ಹೊಂಡಾ ಎಂದು ಬಳಸಿದ್ದೇನೆ. ಆದರೆ, ಮ್ಯೂಸಿಕ್ ಜೊತೆಗೆ ಡೈಲಾಗ್ ಹೇಳುವಾಗ ಹೊಂಡಾ ಪದ ಸಮುದಾಯದ ಹೆಸರಿಸಿರುವಂತೆ ಕೇಳಿಸಿರಬಹುದು" ಎಂದು ಹೇಳಿದ್ದಾರೆ.
"ಯಾವುದೇ ಸಮುದಾಯದ ಬಗ್ಗೆ ಹಾಸ್ಯ ಮಾಡುವ ಉದ್ದೇಶವಿಲ್ಲ. ಮನರಂಜನೆ ನೀಡುವ ಉದ್ದೇಶದಿಂದ ನಟನೆ ಮಾಡುತ್ತಿದ್ದೇವೆ. ಒಂದು ವೇಳೆ ಆ ರೀತಿ ನಿಮಗೆ ಕೇಳಿಸಿದ್ದಲ್ಲಿ ದಯವಿಟ್ಟು ಕ್ಷಮಿಸಿ" ಎಂದು ಹಾಸ್ಯನಟ ಹುಲಿ ಕಾರ್ತೀಕ್ ಸ್ಪಷ್ಟೀಕರಣ ನೀಡಿದ್ದಾರೆ.
ಜಾತಿನಿಂದನೆ ಆರೋಪದಡಿ ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಕಾರ್ತಿಕ್ ಸೇರಿದಂತೆ ವಾಹಿನಿ ಇತರರ ವಿರುದ್ಧ ಎಫ್ಐಆರ್ ದಾಖಲಾಗಿದೆ.
ಇದನ್ನೂ ಓದಿ: ಜಾತಿನಿಂದನೆ ಆರೋಪ: ಕಿರುತೆರೆ ಹಾಸ್ಯ ನಟ ಕಾರ್ತಿಕ್ ವಿರುದ್ಧ ಎಫ್ಐಆರ್